×
Ad

ಕರಾವಳಿಗೆ ಮೆಟ್ರೋ, ಉಡುಪಿಗೆ ಅಂತಾರಾಷ್ಟ್ರೀಯ ಕ್ರಿಕೆಟ್ ಸ್ಟೇಡಿಯಂ; ಕರಾವಳಿ ಅಭಿವೃದ್ಧಿ ಮಂಡಳಿ ಮೂಲಕ ಪ್ರಸ್ತಾವನೆ ಸಲ್ಲಿಸಲು ಸಿದ್ಧತೆ

Update: 2025-11-17 20:33 IST

ಉಡುಪಿ: ಹೊಸದಿಲ್ಲಿ, ಮುಂಬಯಿ, ಕೊಲ್ಕತ್ತಾ, ಬೆಂಗಳೂರು ಗಳಂಥ ಮಹಾನಗರಗಳಲ್ಲಿರುವ ಮೆಟ್ರೋ ರೈಲಿನ ವ್ಯವಸ್ಥೆ ಮಂಗಳೂರು, ಉಡುಪಿ ಹಾಗೂ ಮಣಿಪಾಲದ ನಡುವೆ ಸಂಚರಿಸಲು ಪ್ರಸ್ತಾವನೆ ಸಿದ್ಧಗೊಳ್ಳುತ್ತಿದೆ. ಈ ಬಗ್ಗೆ ಜಿಲ್ಲಾಡಳಿತ ಸಾಧ್ಯತಾ ವರದಿಯನ್ನು ಕೇಂದ್ರ ಸರಕಾರಕ್ಕೆ ಸಲ್ಲಿಸಿದ್ದು, ನೂತನವಾಗಿ ಅಸ್ತಿತ್ವಕ್ಕೆ ಬಂದಿರುವ ಎಂ.ಎ.ಗಫೂರ್ ಅಧ್ಯಕ್ಷತೆಯ ಕರಾವಳಿ ಅಭಿವೃದ್ಧಿ ಮಂಡಳಿ ಇದು ಕಾರ್ಯರೂಪಕ್ಕೆ ಬರಲು ಪ್ರಯತ್ನಿಸ ಲಿದೆ.

ಮಣಿಪಾಲದಲ್ಲಿರುವ ಜಿಲ್ಲಾ ಪಂಚಾಯತ್‌ನ ಡಾ.ವಿ.ಎಸ್.ಆಚಾರ್ಯ ಸಭಾಂಗಣದಲ್ಲಿ ಇಂದು ನಡೆದ ಕರಾವಳಿ ಅಭಿವೃದ್ಧಿ ಮಂಡಳಿಯ ಮೊದಲ ಸಾಮಾನ್ಯ ಸಭೆಯ ಬಳಿಕ ಕರೆದ ಪತ್ರಿಕಾಗೋಷ್ಠಿಯಲ್ಲಿ ಎಂ.ಎ.ಗಫೂರ್ ಅವರು ಈ ವಿಷಯ ತಿಳಿಸಿದರು.

ಕೇಂದ್ರ ಸರಕಾರ ಕೇಳಿದ ಸಾಧ್ಯತಾ ವರದಿಯನ್ನು ನಾವು ಕೇಂದ್ರಕ್ಕೆ ಸಲ್ಲಿಸಿದ್ದೇವೆ. ಮೊದಲ ಹಂತದಲ್ಲಿ ಓವರ್ ಹೆಡ್ ಮೆಟ್ರೋ ಯೋಜನೆ ಮಂಗಳೂರು, ವಿಮಾನ ನಿಲ್ದಾಣ, ಉಡುಪಿ, ಮಣಿಪಾಲಗಳ ನಡುವೆ ಅನುಷ್ಠಾನಗೊಳ್ಳಲಿದ್ದು, ಎರಡನೇ ಹಂತದಲ್ಲಿ ಹೆಜಮಾಡಿ-ಕಾರ್ಕಳಗಳ ನಡುವೆ ಅದನ್ನು ವಿಸ್ತರಿಸಲಾಗುವುದು. ಮುಂದೆ ಮಣಿಪಾಲ-ಕುಂದಾಪುರ ಹಾಗೂ ಕೊಲ್ಲೂರು ನಡುವೆ ಇದು ವಿಸ್ತರಣೆಗೊಳ್ಳುವ ಪ್ರಸ್ತಾಪ ತಯಾರಿಸಲಾಗಿದೆ ಎಂದು ಜಿಪಂ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಪ್ರತೀಕ್ ಬಾಯಲ್ ತಿಳಿಸಿದ್ದರು.

ಅದೇ ರೀತಿ ಕರಾವಳಿಗೆ ಅತಿಅಗತ್ಯವಾಗಿ ಬೇಕಿದ್ದ ಅಂತಾರಾಷ್ಟ್ರೀಯ ಕ್ರಿಕೆಟ್ ಸ್ಟೇಡಿಯಂನ್ನು ಪಡುಬಿದ್ರಿ ಸಮೀಪದ ನಂದಿಕೂರು ಆಸುಪಾಸಿನಲ್ಲಿ ನಿರ್ಮಿಸಲು ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದು ಜಿಲ್ಲಾಧಿಕಾರಿ ಸ್ವರೂಪ ಟಿ.ಕೆ. ಸಭೆಗೆ ತಿಳಿಸಿದರು.

ಎಲ್ಲೂರು-ಸಾಂತೂರು ಗ್ರಾಮಗಳಲ್ಲಿ ಯುಪಿಸಿಎಲ್ ಎರಡನೇ ಹಂತದ ವಿಸ್ತರಣೆಗೆಂದು ಕೆಐಡಿಬಿ ಸ್ವಾಧೀನಪಡಿಸಿಕೊಂಡ ಸುಮಾರು 900 ಎಕರೆ ಜಾಗವಿದ್ದು, ಅದರಲ್ಲಿ ಸುಮಾರು 50 ಎಕರೆ ಪ್ರದೇಶದಲ್ಲಿ ಕರ್ನಾಟಕ ರಾಜ್ಯ ಕ್ರಿಕೆಟ್ ಅಸೋಸಿಯೇಷನ್‌ನ (ಕೆಎಸ್‌ಸಿಎ) ಸಹಯೋಗದಲ್ಲಿ ಅಂತಾರಾಷ್ಟ್ರೀಯ ದರ್ಜೆಯ ಎಲ್ಲಾ ಆಧುನಿಕ ಸೌಕರ್ಯ ಗಳಿರುವ ಕ್ರಿಕೆಟ್ ಕ್ರೀಡಾಂಗಣದ ನಿರ್ಮಾಣಕ್ಕೆ ಮಾಸ್ಟರ್ ಪ್ಲಾನ್ ತಯಾರಿಸಿ ಸರಕಾರಕ್ಕೆ ಸಲ್ಲಿಸಲಾಗಿದೆ ಎಂದು ಜಿಲ್ಲಾಧಿಕಾರಿ ತಿಳಿಸಿದರು.

ಈ ಬಗ್ಗೆ ಕೆಎಸ್‌ಸಿಎ ಅಧ್ಯಕ್ಷರಾಗಿರುವ ರಘುರಾಮ ಭಟ್‌ರೊಂದಿಗೆ ಸಹ ಮಾತುಕತೆ ನಡೆಸಲಾಗಿದೆ. ಸದ್ಯ ಕೆಎಸ್‌ಸಿಎ ಚುನಾವಣೆಯಲ್ಲಿ ಅವರು ವ್ಯಸ್ತರಾಗಿರುವುದರಿಂದ ಚುನಾವಣೆ ಮುಗಿದ ಬಳಿಕ ಅವರನ್ನು ಇಲ್ಲಿಗೆ ಕರೆಸಿ ಅವರೊಂದಿಗೆ ಸಮಾಲೋಚಿಸಿದ ಬಳಿಕ ಸಮಗ್ರ ಚಿತ್ರಣ ದೊರೆಯಲಿದೆ ಎಂದು ಜಿಲ್ಲಾಧಿಕಾರಿ ತಿಳಿಸಿದರು.

ವಿಧಾನಸಭಾಧ್ಯಕ್ಷ ಯು.ಟಿ.ಖಾದರ್, ರಾಜ್ಯ ಆಡಳಿತ ಸುಧಾರಣಾ ಆಯೋಗದ ಅಧ್ಯಕ್ಷ ಆರ್.ವಿ.ದೇಶಪಾಂಡೆ, ಮೀನುಗಾರಿಕಾ ಸಚಿವ ಮಂಕಾಳ ವೈದ್ಯ, ಅಲ್ಲದೇ ಸಂಸದರು ಮಂಡಳಿಯ ಸದಸ್ಯರಾಗಿರುವುದರಿಂದ ಮಂಡಳಿಯ ಮೂಲಕ ಕರಾವಳಿಯ ಅಭಿವೃದ್ಧಿಗೆ ವಿವಿಧ ಯೋಜನೆಗಳನ್ನು ರೂಪಿಸಿ ಅನುಷ್ಠಾನಗೊಳಿಸಲು ಸಾಧ್ಯವಾಗುವ ವಿಶ್ವಾಸವನ್ನು ಎಂ.ಎ.ಗಫೂರ್ ವ್ಯಕ್ತಪಡಿಸಿದರು.

ನಮ್ಮೆಲ್ಲಾ ಯೋಜನೆ, ಪ್ರಸ್ತಾವಗಳನ್ನು ಸಿದ್ಧಪಡಿಸಿಕೊಂಡು ಮುಂಬರುವ ಬೆಳಗಾವಿ ಅಧಿವೇಶನದ ವೇಳೆ ಮುಖ್ಯಮಂತ್ರಿಗಳನ್ನು ಭೇಟಿಯಾಗಿ ಮಂಜೂರಾತಿಗೆ ಪ್ರಯತ್ನಿಸಲಾಗುವುದು. ಹಿಂದಿನ ಪ್ರಾಧಿಕಾರಕ್ಕೆ 40 ಕೋಟಿ ರೂ. ಅನುದಾನ ಬಂದಿತ್ತು. ಮಂಡಳಿಗೆ ಅದನ್ನು 250 ಕೋಟಿ ರೂ.ಗೆ ಹೆಚ್ಚಿಸಲು ಒತ್ತಾಯಿಸಲಾಗುವುದು. ಮಂಡಳಿಯ ವ್ಯಾಪ್ತಿಗೆ ಮೂರು ಜಿಲ್ಲೆಗಳ 19 ತಾಲೂಕುಗಳು ಸೇರ್ಪಡೆಗೊಂಡಿರುವುದರಿಂದ ಇದು ಅಗತ್ಯ ಎಂದರು.

ಕರಾವಳಿಯ ಮೂರು ಜಿಲ್ಲೆಗಳಿಗೆ ಸಂಬಂಧಿಸಿದಂತೆ, ಕರಾವಳಿ ಪ್ರದೇಶದ ಅಭಿವೃದ್ಧಿಗಾಗಿ ಕಾರ್ಯಕ್ರಮಗಳು ಮತ್ತು ಯೋಜನೆಗಳನ್ನು ಒಳಗೊಂಡಂತೆ ವಾರ್ಷಿಕ ಯೋಜನೆಗಳನ್ನು ಸಿದ್ಧಪಡಿಸಿ, ಯೋಜನೆಗಳು ಹಾಗೂ ಕಾರ್ಯಕ್ರಮಗಳ ಅನುಷ್ಠಾನದ ಉಸ್ತುವಾರಿ ನೋಡಿಕೊಳ್ಳುವ ಮತ್ತು ಯೋಜನೆಯನ್ನು ಅನುಷ್ಠಾನಕ್ಕೆ ತರುವ ಮೇಲ್ವಿಚಾರಣೆಯನ್ನು ನಡೆಸುವ ಜವಾಬ್ದಾರಿ ಕರಾವಳಿ ಅಭಿವೃದ್ಧಿ ಮಂಡಳಿಗೆ ಇದೆ ಎಂದು ಗಫೂರ್ ತಿಳಿಸಿದರು.

ರಾಜ್ಯ ಸರಕಾರ ಕರಾವಳಿ ಅಭಿವೃದ್ಧಿ ಮಂಡಳಿ ಅಧಿನಿಯಮ-2023ನ್ನು ರೂಪಿಸಿ ಅದರಡಿ ‘ಕರಾವಳಿ ಅಭಿವೃದ್ಧಿ ಮಂಡಳಿ’ಯನ್ನು ರಚಿಸಿದೆ. ಆದರೆ ಸರಕಾರ ಇದರ ನಿಯಮಾವಳಿಗಳನ್ನು ಇನ್ನೂ ಅಂತಿಮಗೊಳಿಸಿಲ್ಲ. ಈ ಪ್ರಕ್ರಿಯೆ ನಡೆಯುತ್ತಿದೆ ಎಂದು ಗಫೂರ್ ತಿಳಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಜಿಲ್ಲಾಧಿಕಾರಿ ಸ್ವರೂಪ ಟಿ.ಕೆ., ಮಂಡಳಿಯ ಕಾರ್ಯದರ್ಶಿ ಪ್ರದೀಪ್ ಡಿಸೋಜ ಉಪಸ್ಥಿತರಿದ್ದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News