×
Ad

ಕುಂದಾಪುರ: ಟ್ರಂಪ್ ಸುಂಕ ನೀತಿ ಖಂಡಿಸಿ ಸಿಪಿಎಂ ಪ್ರತಿಭಟನೆ

Update: 2025-08-14 21:22 IST

ಕುಂದಾಪುರ : ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಭಾರತ ದಿಂದ ರಫ್ತಾಗುವ ಸರಕುಗಳ ಮೇಲೆ ಶೇ. 50ರಷ್ಟು ಸುಂಕ ವಿಧಿಸುವ ನೀತಿಯನ್ನು ಭಾರತ ಕಮ್ಯುನಿಸ್ಟ್ ಪಕ್ಷ (ಮಾರ್ಕ್ಸ್‌ವಾದಿ-ಸಿಪಿಐಎಂ) ಕುಂದಾಪುರ ತಾಲೂಕು ಸಮಿತಿ ಖಂಡಿಸಿದ್ದು, ಕುಂದಾಪುರದ ಶಾಸ್ತ್ರಿ ಸರ್ಕಲ್ ಬಳಿ ಪ್ರತಿಭಟನೆ ನಡೆಸಿ ಟ್ರಂಪ್ ಅವರ ಛಾಯಾಚಿತ್ರವನ್ನು ಸುಡುವ ಮೂಲಕ ಪ್ರತಿಭಟಿಸಿತು.

ಪ್ರತಿಭಟನೆಯನ್ನು ಉದ್ದೇಶಿಸಿ ಮಾತನಾಡಿದ ಪಕ್ಷದ ತಾಲೂಕು ಕಾರ್ಯದರ್ಶಿ ಚಂದ್ರಶೇಖರ್ ವಿ., ಭಾರತಕ್ಕೆ ಶೇ.50 ಸುಂಕ ವಿಧಿಸುವ ಅಮೆರಿಕವು ಬಾಂಗ್ಲಾ, ಪಾಕಿಸ್ತಾನ, ಆಫ್ಘಾನಿಸ್ತಾನ, ಶ್ರೀಲಂಕಾ ದೇಶಗಳಿಗೆ ಸರಾಸರಿ ಶೇ.20ರಷ್ಟು ಮಾತ್ರ ಸುಂಕ ವಿಧಿಸುತ್ತಿದೆ. ರಷ್ಯಾದಿಂದ ತೈಲ ಖರೀದಿಸುವುದನ್ನು ವಿರೋಧಿಸುವ ಟ್ರಂಪ್ ತನ್ನ ಮಿತ್ರ ರಾಷ್ಟ್ರಗಳು ರಷ್ಯಾದೊಂದಿಗೆ ವ್ಯವಹರಿಸುವುದನ್ನು ವಿರೋಧಿಸುತ್ತಿಲ್ಲ ಎಂದು ಟೀಕಿಸಿದರು.

ಕೇಂದ್ರ ಸರಕಾರ ಅಮೆರಿಕದಈ ನೀತಿಯನ್ನು ದೃಢವಾಗಿ ವಿರೋಧಿಸಬೇಕು. ಭಾರತದ ಜನತೆಯ ಹಿತಾಸಕ್ತಿ ಕಾಪಾಡಬೇಕು. ಅಮೆರಿಕ ಸಾಮ್ರಾಜ್ಯಶಾಹಿಗೆ ಸಡ್ಡು ಹೊಡೆಯುವ ಬ್ರಿಕ್ಸ್ ಬಲಪಡಿಸಬೇಕು, ವಿಸ್ತರಿಸಬೇಕು. ಆದರೆ ಇದೇ ಹೊತ್ತಿಗೆ ಕಡಿಮೆ ಬೆಲೆಯಲ್ಲಿ ರಷ್ಯಾದಿಂದ ಕಚ್ಚಾ ತೈಲ ಖರೀದಿಸಿದರೂ ಭಾರತದ ತೈಲ ಬೆಲೆ ಕಡಿಮೆ ಯಾಗಿಲ್ಲ. ಈ ವ್ಯವಹಾರದಲ್ಲಿ ಆಪ್ತ ಉದ್ಯಮಿಗಳಿಗೆ ಲಾಭ ದೊರಕಿಸುವಲ್ಲಿ ಮೋದಿ ಸರ್ಕಾರ ಶ್ರಮಿಸುತ್ತಿದೆ ಎಂದು ಆರೋಪಿಸಿದರು.

ಪಕ್ಷದ ಜಿಲ್ಲಾ ಮುಖಂಡರಾದ ಎಚ್ ನರಸಿಂಹ ಮಾತನಾಡಿ, ಅಮೆರಿಕದ ಸುಂಕ ನೀತಿಗೆ ವಿರುದ್ಧವಾಗಿ ಅಮೆರಿಕ ದಿಂದ ಪ್ರಸ್ತಾವಿತ ಯುದ್ಧ ವಿಮಾನಗಳ ಖರೀದಿ ನಿಲ್ಲಿಸಬೇಕೆಂದು ಒತ್ತಾಯಿಸಿದರು.

ಕಾರ್ಯಕ್ರಮದ ನೇತೃತ್ವವನ್ನು ಪಕ್ಷದ ತಾಲೂಕು ಮುಖಂಡರಾದ ಪಂಜು ಜಿ. ಡಿ, ಸಂತೋಷ್ ಹೆಮ್ಮಾಡಿ, ಕೆ. ಶಂಕರ್, ಮಹಾಬಲ ವಿ., ಕಟ್ಟಡ ಕಾರ್ಮಿಕರ ಮುಖಂಡರಾದ ಚಿಕ್ಕ ಮೊಗವೀರ, ಕೃಷ್ಣ ಹಂಗಳೂರು, ರಾಜಾ, ಹಂಚು ಸಂಘದ ಮುಖಂಡರಾದ ಸುರೇಂದ್ರ, ವಾಸು, ಜಿಲ್ಲಾ ಸಮಿತಿ ಸದಸ್ಯೆ ಭಲ್ಕಿಸ್, ಶೀಲಾವತಿ, ಆಟೋ ಸಂಘದ ಮುಖಂಡರಾದ ರಾಜು ದೇವಾಡಿಗ ವಹಿಸಿದ್ದರು. ರಮೇಶ್ ಗುಲ್ವಾಡಿ ಸ್ವಾಗತಿಸಿ ನಿರೂಪಿಸಿದರು.







 

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News