ಉಡುಪಿ, ನ.16: ಹಿಂದಿನ ಸರಕಾರಗಳು ಸ್ಥಾಪಿಸಿದ ಸಂಸ್ಥೆಗಳು, ಉದ್ದಿಮೆಗಳನ್ನು ಮಾರಾಟ ಮಾಡಿರುವ ಬಿಜೆಪಿ ಸರಕಾರ ಯುವ ಜನರ ಉದ್ಯೋಗ ಕಸಿದುಕೊಂಡಿದೆ. ಕೋಟ್ಯಾಂತರ ಉದ್ಯೋಗ ಸೃಷ್ಟಿಸುವುದಾಗಿ ಸುಳ್ಳು ಭರವಸೆ ನೀಡಿದ್ದ ಬಿಜೆಪಿಯವರು ಈ ಬಗ್ಗೆ ಸಾರ್ವಜನಿಕ ಚರ್ಚೆಗೆ ಬರಲಿ ಎಂದು ಮಾಜಿ ಸಚಿವ ಕೆ. ಜಯಪ್ರಕಾಶ್ ಶೆಟ್ಟಿ ಸವಾಲು ಹಾಕಿದ್ದಾರೆ.

ಅಲೆವೂರಿನ ನೆಹರು ಕ್ರೀಡಾಂಗಣದಲ್ಲಿ ನಡೆದ ಅಲೆವೂರು ಗ್ರಾಮ ಪಂಚಾಯತ್ ವ್ಯಾಪ್ತಿಯ ಸರಕಾರದ ಪಂಚ ಗ್ಯಾರಂಟಿ ಯೋಜನೆಗಳ ಫಲಾನುಭವಿಗಳ ಸಮಾವೇಶ ಹಾಗೂ ಗ್ರಾಮೀಣ ಕಾಂಗ್ರೆಸ್ ಸಮಿತಿ ಅಧ್ಯಕ್ಷರು ಹಾಗೂ ಪದಾಧಿಕಾರಿಗಳ ಪದಗ್ರಹಣ ಸಮಾರಂಭವನ್ನು ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು.

ಉಡುಪಿ ಜಿಲ್ಲೆಯಲ್ಲಿ ನಾವು ಚುನಾವಣೆಯಲ್ಲಿ ಮಾತ್ರ ಸೋತಿದ್ದು, ಜನರ ಕೆಲಸ ಮಾಡುವುದನ್ನು ನಿಲ್ಲಿಸಿಲ್ಲ. ಕಾಂಗ್ರೆಸ್ ಭರವಸೆ ನೀಡಿದ್ದ ಪಂಚ ಗ್ಯಾರಂಟಿ ಜಾರಿ ಆದರೂ, ಜನಧನ್ ಯೋಜನೆಯಡಿ ಕೊಡುತ್ತೇನೆ ಎಂದು ಬಿಜೆಪಿಯವರು ಹೇಳಿದ ಯಾವ ಅನುದಾನವನ್ನೂ ಈವರೆಗೆ ಕೊಟ್ಟಿಲ್ಲ. ಎಸ್.ಐ.ಆರ್. ಮೂಲಕ ರದ್ದು ಮಾಡಲಾದ ಮತಗಳನ್ನು ಮತ್ತೆ ಸೇರಿಸಲು ಚುನಾವಣಾ ಆಯೋಗ ಆದೇಶ ಮಾಡಿರುವುದು ತಪ್ಪು ಒಪ್ಪಿಕೊಂಡಂತೆ ಎಂದು ಅವರು ತಿಳಿಸಿದರು.

ಮಾಜಿ ಸಚಿವ ವಿನಯ್ ಕುಮಾರ್ ಸೊರಕೆ ಮಾತನಾಡಿ, ಮಹಿಳೆಯರು, ಹಿಂದುಳಿದವರು ಹಾಗೂ ದಲಿತರಿಗೆ ಏನು ಕೊಟ್ಟರೂ ಅಪಪ್ರಚಾರ, ಬಿಟ್ಟಿ ಗ್ಯಾರಂಟಿ ಎಂದು ಪ್ರಧಾನಿ ಮೋದಿಯಾದಿಯಾಗಿ ಎಲ್ಲಾ ಬಿಜೆಪಿಯವರು ಅವಹೇಳನ ಮಾಡಿದ್ದು, ಈ ಬಗ್ಗೆ ಬಿಜೆಪಿ ಮತದಾರರಲ್ಲಿ ಕ್ಷಮೆ ಕೇಳಬೇಕು ಎಂದು ಹೇಳಿದರು.

ಕೆಪಿಸಿಸಿ ವಕ್ತಾರ ಸುಧೀರ್ ಕುಮಾರ್ ಮರೋಳಿ ಮಾತನಾಡಿ ಕಾಂಗ್ರೆಸ್ ಪಕ್ಷ ಪಂಚ ಗ್ಯಾರಂಟಿ ನೀಡಿದರೆ, ಕೇಂದ್ರದ ಬಿಜೆಪಿ ಆಡಳಿತಕ್ಕೆ ಓಟು ಗ್ಯಾರಂಟಿ’ ಕೊಡಲೂ ಸಾಧ್ಯವಾಗಿಲ್ಲ ಎಂದು ವ್ಯಂಗ್ಯವಾಡಿದರು.

ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಕಿಶನ್ ಹೆಗ್ಡೆ ಕೊಳ್ಕೆಬೈಲ್, ಜಿಲ್ಲಾ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಜ್ಯೋತಿ ಹೆಬ್ಬಾರ್, ಮುಖಂಡರಾದ ರಮೇಶ್ ಕಾಂಚನ್, ಶಾಂತಾ ರೈ, ದಿವಾಕರ್ ಕುಂದರ್, ನಾಗೇಶ್ ಕುಮಾರ್ ಉದ್ಯಾವರ, ಪುಷ್ಪಾ ಅಂಚನ್, ಯತೀಶ್ ಕುಮಾರ್, ಅಮೃತಾ ಉಮೇಶ್ ಪೂಜಾರಿ, ದಿನಕರ ಶೆಟ್ಟಿ ನಿಟ್ಟೆ, ಡಾ.ಸಂತೋಷ್ ಕುರ್ಮಾ ಭೈರಂಪಳ್ಳಿ, ಶಾಮಲಾ ಸುಧಾಕರ್, ಆನಂದ ಕೊರಂಗ್ರಪಾಡಿ ಮತ್ತಿತರರು ಉಪಸ್ಥಿತರಿದ್ದರು.

ಗ್ರಾಮೀಣ ಕಾಂಗ್ರೆಸ್ ಸಮಿತಿ ನೂತನ ಅಧ್ಯಕ್ಷ ಅಶೋಕ್ ಶೇರಿಗಾರ್ ನಿರ್ಗಮನ ಅಧ್ಯಕ್ಷ ಸುಧಾಕರ ಪೂಜಾರಿ ಅವರಿಂದ ಕಾಂಗ್ರೆಸ್ ಧ್ವಜ ಪಡೆಯುವ ಮೂಲಕ ಅಧಿಕಾರ ಸ್ವೀಕರಿಸಿದರು.

ಇದೆ ಸಂದರ್ಭ ಕಾಂಗ್ರೆಸ್ ಬೆಂಬಲಿತ ಮಾಜಿ ಗ್ರಾಮ ಪಂಚಾಯತ್ ಸದಸ್ಯರುಗಳಿಗೆ, ಮೆಸ್ಕಾಂ ಸಿಬ್ಬಂದಿಗಳಿಗೆ, ಆಶಾ ಹಾಗೂ ಅಂಗನವಾಡಿ ಕಾರ್ಯಕರ್ತರಿಗೆ, ಬಿಎಲ್‌ಒಗಳಿಗೆ ಮತ್ತು ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ ಸಾಧಕರುಗಳಿಗೆ ಕಾಂಗ್ರೆಸ್ ರತ್ನಮತ್ತು ಸೇವಾ ರತ್ನ’ ಪ್ರಶಸ್ತಿ ನೀಡಿ ಗೌರವಿಸಲಾಯಿತು.

ಅಲೆವೂರು ಗ್ರಾಪಂ ಮಾಜಿ ಅಧ್ಯಕ್ಷ ಅಲೆವೂರು ಹರೀಶ್ ಕಿಣಿ ಸ್ವಾಗತಿಸಿದರು. ಕುಸುಮಾ ಕಾಮತ್ ಕರ್ವಾಲು ತಾವು ರಚಿಸಿದ ಪಂಚ ಗ್ಯಾರಂಟಿ ಆಶಯ ಗೀತೆ ಹಾಡಿದರು. ಗ್ರಾಪಂ ಮಾಜಿ ಸದಸ್ಯರಾದ ಶ್ರೀಲತಾ ಹಾಗೂ ಗುರುರಾಜ್ ಸಾಮಗ ಕಾರ್ಯಕ್ರಮ ನಿರೂಪಿಸಿದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ನಝೀರ್ ಪೊಲ್ಯ/ವಾರ್ತಾಭಾರತಿ

contributor