Karkala | ನಿಟ್ಟೆಯಲ್ಲಿ ಲಾರಿ, ಕಾರುಗಳ ಮಧ್ಯೆ ಸರಣಿ ಅಪಘಾತ: ಮೊಟ್ಟೆ ಲಾರಿ ಪಲ್ಟಿ, ಅಪಾರ ನಷ್ಟ
ಮೂವರಿಗೆ ತೀವ್ರ ಗಾಯ
ಕಾರ್ಕಳ: ನಿಟ್ಟೆ ಗ್ರಾಮ ಪಂಚಾಯತ್ ಕಚೇರಿಯ ಮುಂಭಾಗದಲ್ಲಿ ಸೋಮವಾರ ಬೆಳಗ್ಗೆ 8.30ರ ಸುಮಾರಿಗೆ ಕಾರೊಂದು ಮೊಟ್ಟೆ ಸಾಗಿಸುತ್ತಿದ್ದ ಲಾರಿಗೆ ಢಿಕ್ಕಿ ಹೊಡೆದ ಪರಿಣಾಮ ಲಾರಿ ಪಲ್ಟಿಯಾಗಿದ್ದು, ಇದೇ ವೇಳೆ ಇನ್ನೊಂದು ಕಾರು ನಿಯಂತ್ರಣ ತಪ್ಪಿ ಅಪಘಾತಕ್ಕೀಡಾಗಿದೆ. ಈ ಸರಣಿ ಅಪಘಾತದಿಂದ ಪಾದಾಚಾರಿ ಸಹಿತ ಮೂವರು ಗಾಯಗೊಂಡಿದ್ದಾರೆ.
ದಾವಣಗೆರೆಯಿಂದ ಸುಮಾರು 80 ಸಾವಿರ ಕೋಳಿ ಮೊಟ್ಟೆ ಲೋಡ್ ಮಾಡಿಕೊಂಡು ಲಾರಿಯು ತೀರ್ಥಹಳ್ಳಿ ಮಾರ್ಗವಾಗಿ ಮಂಗಳೂರಿಗೆ ಹೊರಟಿತ್ತು. ಬೆಳಗ್ಗೆ ಕಾರ್ಕಳ- ಪಡುಬಿದ್ರಿ ರಾಜ್ಯ ಹೆದ್ದಾರಿಯಲ್ಲಿ ಲಾರಿ ಹೋಗುತ್ತಿರುವಾಗ ಪಡುಬಿದ್ರಿ ಕಡೆಯಿಂದ ಕಾರ್ಕಳ ಕಡೆಗೆ ಬರುತ್ತಿದ್ದ ಕಾರು, ಲಾರಿಗೆ ಢಿಕ್ಕಿ ಹೊಡೆಯಿತ್ತೆನ್ನಲಾಗಿದೆ.
ಇದರ ಪರಿಣಾಮ ಲಾರಿಯು ಪಲ್ಟಿಯಾಗಿ ರಸ್ತೆ ಬದಿಯಲ್ಲಿ ನಡೆದು ಕೊಂಡು ಹೋಗುತ್ತಿದ್ದ ಸುನಿಲ್ ಕುಮಾರ್ ಎಂಬವರಿಗೆ ಢಿಕ್ಕಿ ಹೊಡೆಯಿತು. ಇದರಿಂದ ಸುಲೀನ್ ಕುಮಾರ್ ತೀವ್ರವಾಗಿ ಗಾಯಗೊಂಡಿದ್ದಾರೆಂದು ತಿಳಿದುಬಂದಿದೆ. ಇದೇ ವೇಳೆ ಮೊಟ್ಟೆ ಲಾರಿಯ ಹಿಂದೆ ಕಾರ್ಕಳದಿಂದ ಪಡುಬಿದ್ರಿಗೆ ಹೋಗುತ್ತಿದ್ದ ಕಾರು ಚಾಲಕ ಅಪಘಾತದಿಂದ ತಪ್ಪಿಸಿಕೊಳ್ಳಲು ರಸ್ತೆಯ ತೀರ ಎಡಭಾಗಕ್ಕೆ ಕಾರನ್ನು ಚಲಾಯಿಸಿ ರಸ್ತೆ ಬದಿಯಲ್ಲಿದ್ದ ಸಿಮೆಂಟ್ ಕಟ್ಟೆಗೆ ಢಿಕ್ಕಿಹೊಡೆಯಿತೆನ್ನಲಾಗಿದೆ.
ಈ ಅಪಘಾತದಿಂದ ಮೂರು ವಾಹನಗಳು ಜಖಂ ಆಗಿದ್ದು ಲಾರಿ ಚಾಲಕ ಹಾಸನದ ಮಂಜೇಗೌಡ, ಕ್ಲೀನರ್ ಗೌತಮ್ ಎಂಬವರು ಗಾಯಗೊಂಡಿದ್ದಾರೆ. ಅಪಘಾತದಿಂದ ಲಾರಿಯಲ್ಲಿದ್ದ ಕೋಳಿ ಮೊಟ್ಟೆಗಳು ಸಂಪೂರ್ಣ ಹಾಳಾಗಿ ಅಪಾರ ನಷ್ಟ ಉಂಟಾಗಿದೆ. ಈ ಬಗ್ಗೆ ಕಾರ್ಕಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.