×
Ad

ಕುಂದಾಪುರ| ಸರಕಾರಿ ವೈದ್ಯಾಧಿಕಾರಿಗೆ ಹಲ್ಲೆಗೆ ಯತ್ನಿಸಿ, ಕರ್ತವ್ಯಕ್ಕೆ ಅಡ್ಡಿ: ಪ್ರಕರಣ ದಾಖಲು

Update: 2024-11-05 21:33 IST

ಕುಂದಾಪುರ, ನ.5: ಕುಂದಾಪುರ ತಾಲೂಕು ಸರಕಾರಿ ಆಸ್ಪತ್ರೆಯ ವೈದ್ಯಾಧಿಕಾರಿಗೆ ಹಲ್ಲೆಗೆ ಯತ್ನಿಸಿ ಕರ್ತವ್ಯಕ್ಕೆ ಅಡ್ಡಿಪಡಿಸಿರುವ ಬಗ್ಗೆ ಕುಂದಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಕುಂದಾಪುರ ತಾಲೂಕು ಸರಕಾರಿ ಆಸ್ಪತ್ರೆಯ ವೈದ್ಯಾಧಿಕಾರಿ ಮೂರ್ತಿರಾಜ್ (48) ಎಂಬವರು ನ.3ರಂದು ರಾತ್ರಿ ಆಸ್ಪತ್ರೆಯ ತುರ್ತು ಚಿಕಿತ್ಸಾ ವಿಭಾಗದಲ್ಲಿ ಕರ್ತವ್ಯದಲ್ಲಿರುವಾಗ ರಾಧ ಎಂಬವರು ಮಹಿಳೆಯೊಂದಿಗೆ ಹೊಟ್ಟೆನೋವು ಎಂದು ಚಿಕಿತ್ಸೆಗೆ ಬಂದಿದ್ದರು. ಈ ವೇಳೆ ರಾಧ ಅವರ ಪತಿ ನಾಗರಾಜ ಬೀಜಾಡಿ ಎಂಬವರು ಕೂಡ ಬಂದಿದ್ದರು.

ರಾಧಾ ಅವರಿಗೆ ಚಿಕಿತ್ಸೆ ನೀಡುತ್ತಿರುವಾಗ ನಾಗರಾಜ ಏಕಾಏಕಿಯಾಗಿ ತುರ್ತು ಚಿಕಿತ್ಸಾ ಕೊಠಡಿಗೆ ಬಂದು ವೈದ್ಯರಿಗೆ ಅವಾಚ್ಯ ಶಬ್ದದಿಂದ ನಿಂದಿಸಿ ಹಲ್ಲೆ ಮಾಡಲು ಯತ್ನಿಸಿದರು. ಟೇಬಲ್ ಮೇಲಿದ್ದ ಸರಕಾರಿ ದಾಖಲೆಗಳನ್ನು ಹರಿದು ಬಿಸಾಡಿ, ಸರಕಾರಿ ಕರ್ತವ್ಯಕ್ಕೆ ಅಡ್ಡಿಪಡಿಸಿ, ರಾಧಾ ಅವರ ವೈದ್ಯಕೀಯ ದಾಖಲೆಗಳನ್ನು ತೆಗೆದುಕೊಂಡು ಹೋಗಿರುವುದಾಗಿ ದೂರಲಾಗಿದೆ. ನಂತರ ಆಸ್ಪತ್ರೆಯ ಕಾರಿಡಾರ್‌ನಲ್ಲಿ ನಾಗರಾಜ ಹಾಗೂ ಇನ್ನೋರ್ವ ಮಹಿಳೆಯು ವೈದ್ಯರಿಗೆ ಅವಾಚ್ಯ ಶಬ್ದದಿಂದ ನಿಂದಿಸಿ ಜೀವಬೆದರಿಕೆ ಹಾಕಿರುವುದಾಗಿ ದೂರಲಾಗಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News