×
Ad

9 ದಿನವೂ ಮುಂದುವರೆದ ಕೊರಗರ ಧರಣಿ ಸತ್ಯಾಗ್ರಹ; ಉಡುಪಿ ಜಿಲ್ಲಾ ಮುಸ್ಲಿಮ್ ಒಕ್ಕೂಟ ನಿಯೋಗದಿಂದ ಬೆಂಬಲ

Update: 2025-12-23 21:46 IST

ಉಡುಪಿ, ಡಿ.23: ಕೊರಗ ಸಮುದಾಯದ ಯುವಜನತೆಗೆ ಸರಕಾರಿ ಉದ್ಯೋಗದಲ್ಲಿ ನೇರ ನೇಮಕಾತಿ ಕಲ್ಪಿಸು ವಂತೆ ಆಗ್ರಹಿಸಿ ಕೊರಗಾಭಿವೃದ್ಧಿ ಸಂಘಗಳ ಒಕ್ಕೂಟ ಕರ್ನಾಟಕ ಕೇರಳ ಇದರ ನೇತೃತ್ವದಲ್ಲಿ ಉಡುಪಿ ಜಿಲ್ಲಾಧಿಕಾರಿ ಕಚೇರಿ ಎದುರು ಹಮ್ಮಿಕೊಳ್ಳಲಾಗಿರುವ ಅನಿಧಿಷ್ಠಾವಧಿ ಅಹೋರಾತ್ರಿ ಧರಣಿ ಸತ್ಯಾಗ್ರಹವು 9ನೇ ದಿನವಾದ ಮಂಗಳವಾರವೂ ಮುಂದುವರೆದಿದೆ.

ಸತ್ಯಾಗ್ರಹ ಸ್ಥಳಕ್ಕೆ ಉಡುಪಿ ಜಿಲ್ಲಾ ಮುಸ್ಲಿಮ್ ಒಕ್ಕೂಟದ ನಿಯೋಗ ಭೇಟಿ ನೀಡಿ ಕೊರಗರ ಹೋರಾಟಕ್ಕೆ ಬೆಂಬಲ ಸೂಚಿಸಿತು. ಒಕ್ಕೂಟದ ನಿಕಟಪೂರ್ವ ಅಧ್ಯಕ್ಷ ಯಾಸೀನ್ ಮಲ್ಪೆ ಮಾತನಾಡಿ, ಹೋರಾಟದಿಂದ ಮಾತ್ರ ತಮ್ಮ ಹಕ್ಕಗಳನ್ನು ಪಡೆಯಲು ಸಾಧ್ಯ. ಹಾಗಾಗಿ ಈ ಹೋರಾಟವನ್ನು ಯಾವುದೇ ಕಾರಣಕ್ಕೂ ಕೈ ಬಿಡಬಾರದು. ನ್ಯಾಯ ಸಿಗುವವರೆಗೂ ಮುಂದು ವರೆಸಬೇಕು ಎಂದು ತಿಳಿಸಿದರು.

ಕೊರಗ ಸಮುದಾಯ ಅತ್ಯಂತ ತುಳಿಯಲ್ಪಟ್ಟ ಹಾಗೂ ನಿರ್ಲಕ್ಷ್ಯಕ್ಕೆ ಒಳ ಪಟ್ಟ ಸಮುದಾಯ. ಆದುದರಿಂದ ಸರಕಾರ ಈ ಸಮುದಾಯವನ್ನು ನಿರ್ಲಕ್ಷ್ಯ ಮಾಡುವುದು ಸರಿಯಲ್ಲ. ಈ ಸಮುದಾಯದಲ್ಲಿ ಪ್ರತಿಭಾ ವಂತರು ಹಾಗೂ ವಿದ್ಯಾವಂತರು ಹೆಚ್ಚಿನ ಸಂಖ್ಯೆಯಲ್ಲಿರುವುದು ಸಂತೋಷದ ವಿಷಯ. ಇವರಿಗೆ ಸರಕಾರ ವಿವಿಧ ಇಲಾಖೆಯಲ್ಲಿ ನೇರ ನೇಮಕಾತಿಗಳ ಮೂಲಕ ಉದ್ಯೋಗ ನೀಡಬೇಕು ಎಂದರು.

ಸಮುದಾಯ ನಡೆಸುತ್ತಿರುವ ಹೋರಾಟದಲ್ಲಿ ಒಕ್ಕೂಟ ಸದಾ ಬೆಂಬಲ ನೀಡುತ್ತದೆ. ನಾವು ನಿಮ್ಮ ಜೊತೆಯಲ್ಲಿ ಯಾವತ್ತೂ ಇದ್ದೇವೆ. ಈ ಸಮಾಜದ ಶೋಷಿತ ಎಲ್ಲ ಸಮುದಾಯಗಳು ಕೂಡ ಒಂದಾಗಿ ಹೋರಾಟ ಮಾಡಬೇಕು ಎಂದು ಅವರು ಹೇಳಿದರು.

ನಿಯೋಗದಲ್ಲಿ ಉಡುಪಿ ಜಿಲ್ಲಾ ಮುಸ್ಲಿಮ್ ಒಕ್ಕೂಟದ ಅಧ್ಯಕ್ಷ ಮುಹಮ್ಮದ್ ಮೌಲಾ, ಪ್ರಧಾನ ಕಾರ್ಯದರ್ಶಿ ಇಸ್ಮಾಯಿಲ್ ಹುಸೇನ್, ಕಾರ್ಯದರ್ಶಿ ಜಫ್ರುಲ್ಲಾ, ಜಿಲ್ಲಾ ಸಮಿತಿ ಸದಸ್ಯ ಇದ್ರೀಸ್ ಹೂಡೆ, ಬಿಜಾಪುರ ಜಿಲ್ಲಾ ಕಾಂಗ್ರೆಸ್ ಕಾರ್ಯದರ್ಶಿ ಸಂಗಪ್ಪ ಮೊದಲಾದವರು ಉಪಸ್ಥಿತರಿದ್ದರು.



Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News