ಕರ್ನಾಟಕ ಗೂಂಡಾ ರಾಜ್ಯವಾಗಿದೆ: ನಳಿನ್ ಕುಮಾರ್ ಕಟೀಲ್ ಆರೋಪ
ಉಡುಪಿ: ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರಕಾರ ರಾಜ್ಯವನ್ನು ಗೂಂಡಾ ರಾಜ್ಯವನ್ನಾಗಿ ಮಾಡಿದೆ ಎಂದು ಬಿಜೆಪಿ ಮಾಜಿ ರಾಜ್ಯಾಧ್ಯಕ್ಷ ಹಾಗೂ ಮಾಜಿ ಸಂಸದ ನಳಿನ್ ಕುಮಾರ್, ಹುಬ್ಬಳ್ಳಿಯಲ್ಲಿ ಮಹಿಳೆ ಯೊಬ್ಬರನ್ನು ವಿವಸ್ತ್ರಗೊಳಿಸಿದ ಪ್ರಕರಣದ ಹಿನ್ನೆಲೆಯಲ್ಲಿ ಆರೋಪಿಸಿದರು.
ಉಡುಪಿ ಬಿಜೆಪಿ ಕಚೇರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು,ಈ ಸರಕಾರ ಬಂದಾಲೇ ಪಾಕಿಸ್ತಾನ ಪರ ಘೋಷಣೆ ಕೂಗಲಾಯಿತು, ವಿಜಯೋತ್ಸವದಲ್ಲಿ ಪಾಕಿಸ್ತಾನ ಧ್ವಜ ಹಾರಿತು, ಬೆಳಗಾವಿ ಯಲ್ಲಿ ಮುನಿಯೊಬ್ಬರ ಹತ್ಯೆ ಆಯಿತು. ಹಲ್ಲೆ ಗೂಂಡಾ ವರ್ತನೆಗಳು ಇಲ್ಲಿ ನಿತ್ಯ ನಿರಂತರವಾಗಿದೆ. ಹೀಗಾಗಿ ಇವರಿಂದ ಕರ್ನಾಟಕ ಗೂಂಡಾ ರಾಜ್ಯವಾಗಿದೆ ಎಂದರು.
ರಾಜ್ಯದಲ್ಲಿ ಅತ್ಯಾಚಾರಗಳು ಜಾಸ್ತಿ ಆಗುತ್ತಿವೆ. ಕೆಡಿಪಿ ಸಭೆಯಲ್ಲಿ ನಮ್ಮ ಶಾಸಕರ ಮೇಲೆ ಕಾಂಗ್ರೆಸ್ ಶಾಸಕರು ಕೈ ಎತ್ತುತ್ತಾರೆ. ಬಳ್ಳಾರಿಯಲಿ ಗುಂಡು ಹೊಡೆಯುತ್ತಾರೆ. ಶಾಸಕರ ಸಹವರ್ತಿ ಅವರದ್ದೇ ಕಾರ್ಯಕರ್ತನನ್ನು ಕೊಲ್ಲು ತ್ತಾರೆ. ಇದು ಕಾಂಗ್ರೆಸ್ ಸರಕಾರದ ಮಾನಸಿಕತೆಯನ್ನು ತೋರಿಸುತ್ತದೆ. ಈ ಎಲ್ಲಾ ಕೃತ್ಯಗಳನ್ನು ಮುಖ್ಯಮಂತ್ರಿ ಹಾಗೂ ಉಪಮುಖ್ಯಮಂತ್ರಿಗಳು ಸಮರ್ಥನೆ ಮಾಡುತ್ತಾರೆ ಎಂದರು.
ರಾಮರಾಜ್ಯದ ಗಾಂಧಿಯ ಕನಸನ್ನು ಕಾಂಗ್ರೆಸ್ ನನಸಾಗಿಸಿಲ್ಲ, ಆದರೆ ಇದು ರಾವಣ ರಾಜ್ಯ. ಕರ್ನಾಟಕ ಲಂಕಾಪುರ ಆಗುತ್ತಿದೆ. ರಾವಣನು ಕೂಡ ಸಿದ್ದರಾಮಯ್ಯನಂತೆ ಬುದ್ದಿವಂತನಿದ್ದ. ರಾವಣ ಕೂಡ ಸಿದ್ದರಾಮಯ್ಯ ನವರಂತೆ ಅದ್ಭುತ ಜ್ಞಾನಿಯಾಗಿದ್ದ. ಹೀಗಾಗಿ ಸಿದ್ದರಾಮಯ್ಯರ ಹೆಸರು ಬದಲಾವಣೆಯಾಗುತ್ತಿದೆಯಾ ಎಂಬ ಸಂಶಯ ಎಂದರು.
ಇದಕ್ಕೆ ಮುನ್ನ ನಡೆದ ಪತ್ರಿಕಾಗೋಷ್ಠಿಯಲ್ಲಿ ಅವರು ಕೇಂದ್ರ ಸರಕಾರ ಜಾರಿಗೆ ತಂದಿರುವ ವಿಕಸಿತ ಭಾರತ ಉದ್ಯೋಗ ಖಾತರಿ ಮತ್ತು ಜೀವನೋಪಾಯ ಮಿಷನ್ (ವಿಬಿ-ಜಿ.ರಾಮ್-ಜಿ) ಯೋಜನೆಯನ್ನು ಸಮರ್ಥಿಸಿ ಮಾತನಾಡಿದರು. ಇದರ ವಿರುದ್ಧ ಕಾಂಗ್ರೆಸ್ ಅಪಪ್ರಚಾರ ಮಾಡುತ್ತಿದೆ ಎಂದು ಆರೋಪಿಸಿದರು.