ಕುಂದಾಪುರ | ಹೈನುಗಾರಿಕೆ ಸ್ಥಳೀಯ ಆರ್ಥಿಕತೆಗೆ ವರದಾನ : ಜಯಕರ ಶೆಟ್ಟಿ ಇಂದ್ರಾಳಿ
ಕುಂದಾಪುರ, ಡಿ.11: ಬೇರೆಲ್ಲ ಕ್ಷೇತ್ರ, ಉದ್ಯಮಗಳಲ್ಲಿ ಹಳ್ಳಿಯ ಹಣ ಪಟ್ಟಣಕ್ಕೆ ಹೋಗುತ್ತವೆ. ಆದರೆ ಹೈನುಗಾರಿಕೆಯಿಂದ ಮಾತ್ರ ಪಟ್ಟಣದ ಹಣ ಹಳ್ಳಿಗೆ ಬರುತ್ತಿದೆ. ಹೈನುಗಾರಿಕೆ ನಮ್ಮ ಸ್ಥಳೀಯ ಆರ್ಥಿಕತೆಗೆ ವರದಾನವಾಗಿದೆ ಎಂದು ಉಡುಪಿ ಜಿಲ್ಲಾ ಸಹಕಾರ ಯೂನಿಯನ್ ಅಧ್ಯಕ್ಷ ಬಿ.ಜಯಕರ ಶೆಟ್ಟಿ ಇಂದ್ರಾಳಿ ಹೇಳಿದ್ದಾರೆ.
ಗುರುವಾರ ಹೆಮ್ಮಾಡಿಯ ಮೀನುಗಾರರ ಪ್ರಾಥಮಿಕ ಸಹಕಾರ ಸಂಘದ ಮತ್ಸ್ಯ ಜ್ಯೋತಿ ಸಭಾಂಗಣದಲ್ಲಿ ರಾಜ್ಯ ಸಹಕಾರ ಮಹಾಮಂಡಲ, ಜಿಲ್ಲಾ ಸಹಕಾರ ಯೂನಿಯನ್ ಹಾಗೂ ಜಿಲ್ಲಾ ಸಹಕಾರ ಇಲಾಖೆಗಳ ಸಂಯುಕ್ತ ಆಶ್ರಯದಲ್ಲಿ ಕುಂದಾಪುರ ಹಾಗೂ ಬೈಂದೂರು ತಾಲೂಕಿನ ಹಾಲು ಉತ್ಪಾದಕರ ಸಹಕಾರ ಸಂಘಗಳ ಅಧ್ಯಕ್ಷರು, ಮುಖ್ಯ ಕಾರ್ಯ ನಿರ್ವಹಣಾಧಿಕಾರಿಗಳಿಗೆ ನಡೆದ ಜಿಲ್ಲಾ ಮಟ್ಟದ ವಿಶೇಷ ತರಬೇತಿ ಕಾರ್ಯಾಗಾರವನ್ನು ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು.
ದ.ಕ.ಸಹಕಾರಿ ಹಾಲು ಉತ್ಪಾದಕರ ಒಕ್ಕೂಟದ ನಿರ್ದೇಶಕ ಎನ್. ಮಂಜಯ್ಯ ಶೆಟ್ಟಿ ಮಾತನಾಡಿ, ನಮ್ಮಲ್ಲಿ ಹಾಲಿಗೆ 42 ರೂ. ಇದ್ದು, ಬೇರೆ ರಾಜ್ಯಗಳಲ್ಲಿ 50 ರೂ.ಗಿಂತ ಹೆಚ್ಚಿದೆ. ಹೈನುಗಾರರಿಗೆ ಸರಕಾರದ 5 ರೂ. ಸಬ್ಸಿಡಿ ನಿಯಮಿತವಾಗಿ ಸಿಗುತ್ತಿಲ್ಲ. ಒಂದೋ ಸಬ್ಸಿಡಿ ನಿರಂತರ ಕೊಡಬೇಕು. ಇಲ್ಲದಿದ್ದರೆ ಹಾಲಿನ ದರವನ್ನು ಕನಿಷ್ಠ 52 ರೂ.ಗೆ ಏರಿಸಬೇಕು ಎಂದವರು ಒತ್ತಾಯಿಸಿದರು.
ದ.ಕ. ಸಹಕಾರಿ ಹಾಲು ಉತ್ಪಾದಕರ ಒಕ್ಕೂಟದ ನಿರ್ದೇಶಕಿ ಮಮತಾ ಆರ್. ಶೆಟ್ಟಿ ಮಾತನಾಡಿದರು. ಬಳಿಕ ಸಂಪನ್ಮೂಲ ವ್ಯಕ್ತಿಗಳಾದ ಡಾ. ಶಿವರಾಮ ಕಾರಂತ ಟ್ರಸ್ಟ್ ನ ಅಧ್ಯಕ್ಷ ಗಣನಾಥ ಶೆಟ್ಟಿ ಎಕ್ಕಾರು ಮಾನವ ಸಂಪನ್ಮೂಲ ಅಭಿವೃದ್ಧಿ ಮತ್ತು ಸಹಕಾರ ಚಳುವಳಿ ಕುರಿತು ಹಾಗೂ ಪಶು ವೈದ್ಯ, ಒಕ್ಕೂಟದ ನಿವೃತ್ತ ಉಪ ವ್ಯವಸ್ಥಾಪಕ ಡಾ. ಅನಿಲ್ ಕುಮಾರ್ ಶೆಟ್ಟಿ ಆಧುನಿಕ ಹೈನುಗಾರಿಕೆ ಮತ್ತು ಹಾಲಿನ ಗುಣಮಟ್ಟದ ಬಗ್ಗೆ ಉಪನ್ಯಾಸ ನೀಡಿದರು.
ಹೆಮ್ಮಾಡಿ ಮೀನುಗಾರರ ಪ್ರಾಥಮಿಕ ಸಹಕಾರ ಸಂಘದ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಉದಯ ಕುಮಾರ್ ಹಟ್ಟಿಯಂಗಡಿ ಉಪಸ್ಥಿತರಿದ್ದರು. ಜಿಲ್ಲಾ ಸಹಕಾರ ಯೂನಿಯನ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಅನುಷಾ ಕೋಟ್ಯಾನ್ ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು.