×
Ad

ಕುಂದಾಪುರ: ತಲವಾರು, ಬಿಯರ್ ಬಾಟಲಿಯಿಂದ ಹಲ್ಲೆ; ಇಬ್ಬರು ಗಂಭೀರ

Update: 2024-08-19 11:43 IST

ಕುಂದಾಪುರ:  ಹನ್ನೊಂದು ಮಂದಿಯ ತಂಡ ತಲವಾರು ಬೀಸಿ, ಬಿಯರ್ ಬಾಟಲಿ ಹಾಗೂ ಬ್ಯಾಟ್‌, ವಿಕೆಟ್ ನಿಂದ ಹಲ್ಲೆ ನಡೆಸಿದ ಪರಿಣಾಮ ಇಬ್ಬರು ಗಂಭೀರ ಗಾಯಗೊಂಡ ಘಟನೆ ತಾಲೂಕಿನ‌ ವಕ್ವಾಡಿಯಲ್ಲಿ ಭಾನುವಾರ ಸಂಜೆ ನಡೆದಿದೆ.

ವಕ್ವಾಡಿಯ ಚಂದ್ರಶೇಖರ್(27) ಹಾಗೂ ಅಶೋಕ್ (45) ಗಂಭೀರ ಗಾಯಗೊಂಡು ಕುಂದಾಪುರ ಸರಕಾರಿ ಆಸ್ಪತ್ರೆಗೆ ದಾಖಲಾಗಿದ್ದಾರೆ. ವಕ್ವಾಡಿಯ ಆದರ್ಶ, ಎಡ್ವರ್ಡ್, ಗಣೇಶ್ ಕುಂಭಾಶಿ, ಗೋವರ್ಧನ್, ಶಶಿಕಾಂತ, ಇಲಿಯಾಸ್‌, ಪುನೀತ್, ತರುಣ್, ಸುಶಾಂತ್, ಹರ್ಷ, ವಿಘ್ನೇಶ್ ಆರೋಪಿಗಳು. ಈ ಪೈಕಿ ಆದರ್ಶ ಸಹಿತ ಏಳು ಮಂದಿ ಆರೋಪಿಗಳನ್ನು ಬಂಧಿಸಿದ್ದು ಪರಾರಿಯಾದವರ ಪತ್ತೆಗೆ ಬಲೆಬೀಸಲಾಗಿದೆ.

ಘಟನೆಯ ವಿವರ: ಭಾನುವಾರ ಆರೋಪಿಗಳಾದ ಆದರ್ಶ‌, ಗೋವರ್ಧನ್, ಗಣೇಶ್, ಎಡ್ವರ್ಡ್ ಸೇರಿದಂತೆ 11 ಯುವಕರ ತಂಡ ವಕ್ವಾಡಿಯಲ್ಲಿ ಬಾರೊಂದರಲ್ಲಿ ಊಟ ಮುಗಿಸಿದ ಬಳಿಕ  ಮಾತಿನ‌ಚಕಮಕಿ ನಡೆದಿತ್ತು. ಬಳಿಕ ಆದರ್ಶ ಎಂಬಾತ ಸುಧಾಕರ ಎಂಬಾತನಿಗೆ ಕರೆ ಮಾಡಿ ವಕ್ವಾಡಿ ಪ್ರದೇಶಕ್ಕೆ ಬರಹೇಳಿದ್ದು ಅಲ್ಲಿಗೆ ಆಗಮಿಸಿದ ಅಶೋಕ್, ಚಂದ್ರಶೇಖರ್, ಸುಧಾಕರ ಮತ್ತು ವಿಜಯ ಎನ್ನುವರಿಗೆ ಮಾರಣಾಂತಿಕ ಹಲ್ಲೆ ನಡೆಸಿದ್ದಾರೆ ಎನ್ನಲಾಗಿದೆ. ಅಲ್ಲಿಗೆ ಬಂದ 2 ರಿಕ್ಷಾಗಳ ಮುಂದಿನ ಗ್ಲಾಸ್‌ ಅನ್ನು ಆರೋಪಿ ಎಡ್ವರ್ಡ್ ತಲ್ವಾರ್‌ ನಿಂದ ಹೊಡೆದು ಪುಡಿ ಮಾಡಿದ್ದಾನೆ ಎಂದು ತಿಳಿದು ಬಂದಿದೆ.

ಆದರ್ಶ ಮತ್ತು ಚಂದ್ರಶೇಖರ ನಡುವಿನ ಹಳೆಯ ಗಲಾಟೆಯ ದ್ವೇಷದಿಂದ ಆರೋಪಿಗಳು ಸೇರಿ ಕೊಲೆ ಮಾಡುವ ಉದ್ದೇಶದಿಂದ ಅಶೋಕ್ ಹಾಗೂ ಚಂದ್ರಶೇಖರ ಅವರಿಗೆ ಮಾರಾಣಾಂತಿಕ ಹಲ್ಲೆ ನಡೆಸಿದ್ದಾಗಿ ದೂರಿನಲ್ಲಿ ತಿಳಿಸಲಾಗಿದೆ.

ಈ ಬಗ್ಗೆ ಕುಂದಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News