ಕೊರಗರ ಸಾಂಪ್ರದಾಯಿಕ ಕಲ್ಲು ಗಣಿಗಾರಿಕೆ ಕಸಿಯುವ ಯತ್ನ ಆರೋಪ: ಬ್ರಹ್ಮಾವರ ತಾಲೂಕು ಕಚೇರಿ ಎದುರು ಕೊರಗರಿಂದ ಪ್ರತಿಭಟನೆ
ಬ್ರಹ್ಮಾವರ: ಸ್ಥಳೀಯ ಕೊರಗ ಕುಟುಂಬಗಳು ಹಲವು ದಶಕದಿಂದ ಹೊಟ್ಟೆಪಾಡಿಗಾಗಿ ನಡೆಸಿಕೊಂಡು ಬಂದಿರುವ ಸಾಂಪ್ರದಾಯಿಕ ಕಲ್ಲು ಗಣಿಗಾರಿಕೆಯನ್ನು ಅನ್ಯರು ಕಬಳಿಸಲು ಪ್ರಯತ್ನಿಸಿ ದೌರ್ಜನ್ಯ ನಡೆಸುತ್ತಿದ್ದಾರೆ ಎಂದು ಆರೋಪಿಸಿ ಕೊರಗ ಅಭಿವೃದ್ಧಿ ಸಂಘಗಳ ಒಕ್ಕೂಟ ಕರ್ನಾಟಕ- ಕೇರಳ ನೇತೃತ್ವದಲ್ಲಿ ಗರಿಕೆಮಠ, ಅಚ್ಲಾಡಿಯ ಕೊರಗ ಕುಟುಂಬಗಳು ಸೋಮವಾರ ಬ್ರಹ್ಮಾವರ ತಾಲೂಕು ಆಡಳಿತ ಕೇಂದ್ರದ ಎದುರು ಪ್ರತಿಭಟನೆ ನಡೆಸಿದರು.
ಪ್ರತಿಭಟನೆಯನ್ನುದ್ದೇಶಿಸಿ ಮಾತನಾಡಿದ ಕೊರಗ ಅಭಿವೃದ್ಧಿ ಸಂಘಗಳ ಒಕ್ಕೂಟದ ಅಧ್ಯಕ್ಷೆ ಸುಶೀಲಾ ನಾಡ, ಉಡುಪಿ ಜಿಲ್ಲೆಯ ಯಡ್ತಾಡಿ ಗ್ರಾಮದ ಸರ್ವೆ ನಂರ್ಬ 145ರಲ್ಲಿ 1.84 ಎಕ್ರೆ ಜಾಗದಲ್ಲಿ ಪರಿಶಿಷ್ಠ ಪಂಗಡದ ರಮಣಿ, ನರ್ಸಿ, ಐತ, ಚಂದ್ರ, ಭಾಸ್ಕರ್ ಪಾರಂಪರಿಕವಾಗಿ ಕಟ್ಟಡ ಕಲ್ಲು ಗಣಿಗಾರಿಕೆ ಮಾಡಿಕೊಂಡು ಬಂದಿದ್ದಾರೆ. ಅಲ್ಲದೆ ಪೂರ್ವಿಕರ ಕಾಲದಿಂದಲೂ ಈ ಇಲ್ಲಿ ಮನೆಯನ್ನು ಕಟ್ಟಿಕೊಂಡು ವಾಸವಿದ್ದಾರೆ. ಆದರೆ ಇದೀಗ ಈ ಜಾಗದಲ್ಲಿ ಕಟ್ಟಡಕಲ್ಲು ಎತ್ತೆಚ್ಚವಾಗಿ ಸಿಗುವುದ್ದರಿಂದ ಸ್ಥಳೀಯ ಒಂದಷ್ಟು ಮಂದಿ ರಾಜಕೀಯ ಪ್ರಭಾವ ಬಳಸಿ ಆ ಜಾಗವನ್ನು ತಮ್ಮದಾಗಿಸಲು ಪ್ರಯತ್ನ ಮಾಡುತ್ತಿದ್ದಾರೆ ಎಂದು ದೂರಿದರು.
ಅದಕ್ಕಾಗಿ ಕಲ್ಲು ಕೋರೆಯ ಪರವಾನಿಗೆ ಅರ್ಜಿಯನ್ನು ಇಲಾಖೆಗೆ ಸಲ್ಲಿಸ ಲಾಗಿದೆ. ಅವರಿಗೆ ಈ ಜಾಗದಲ್ಲಿ ಕಲ್ಲು ಗಣಿಗಾರಿಕೆ ಮಾಡಲು ಅವಕಾಶ ಮಾಡಿಕೊಟ್ಟರೆ ಮೂಲ ನಿವಾಸಿಗಳಾದ ಕೊರಗ ಸಮುದಾಯದ ಮುಗ್ದ ಜನರಿಗೆ ಅನ್ಯಾಯವಾಗುತ್ತದೆ. ಜಿಲ್ಲಾಧಿಕಾರಿ ಯಾವುದೇ ಕಾರಣಕ್ಕೂ ಅವರಿಗೆ ಕಲ್ಲು ಗಣಿಗಾರಿಕೆ ಮಾಡಲು ಅವಕಾಶ ನೀಡಬಾರದು ಎಂದು ಅವರು ಆಗ್ರಹಿಸಿದರು.
ಪ್ರತಿಭಟನೆಯಲ್ಲಿ ಕೊರಗ ಸಮಾಜದ ಮುಖಂಡರಾದ ಬೊಗ್ರ ಕೊಕ್ಕರ್ಣೆ, ಕೆ.ಪುತ್ರನ್ ಕೊರಗ, ಶೀನ ಕೊರಗ, ದಿವಾಕರ ಕಳ್ತೂರು, ವೆಂಕಟೇಶ ಮಧುವನ, ಪ್ರೇಮಾ, ಸಂತ್ರಸ್ತ ಹಕ್ಕುದಾರರಾದ ರಮಣಿ, ಮಂಜುಳಾ, ಸುಜಾತಾ, ಚಂದ್ರ, ನರ್ಸಿ ಮತ್ತಿತ್ತರು ಉಪಸ್ಥಿತರಿದ್ದರು.
ಗಣಿ ಇಲಾಖೆ ಅಧಿಕಾರಿ ಭೇಟಿ: ಧರಣಿ ಅಂತ್ಯ
ಪ್ರತಿಭಟನಾ ಸ್ಥಳಕ್ಕೆ ಉಡುಪಿ ಗಣಿ ಇಲಾಖೆಯ ಅಧಿಕಾರಿ ಹಾಜೀರ ಭೇಟಿ ನೀಡಿ ಧರಣಿನಿರತರಿಂದ ಮಾತುಕತೆ ನಡೆಸಿದರು.
ಕೊರಗ ಸಮುದಾಯದಿಂದ ನೀಡಿರುವ ಆಕ್ಷೇಪಣೆ ಕುರಿತು ಈಗಾಗಲೇ ತಹಶಿಲ್ದಾರ್ ಮೂಲಕ ವರದಿ ಪಡೆದಿದ್ದು ನಿಮ್ಮ ಹೇಳಿಕೆ ದಾಖಲಿಸಲಾಗಿದೆ ಹಾಗೂ ವಸ್ತುಸ್ಥಿತಿ ಬಗ್ಗೆ ಕೂಡ ಉಲ್ಲೇಖಿಸಲಾಗಿದ್ದು ಜಿಲ್ಲಾಧಿಕಾರಿಗಳ ಸಮ್ಮುಖದಲ್ಲಿ ನಡೆಯುವ ಸಭೆಯಲ್ಲಿ ಈ ಕುರಿತು ತೀರ್ಮಾನ ಕೈಗೊಳ್ಳಲಾಗುತ್ತದೆ ಎಂದು ಹಾಜೀರ ತಿಳಿಸಿದರು.
ಕಾನೂನಿನನ್ವಯ ಅರ್ಜಿ ಹಾಕಿ ಪರವಾನಿಗೆ ಪಡೆದು ಗಣಿಗಾರಿಕೆ ನಡೆಸಬೇಕು. ಕೊರಗ ಕುಟುಂಬಗಳು ಕೂಡ ಅರ್ಜಿ ಸಲ್ಲಿಸಲು ಅವಕಾಶವಿದೆ. ಆದುದರಿಂದ ಈ ಪ್ರತಿಭಟನೆ ಕೈಬಿಡಬೇಕು ಎಂದು ಮನವಿ ಮಾಡಿದರು. ಅದರಂತೆ ಕೊರಗರು ತಮ್ಮ ಪ್ರತಿಭಟನೆಯನ್ನು ಕೈಬಿಟ್ಟರು.
‘ಕೊರಗ ಸಮಾಜದ ಮೇಲೆ ಬಲಾಢ್ಯರು, ರಾಜಕೀಯ ಪ್ರಾಬಲ್ಯರಿಂದ ನಿರಂತರ ದಾಳಿ, ದೌರ್ಜನ್ಯ ನಡೆಯುತ್ತಿದೆ. ಅದರ ಮುಂದುವರಿದ ಭಾಗ ಎನ್ನುವಂತೆ ಇದೀಗ ಸಾಂಪ್ರದಾಯಿಕ ಕಲ್ಲುಗಣಿಗಾರಿಕೆ ಮಾಡುವ ಆದಿವಾಸಿ ಸಮುದಾಯದವರನ್ನು ಒಕ್ಕಲೆಬ್ಬಿಸುವ ವ್ಯವಸ್ಥಿತ ಹುನ್ನಾರ ನಡೆಯುತ್ತಿದೆ. ಅಧಿಕಾರಿಗಳು ತಿಳಿಸಿದಂತೆ ಕಾನೂನುಬದ್ಧವಾಗಿ ಅರ್ಜಿ ಸಲ್ಲಿಸಲಾಗುತ್ತದೆ. ಜೀವನ ನಿರ್ವಹಣೆಗಾಗಿ ಆದಿವಾಸಿ ಸಮುದಾಯಕ್ಕೆ ನ್ಯಾಯಯುತವಾಗಿ ಪರವಾನಿಗೆ ನೀಡಬೇಕು. ಪ್ರಭಾವಗಳಿಗೆ ಮಣಿದು ಕೊರಗ ಕುಟುಂಬ ಹೊರತುಪಡಿಸಿ ಇತರರಿಗೆ ಪರವಾನಿಗೆ ನೀಡಿದಲ್ಲಿ ಅಮರಣಾಂತ ಉಪವಾಸ ನಡೆಸಲಾಗುತ್ತದೆ’
- ಸುಶೀಲಾ ನಾಡ, ಅಧ್ಯಕ್ಷರು, ಕೊರಗ ಅಭಿವೃದ್ಧಿ ಸಂಘಗಳ ಒಕ್ಕೂಟ
‘ರಮಣಿ ಹಾಗೂ ಕುಟುಂಬ ಹಲವಾರು ವರ್ಷಗಳಿಂದ ಕ್ವಾರಿ ಕೆಲಸ ಮಾಡುತ್ತಿದ್ದು ಅವರ ಜೀವನಕ್ಕೆ ಇದೇ ಆಧಾರವಾಗಿದೆ. ಪಾರಂಪರಿಕವಾಗಿ ಮಾಡುವ ಕಲ್ಲು ಗಣಿ ಕಾರ್ಯವನ್ನು ಮುಂದುವರೆಸಲು ಅಗತ್ಯ ಕ್ರಮವಹಿಸಿ ಮೂಲನಿವಾಸಿಗಳು ಬದುಕಲು ಅವಕಾಶ ಕಲ್ಪಿಸಬೇಕು’
-ಬೊಗ್ರ ಕೊರಗ, ಕೊರಗ ಸಮುದಾಯದ ಹಿರಿಯ ಮುಖಂಡರು