ರಾಜ್ಯದ ಬಿಜೆಪಿ ನಾಯಕರು ಒಂದಾಗಿ, ಒಟ್ಟಾಗಬೇಕು: ಬಿ.ವೈ.ವಿಜಯೇಂದ್ರ
ಉಡುಪಿ: ಬಿಜೆಪಿ ಪಕ್ಷದ ಎಲ್ಲ ಮುಖಂಡರು ಒಗ್ಗಟ್ಟಾಗಿ ಒಂದಾಗಿ ಹೋಗಬೇಕು ಎಂಬುದು ನಮ್ಮ ಕಾರ್ಯಕರ್ತರ ಅಪೇಕ್ಷೆಯಾಗಿದೆ. ಆ ನಿಟ್ಟಿನಲ್ಲಿ ನಾವು ರಾಜ್ಯದ ನಾಯಕರು ಒಂದಾಗಿ ಹೋಗಬೇಕಾಗಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಹೇಳಿದ್ದಾರೆ.
ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ನ.28ರ ’ಉಡುಪಿ ಶ್ರೀಕೃಷ್ಣ ಮಠ ಭೇಟಿ ಕಾರ್ಯಕ್ರಮದ ಪೂರ್ವ ಸಿದ್ದತಾ ಸಭೆ ಹಾಗೂ ಬಿಜೆಪಿ ಜಿಲ್ಲಾ ಪದಾಧಿಕಾರಿಗಳ ಪದಪ್ರದಾನ ಸಮಾರಂಭವನ್ನು ಬುಧವಾರ ಉಡುಪಿಯ ಹೋಟೆಲ್ ಶಾರದಾ ಇಂಟರ್ ನ್ಯಾಷನಲ್ ಸಭಾಂಗಣದಲ್ಲಿ ಉದ್ಘಾಟಿಸಿ ಅವರು ಮಾತನಾಡುತಿದ್ದರು.
ನಮ್ಮ ಪಕ್ಷಕ್ಕೆ ಬೇರೆ ಪಕ್ಷದ ಮುಖಂಡರನ್ನು ಸೆಳೆಯುವ ಮೊದಲು ನಮ್ಮ ಪಕ್ಷದ ಕಾರ್ಯಕರ್ತರ ವಿಶ್ವಾಸವನ್ನು ಮುಖಂಡರು ಪಡೆದುಕೊಳ್ಳಬೇಕು. ಚುನಾವಣೆಯಲ್ಲಿ ಯಾರೇ ಅಭ್ಯರ್ಥಿಯಾಗಿ ಪಕ್ಷ ಆಯ್ಕೆ ಮಾಡಿದರೂ ಅವರ ಪರ ದುಡಿಯುವುದಕ್ಕೆ ನಮ್ಮ ಕಾರ್ಯಕರ್ತರು ಸಜ್ಜಾಗಿದ್ದಾರೆ ಎಂದು ಅವರು ತಿಳಿಸಿದರು.
ಕಾಂಗ್ರೆಸ್ ಸರಕಾರದ ಕಳೆದ ಎರಡೂವರೆ ವರ್ಷಗಳ ಕಾರ್ಯವೈಖರಿ ನೋಡುವಾಗ ಬೇಸರ ಆಗುತ್ತದೆ. ಗ್ರಾಮೀಣ ಪ್ರದೇಶದ ಒಂದು ರಸ್ತೆಗಳ ಗುಂಡಿ ಮುಚ್ಚಲು ಕೂಡ ಇವರಿಗೆ ಸಾಧ್ಯವಾಗುತ್ತಿಲ್ಲ. ಯಾವುದೇ ಹೊಸ ಅಭಿವೃದ್ಧಿ ಕಾರ್ಯಕ್ರಮಗಳ ಘೋಷಣೆ ಮಾಡಲು ಇವರಿಂದ ಆಗಿಲ್ಲ. ಬೆಲೆ ಏರಿಕೆಯೇ ಕಾಂಗ್ರೆಸ್ ಸರಕಾರದ ಆರನೇ ಗ್ಯಾರಂಟಿಯಾಗಿದೆ ಎಂದು ಅವರು ಟೀಕಿಸಿದರು.
ಬಡವರು, ರೈತರ ಬಗ್ಗೆ ಕಿಂಚಿತ್ತು ಕಾಳಜಿ ವಹಿಸದ ಕಾಂಗ್ರೆಸ್ ಸರಕಾರಕ್ಕೆ ಅಧಿಕಾರದ ಮದ ಏರಿದೆ. ಇವರಿಗೆ ಇಂದು ತಮ್ಮ ಗ್ಯಾರಂಟಿ ಯೋಜನೆ ಬಗ್ಗೆ ವಿಶ್ವಾಸ ಇಲ್ಲವಾಗಿದೆ. ಇದಿದ್ದರೆ ಇಷ್ಟು ಹೊತ್ತಿಗೆ ಅವರು ಜಿಪಂ ತಾಪಂ ಚುನಾವಣೆ ಘೋಷಿಸುತ್ತಿದ್ದರು. ಈ ಸರಕಾರ ಜಾತಿ ಜಾತಿಗಳ ಮಧ್ಯೆ ವಿಷ ಬೀಜ ಬಿತ್ತುವ ಕಾರ್ಯ ಮಾಡುತ್ತಿದೆಯೇ ಹೊರತು ರಾಜ್ಯದ ಬಗ್ಗೆ ಯಾವುದೇ ಕಾಳಜಿ ವಹಿಸುತ್ತಿಲ್ಲ ಎಂದು ಅವರು ಆರೋಪಿಸಿದರು.
ಅಧ್ಯಕ್ಷತೆಯನ್ನು ಬಿಜೆಪಿ ಉಡುಪಿ ಜಿಲ್ಲಾಧ್ಯಕ್ಷ ಕುತ್ಯಾರು ನವೀನ್ ಶೆಟ್ಟಿ ವಹಿಸಿದ್ದರು. ಸಂಸದರಾದ ಕೋಟ ಶ್ರೀನಿವಾಸ ಪೂಜಾರಿ, ಬ್ರಿಜೇಶ್ ಚೌಟ, ಶಾಸಕರಾದ ಗುರ್ಮೆ ಸುರೇಶ್ ಶೆಟ್ಟಿ, ಯಶ್‌ಪಾಲ್ ಸುವರ್ಣ, ಕಿರಣ್ ಕೊಡ್ಗಿ, ಗುರುರಾಜ್ ಗಂಟಿಹೊಳೆ, ಹರೀಶ್ ಪೂಂಜಾ, ಮಾಜಿ ಸಚಿವ ಪ್ರಮೋದ್ ಮಧ್ವರಾಜ್, ಮಾಜಿ ಶಾಸಕ ಲಾಲಾಜಿ ಆರ್.ಮೆಂಡನ್, ಮುಖಂಡ ಉದಯ ಕುಮಾರ್ ಶೆಟ್ಟಿ ಮೊದಲಾದವರು ಉಪಸ್ಥಿತರಿದ್ದರು.