ಉಡುಪಿ, ನ.16: ಸರಕಾರಿ ಶಾಲೆಗಳಲ್ಲಿ ಅಕ್ಷರ ದಾಸೋಹ ಯೋಜನೆಯಡಿ ಮಕ್ಕಳಿಗೆ ನೀಡಲಾಗುವ ಬಿಸಿಯೂಟದ ಜವಾಬ್ದಾರಿಯನ್ನು ಶಿಕ್ಷಕರಿಗೆ ವಹಿಸುವ ಪ್ರಸ್ತಾಪವನ್ನು ವಿರೋಧಿಸಿ ಕುಂದಾಪುರ ತಾಲೂಕು ಅಕ್ಷರ ದಾಸೋಹ ನೌಕರರ ಸಂಘ ಸೋಮವಾರ ಮುಖ್ಯಮಂತ್ರಿಗೆ ಮನವಿ ಸಲ್ಲಿಸಿದೆ.

ಕ್ಲಸ್ಟರ್ ಕಿಚನ್ ವ್ಯವಸ್ಥೆಯನ್ನು ಕೈಬಿಡಬೇಕು ಹಾಗೂ ಬಿಸಿಯೂಟದ ಸಂಪೂರ್ಣ ಜವಾಬ್ದಾರಿಯನ್ನು ಈಗಿರುವ ಅಡುಗೆ ಸಿಬ್ಬಂದಿಗೆ ವಹಿಸಬೇಕು ಎಂದು ಆಗ್ರಹಿಸಲಾಗಿದೆ. ಆರು ವರ್ಷ ಮೇಲ್ಪಟ್ಟ ಮಕ್ಕಳಿಗೆ ಪೌಷ್ಟಿಕಾಂಶಯುಕ್ತ ಆಹಾರವನ್ನು ಶಾಲೆಯಲ್ಲಿಯೇ ತಯಾರಿಸಿ ತಾಜಾ ಬಿಸಿಯೂಟ ನೀಡಬೇಕೆಂಬ ಸುಪ್ರೀಂ ಕೋರ್ಟ್ ಆದೇಶವಿದೆ. ಇದಕ್ಕಾಗಿ ಸರಕಾರಗಳು ಸಾವಿರಾರು ಕೋಟಿ ರೂ. ವೆಚ್ಚದಲ್ಲಿ ಶಾಲೆಗಳಲ್ಲಿ ಅಡುಗೆ ಕೋಣೆ, ಪಾತ್ರೆ, ಗ್ಯಾಸ್ ಸೇರಿದಂತೆ ಅಗತ್ಯ ಸೌಲಭ್ಯಗಳನ್ನು ಒದಗಿಸಿವೆ ಎಂದು ಮನವಿಯಲ್ಲಿ ವಿವರಿಸಲಾಗಿದೆ.

ಶಿಕ್ಷಕರು ಪಠ್ಯಕ್ರಮದ ಬೋಧನೆಗೆ ಹೆಚ್ಚಿನ ಗಮನ ನೀಡಬೇಕು. ಅಡುಗೆ ಜವಾಬ್ದಾರಿಯನ್ನು ಶಿಕ್ಷಕರಿಗೆ ವಹಿಸುವು ದರಿಂದ ಅವರ ಶೈಕ್ಷಣಿಕ ಕರ್ತವ್ಯಕ್ಕೆ ತೊಂದರೆಯಾಗಲಿದೆ. ಅಡುಗೆ ಸಿಬ್ಬಂದಿಗೆ ಈ ಕಾರ್ಯದ ಅನುಭವ ಮತ್ತು ಅರ್ಹತೆ ಇರುವುದರಿಂದ ಬಿಸಿಯೂಟದ ಜವಾಬ್ದಾರಿಯನ್ನು ಅವರಿಗೇ ಸಂಪೂರ್ಣವಾಗಿ ವಹಿಸಬೇಕು ಎಂದು ಸಂಘ ಒತ್ತಾಯಿಸಿದೆ.

ಕ್ಲಸ್ಟರ್ ಕಿಚನ್ ವ್ಯವಸ್ಥೆಯಿಂದ ಧಾರ್ಮಿಕ, ಜಾತಿ ಹಾಗೂ ಖಾಸಗಿ ಹಿತಾಸಕ್ತಿಗಳಿಗೆ ಅವಕಾಶ ಕಲ್ಪಿಸಿದಂತಾಗ ಬಹುದು. ಆದ್ದರಿಂದ ಯಾವುದೇ ಕಾರಣಕ್ಕೂ ಈ ವ್ಯವಸ್ಥೆಯನ್ನು ಜಾರಿಗೊಳಿಸಬಾರದು. ಬೇಡಿಕೆಗಳನ್ನು ಈಡೇರಿ ಸದಿದ್ದರೆ ಮುಂದಿನ ದಿನಗಳಲ್ಲಿ ರಾಜ್ಯಮಟ್ಟದಲ್ಲಿ ಅನಿರ್ದಿಷ್ಟಾವಧಿ ಶಾಲಾ ಅಡುಗೆ ಬಂದ್ ಮಾಡಿ ಮುಷ್ಕರ ನಡೆಸ ಲಾಗುವುದು ಎಂದು ಸಂಘದ ಮನವಿಯಲ್ಲಿ ಎಚ್ಚರಿಕೆ ನೀಡಿದೆ.

ಮನವಿಯನ್ನು ಇಲಾಖೆಯ ಯೋಜನಾಧಿಕಾರಿ ಸ್ವೀಕರಿಸಿದರು. ಈ ಸಂದರ್ಭದಲ್ಲಿ ಸಂಘದ ಅಧ್ಯಕ್ಷ ಜಯಶ್ರೀ, ಕೋಶಾಧಿಕಾರಿ ಸಿಂಗಾರಿ ಹಾಗೂ ಕಾರ್ಯದರ್ಶಿ ಸುನಂದ ಮೊದಲಾದವರು ಉಪಸ್ಥಿತರಿದ್ದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor