ಜ.5-11: ಉಡುಪಿ ತುಳುಕೂಟದ ಕೆಮ್ತೂರು ತುಳು ನಾಟಕ ಪರ್ಬ
ಉಡುಪಿ, ಜ.2: ತುಳುಕೂಟ ಉಡುಪಿ ವತಿಯಿಂದ 24ನೇ ವರ್ಷದ ಕಸ್ತೂರು ದೊಡ್ಡಣ್ಣ ಶೆಟ್ಟಿ ನೆನಪಿನ ತುಳುನಾಟಕ ಸ್ಪರ್ಧೆಯನ್ನು ಇದೇ ಜನವರಿ 5ರಿಂದ 11ರವರೆಗೆ ಉಡುಪಿ ಎಂ.ಜಿ.ಎಂ. ಕಾಲೇಜಿನ ಮುದ್ದಣ ಮಂಟಪ ದಲ್ಲಿ ಆಯೋಜಿಸಲಾಗಿದೆ ಎಂದು ತುಳುಕೂಟ ಉಡುಪಿ ಅಧ್ಯಕ್ಷ ಬಿ.ಜಯಕರ ಶೆಟ್ಟಿ ಇಂದ್ರಾಳಿ ತಿಳಿಸಿದ್ದಾರೆ.
ಉಡುಪಿ ಪ್ರೆಸ್ ಕ್ಲಬ್‌ನಲ್ಲಿ ಕರೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ, ಮಣಿಪಾಲ ಅಕಾಡೆಮಿ ಆಫ್ ಜನರಲ್ ಎಜುಕೇಶನ್, ಎಂಜಿಎಂ ಕಾಲೇಜು ಉಡುಪಿ, ಅಖಿಲ ಭಾರತ ತುಳುಕೂಟ ಕುಡ್ಲ ಹಾಗೂ ಕನ್ನಡ ಮತ್ತು ಸಂಸೃತಿ ಇಲಾಕೆಗಳ ಸಹಯೋಗದೊಂದಿಗೆ ನಡೆಯುವ ಈ ನಾಟಕ ಸ್ಪರ್ಧೆಯಲ್ಲಿ ದೇಶದ ಯಾವುದೇ ಪ್ರದೇಶದ ಯೋಗ್ಯ ತುಳು ಹವ್ಯಾಸಿ ನಾಟಕ ತಂಡಗಳಿಗೆ ಸ್ಪರ್ಧೆಯಲ್ಲಿ ಭಾಗವಹಿಸಲು ಅವಕಾಶ ಕಲ್ಪಿಸಲಾಗಿದೆ ಎಂದರು.
ಈ ಬಾರಿ ಒಟ್ಟು 14 ನಾಟಕಗಳು ಸ್ಪರ್ಧೆಗೆ ಬಂದಿದ್ದು, ಇವುಗಳಲ್ಲಿ ವಿವಿಧ ಪ್ರದೇಶಗಳ 7 ಪ್ರಸಿದ್ದ ತಂಡಗಳಿಗೆ ಅವಕಾಶ ನೀಡಲಾಗಿದೆ. ನಾಟಕ ಸ್ಪರ್ಧೆಯನ್ನು ಜ.5ರಂದು ಸಂಜೆ 5:00 ಗಂಟೆಗೆ ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಅಧ್ಯಕ್ಷ ತಾರಾನಾಥ ಗಟ್ಟಿ ಕಾಪಿಕಾಡ್ ಅವರ ಅಧ್ಯಕ್ಷತೆಯಲ್ಲಿ, ಉದ್ಯಮಿ ಕೆ.ಎಂ.ಶೆಟ್ಟಿ ಉದ್ಘಾಟಿಸಲಿ ದ್ದಾರೆ. ಮಾಜಿ ಸಚಿವ ಪ್ರಮೋದ್ ಮಧ್ವರಾಜ್, ಎಂಜಿಎಂ ಕಾಲೇಜಿನ ಪ್ರಾಂಶುಪಾಲರಾದ ಪ್ರೊ.ವನಿತಾ ಮಯ್ಯ ಮುಖ್ಯ ಅತಿಥಿಗಳಾಗಿ ಭಾಗವಹಿಸುವರು ಎಂದರು.
ಪ್ರತಿದಿನ 6:30ರಿಂದ ಪ್ರದರ್ಶನಗೊಳ್ಳುವ ನಾಟಕಗಳ ವಿವರ: ಮೊದಲ ದಿನವಾದ ಜ.5ರಂದು ಕಲಾಮಂದಿರ ಉಡುಪಿ ಇವರಿಂದ ‘ಪಿಲಿ’ (ನಿರ್ದೇಶನ-ದಿನೇಶ್ ಆಚಾರ್ಯ ಸುಬ್ರಹ್ಮಣ್ಯ ನಗರ), ಜ.6ರಂದು ರಂಗ ಮಿಲನ, ಮುಂಬಯಿ ಇವರಿಂದ ‘ನಾಗ ಸಂಪಿಗೆ’ (ಮನೋಹರ ಶೆಟ್ಟಿ ನಂದಳಿಕೆ) ನಾಟಕ, ಜ.7ರಂದು ಶ್ರೀ ವಿಷ್ಣು ಕಲಾವಿರ್ದೆ ಮದ್ದಡ್ಡ ಇವರಿಂದ ‘ಕಾಶಿ ತೀರ್ಥ’ (ಅಂತ್ ಎಸ್. ಇರ್ವತ್ರಾಯ ತಂಗೋಯಿ) ನಾಟಕ ಪ್ರದರ್ಶನಗೊಳ್ಳಲಿದೆ.
ಜ.8ರಂದು ಕರಾವಳಿ ಕಲಾವಿದರು ಮಲ್ಪೆ ಇವರಿಂದ ‘ಮುಗಿಯಂದಿ ಕಥೆ’ (ನೂತನ್‌ಕುಮಾರ್ ಕೊಡಂಕೂರು) ನಾಟಕ, ಜ.9ರಂದು ಭೂಮಿಗೀತ ಸಾಂಸ್ಕೃತಿಕ ವೇದಿಕೆ ಪಟ್ಟ ಇವರಿಂದ ‘ನೆಲ ನೀರ್‌ದ ದುನಿಪು’ (ಸಂತೋಷ್ ನಾಯಕ್ ಪಟ್ಲ) ನಾಟಕ, ಜ.10ರಂದು ಸುಮನಸಾ ಕೊಡವೂರು ಇವರಿಂದ ‘ಯೇಸ’ (ವಿದ್ದು ಉಚ್ಚಿಲ) ನಾಟಕ ಹಾಗೂ ಜ.11ರಂದು ಸಂಗಮ ಕಲಾವಿದೆರ್ ಮಣಿಪಾಲ ಇವರಿಂದ ‘ಮಾಯೊಕದ ಮಣ್ಣಕರ’ (ರಮೇಶ್ ಬೆಣಕಲ್) ನಾಟಕ ಪ್ರದರ್ಶನಗೊಳ್ಳಲಿದೆ.
ವಿಜೇತ ತಂಡಗಳಿಗೆ ಪ್ರಥಮ, ದ್ವಿತೀಯ, ತೃತೀಯ ಬಹುಮಾನ ಗಳೊಂದಿಗೆ ಕ್ರಮವಾಗಿ 20,000, 15,000, 10,000ರೂ. ನಗದು ಬಹುಮಾನ ನೀಡಲಾಗುವುದು. ಅಲ್ಲದೇ ಉತ್ತಮ ನಿರ್ದೇಶನ, ಸಂಗೀತ, ರಂಗವಿನ್ಯಾಸ, ಬೆಳಕು, ನಟ, ನಟಿ ವಿಭಾಗಗಳಲ್ಲಿ ಪ್ರಥಮ 1,000ರೂ. ಮತ್ತು ದ್ವಿತೀಯ, ತೃತೀಯ ಬಹುಮಾನ ಕೊಡಲಾಗು ವುದು. ಸ್ಪರ್ಧೆಗೆ ಆಯ್ಕೆಯಾದ ರಾಜ್ಯದೊಳಗಿನ ತಂಡಗಳಿಗೆ 5,000ರೂ. ಹಾಗೂ ಹೊರ ರಾಜ್ಯದ ತಂಡಗಳಿಗೆ 10,000ರೂ. ನೀಡಲಾಗುತ್ತದೆ ಎಂದು ಜಯಕರ ಶೆಟ್ಟಿ ಇಂದ್ರಾಳಿ ತಿಳಿಸಿದರು. ಪತ್ರಿಕಾಗೋಷ್ಠಿಯಲ್ಲಿ ತುಳುಕೂಟದ ಉಪಾಧ್ಯಕ್ಷ ರಾದ ಭುವನಪ್ರಸಾದ್ ಹೆಗ್ಡೆ, ವಿ.ಕೆ.ಯಾದವ್, ಕಾರ್ಯದರ್ಶಿ ಗಂಗಾಧರ ಕಿದಿಯೂರು, ಕೆಮ್ತೂರು ತುಳು ನಾಟಕ ಪರ್ಬದ ಸಂಚಾಲಕ ಪ್ರಭಾಕರ ಭಂಡಾರಿ ಉಪಸ್ಥಿತರಿದ್ದರು.