ಕುಂದಾಪುರ | ಸಂವಿಧಾನದ ಆಶಯ ಪೂರ್ಣಪ್ರಮಾಣದಲ್ಲಿ ಈಡೇರಿಸುವಲ್ಲಿ ಎಲ್ಲರ ಪಾತ್ರ ಮುಖ್ಯ: ವಿನೋದ್ ಕ್ರಾಸ್ತ
ಕುಂದಾಪುರ, ನ.26: ನಮ್ಮದು ಅನೇಕ ಧರ್ಮಗಳಿರುವ ದೇಶ. ಎಲ್ಲ ಧರ್ಮಗಳಿಗೂ ಅವರದೇ ಆದ ಧರ್ಮಗ್ರಂಥಗಳಿವೆ. ಆದರೆ ಅದೆಲ್ಲದಕ್ಕೂ ಡಾ.ಬಿ.ಆರ್.ಅಂಬೇಡ್ಕರ್ ರಚಿಸಿರುವ ನಮ್ಮ ದೇಶದ ಸಂವಿಧಾನವೇ ಶ್ರೇಷ್ಠ ಗ್ರಂಥ. ಪವಿತ್ರವಾದ ಸಂವಿಧಾನದ ಆಶಯಗಳು ಪೂರ್ಣಪ್ರಮಾಣದಲ್ಲಿ ಈಡೇರಿಸುವಲ್ಲಿ ಎಲ್ಲರ ಪಾತ್ರವೂ ಮುಖ್ಯ ಎಂದು ಕುಂದಾಪುರ ನಗರ ಯೋಜನಾ ಪ್ರಾಧಿಕಾರದ ಅಧ್ಯಕ್ಷ ವಿನೋದ್ ಕ್ರಾಸ್ತ ಹೇಳಿದ್ದಾರೆ.
ಕುಂದಾಪುರ ತಾಲೂಕು ಆಡಳಿತ, ತಾ.ಪಂ., ಪುರಸಭೆ, ಸಮಾಜ ಕಲ್ಯಾಣ ಇಲಾಖೆ ಕುಂದಾಪುರ, ಪರಿಶಿಷ್ಟ ಜಾತಿ ಮತ್ತು ಪಂಗಡಗಳ ಸಂಘಟನೆಗಳ ಸಂಯುಕ್ತ ಆಶ್ರಯದಲ್ಲಿ ಕುಂದಾಪುರ ಜೂನಿಯರ್ ಕಾಲೇಜಿನ ಕಲಾ ಮಂದಿರದಲ್ಲಿ ಬುಧವಾರ ನಡೆದ ಸಂವಿಧಾನ ದಿನಾಚರಣೆಯನ್ನು ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು.
ಕುಂದಾಪುರ ತಾಲೂಕು ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷ ಹರಿಪ್ರಸಾದ್ ಶೆಟ್ಟಿ ಕಾನ್ಮಕ್ಕಿ ಅಧ್ಯಕ್ಷತೆ ವಹಿಸಿದ್ದರು. ಕುಂದಾಪುರ ತಹಶೀಲ್ದಾರ್ ಪ್ರದೀಪ್ ಕುರುಡೇಕರ್ ಎಸ್. ಸಂವಿಧಾನ ಪೀಠಿಕೆಯನ್ನು ಬೋಧಿಸಿದರು.
ಪುರಸಭೆ ಮುಖ್ಯಾಧಿಕಾರಿ ಆನಂದ ಜೆ., ಸಾಮಾಜಿಕ ನ್ಯಾಯ ಸಮಿತಿ ಮಾಜಿ ಅಧ್ಯಕ್ಷ ಪ್ರಭಾಕರ ವಿ., ಕುಂದಾಪುರ ಸರಕಾರಿ ಪ.ಪೂ. ಕಾಲೇಜಿನ ಪ್ರಾಂಶುಪಾಲ ರಾಮಕೃಷ್ಣ ಬಿ.ಜಿ., ದಲಿತ ಸಂಘಟನೆಯ ಪ್ರಮುಖರಾದ ರಾಜು ಬೆಟ್ಟಿನಮನೆ, ದೀಪಾ ಜಪ್ತಿ, ಮತ್ತಿತರರು ಉಪಸ್ಥಿತರಿದ್ದರು.
ಯುವ ಲೇಖಕ ಮಂಜುನಾಥ ಹಿಲಿಯಾಣ ಸಂವಿಧಾನ ದಿನಾಚರಣೆಯ ಕುರಿತಂತೆ ಉಪನ್ಯಾಸ ನೀಡಿದರು. ಸಮಾಜ ಕಲ್ಯಾಣ ಇಲಾಖೆಯ ಸಹಾಯಕ ನಿರ್ದೇಶಕ ರಮೇಶ್ ಕುಲಾಲ್ ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿದರು. ಹಾಸ್ಟೆಲ್ ಮೇಲ್ವಿಚಾರಕಿ ರಾಧಿಕಾ ರಾಣಿ ಕಾರ್ಯಕ್ರಮ ನಿರೂಪಿಸಿದರು.
ಸಂವಿಧಾನ ದಿನಾಚರಣೆ ಅಂಗವಾಗಿ ಶಾಸ್ತ್ರಿ ಸರ್ಕಲ್ ನಿಂದ ಜೂನಿಯರ್ ಕಾಲೇಜಿನವರೆಗೆ ಸಂವಿಧಾನ ಜಾಥಾ ನಡೆಯಿತು. ಕುಂದಾಪುರ ಉಪ ವಿಭಾಗಾಧಿಕಾರಿ ರಶ್ಮೀ ಎಸ್.ಆರ್. ಜಾಥಾಗೆ ಚಾಲನೆ ನೀಡಿದರು.