×
Ad

ಕುಂದಾಪುರ | ಜಲ ಜೀವನ್ ಮಿಷನ್ ಯೋಜನೆಯನ್ನು ಗ್ರಾಪಂಗಳು ಗಂಭೀರವಾಗಿ ಪರಿಗಣಿಸಿ : ಗಂಟಿಹೊಳೆ

Update: 2025-11-18 22:44 IST

ಕುಂದಾಪುರ, ನ.18: ಸಾವಿರಾರು ಕೋಟಿ ಜೆ.ಜೆ.ಎಂ ಯೋಜನೆಯನ್ನು ಗ್ರಾಮ ಪಂಚಾಯತ್ ಗಳು ಗಂಭೀರವಾಗಿ ಪರಿಗಣಿಸಬೇಕು. ಇಲ್ಲವಾದಲ್ಲಿ ಯೋಜನೆ ಹಳ್ಳ ಹಿಡಿಯಬಹುದು. ಗ್ರಾಮ ಪಂಚಾಯತ್ ಗಳು ಸಂಪೂರ್ಣ ಕೆಲಸ ಆಗದೆ, ನೀರು ಪ್ರತಿ ಮನೆಗಳಿಗೆ, ಯೋಜನೆಯ ಪೂರ್ವದಲ್ಲಿ ತಿಳಿಸಿದ ಪ್ರಮಾಣದಲ್ಲಿ ಹೋಗದ ತನಕ ನಿರಾಪೇಕ್ಷಣ ಪತ್ರ ಕೊಡಬಾರದು. ಕೆಲಸ ಅಪೂರ್ಣ ಆಗಿರುವಾಗ ಎನ್.ಓ.ಸಿ ಕೊಟ್ಟರೆ ಆ ಪಂಚಾಯತ್ಗಳೇ ಹೊಣೆ ಎಂದು ಶಾಸಕ ಗುರುರಾಜ ಗಂಟಿಹೊಳೆ ಹೇಳಿದರು.

ಕುಂದಾಪುರ ತಾಲೂಕು ಪಂಚಾಯತ್ ಸಭಾಂಗಣದಲ್ಲಿ ಮಂಗಳವಾರ ಬ್ಯೆಂದೂರು ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಗ್ರಾಮ ಪಂಚಾಯತ್ ಅಧ್ಯಕ್ಷರು/ಉಪಾಧ್ಯಕ್ಷರು ಹಾಗೂ ಪಿಡಿಒಗಳ ಮತ್ತು ಇತರೆ ಇಲಾಖೆಗಳ ಪ್ರಗತಿ ಪರಿಶೀಲನಾ ಸಭೆಯಲ್ಲಿ ಅವರು ಮಾತನಾಡುತ್ತಿದ್ದರು.

ಕಾಮಗಾರಿಯನ್ನು ಬೇರೆಬೇರೆ ಗುತ್ತಿಗೆದಾರರು ನಿರ್ವಹಿಸಿದ್ದಾರೆ. ಪೈಪ್ ಲೈನ್, ನಳ್ಳಿ ಕಟ್ಟೆ, ಟ್ಯಾಂಕ್ ನಿರ್ಮಾಣ ಬೇರೆಯವರು ಮಾಡಿದ್ದಾರೆ. ಇವರೆಲ್ಲ ಅವರವರ ಕೆಲಸ ಮುಗಿಸಿ ಹೋಗುತ್ತಾರೆ. ನೀರು ಸರಬರಾಜು ಜವಬ್ದಾರಿ ಯಾರದ್ದು? ಅಲ್ಲಿ ಆಗ ಯಾರೂ ಇರುವುದಿಲ್ಲ. ಗುತ್ತಿಗೆಯ ಅವಧಿ, ನಿಯಮಾವಳಿ ಮೊದಲಾದ ಕಾರಣ ಹೇಳಿ ತಪ್ಪಿಸಿಕೊಳ್ಳುತ್ತಾರೆ. ಆಗ ಜನರಿಂದ ದಿನ ಪಂಚಾಯತ್ ಬೈಗುಳ ಕೇಳಬೇಕಾಗುತ್ತದೆ. ಈಗಾಗಲೇ ವಿಳಂಬವಾಗಿದೆ. ಇನ್ನಾದರೂ ಗ್ರಾಮ ಪಂಚಾಯತ್ ಗಳು ಎಚ್ಚೆತ್ತು ಕೊಳ್ಳಬೇಕು ಎಂದು ಅವರು ತಿಳಿಸಿದರು.

ಈಗಾಗಲೇ ಕೆಲವು ಪಂಚಾಯತ್ ಗಳು ಜೆಜೆಎಂ ಪೈಪ್ ಲೈನ್ ಬಳಿಸಿ ತಾವೇ ನೀರು ಬಿಡುವ ಪ್ರಯತ್ನ ಮಾಡಿವೆ. ಇದರಿಂದ ಕೆಲವು ಪಂಚಾಯತ್ ಗಳು ಯಶಸ್ಸು ಕಂಡರೂ ಕೂಡಾ ಪೈಪ್ ಲೈನ್ ಸರಿಯಾಗದ ಕಾರಣ ನೀರು ಸರಿಯಾಗಿ ಹರಿಯುತ್ತಿಲ್ಲ. ಸಮಸ್ಯೆಗಳನ್ನು ಗುರುತಿಸಿ ಅವರಿಂದ ಸರಿಪಡಿಸಿಕೊಳ್ಳಬೇಕು ಎಂದರು.

16 ಗ್ರಾಮ ಪಂಚಾಯತ್ಗಳಲ್ಲಿ ಭಾಗಶ: ಜೆಜೆಎಂ ಪೈಪ್ಲೈನ್ ಮೂಲಕ ಕುಡಿಯುವ ನೀರನ್ನು ಸರಬರಾಜು ಮಾಡಲಾಗುತ್ತಿದೆ ಎಂದು ಜೆಜೆಎಂ ಅಧಿಕಾರಿಗಳು ಮಾಹಿತಿ ನೀಡಿದರು.

ಆಲೂರು, ವಂಡ್ಸೆ ಗ್ರಾಮ ಪಂಚಾಯತ್ ನಲ್ಲಿ ಅನುಷ್ಟಾನದ ಬಗೆ ಅಭಿಪ್ರಾಯ ಹಂಚಿಕೊಂಡರು.

ವಂಡ್ಸೆ ಗ್ರಾಮ ಪಂಚಾಯತ್ ಉಪಾಧ್ಯಕ್ಷ ಗೋವರ್ಧನ್ ಜೋಗಿ ಮಾತನಾಡಿ, ನಳ್ಳಿಗಳಲ್ಲಿ ನಿಮಿಷಕ್ಕೆ 10 ಲೀಟರ್‌ ಬರುವ ಸಾಮರ್ಥ್ಯವಿದೆ ಎಂದು ಹೇಳಿದ್ದರು. ಖಂಡಿತಾ ಅದು ಬರುತ್ತಿಲ್ಲ. ಮೇಲ್ಬಾಗದ ಮನೆಗಳಿಗೆ ನೀರು ಹೋಗುತ್ತಿಲ್ಲ, ಪೈಪ್ ಲೈನ್ ಮಾಡುವ ಸಂಪೂರ್ಣ ಅವೈಜ್ಞಾನಿಕವಾಗಿ ಮಾಡಿದ್ದಾರೆ. ಎರಡು ಇಂಚಿನ ಪೈಪ್ ಮಾತ್ರ ಬಳಕೆ ಮಾಡಿದ್ದಾರೆ. ಹಾಗಾಗಿ ನೀರು ತುಂಬಾ ನಿಧಾನವಾಗಿ ಬರುತ್ತಿದೆ ಎಂದು ದೂರಿದರು.

ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ರಸ್ತೆಗಳನ್ನು ಕತ್ತರಿಸಿ ಪೈಪ್ ಲೈನ್ ಮಾಡಿದ್ದಾರೆ. ಸರಿಯಾಗಿ ಅದರ ಪುರ್ನ ನಿರ್ಮಾಣ ಮಾಡಿಲ್ಲ. ಬೇಕಾಬಿಟ್ಟಿಯಾಗಿ ತೇಪೆ ಹಾಕಿದ್ದಾರೆ. ಹಾಲಿ ಇರುವ ನೀರಿನ ಪೈಪ್ ಲೈನ್ ಗೂ ಹಾನಿ ಮಾಡಿದ್ದಾರೆ. ರಸ್ತೆಗಳೂ ಹಾಳಾಗಿದೆ ಎಂಬ ಆರೋಪಗಳು ಉಪ್ಪುಂದ, ಕೊಲ್ಲೂರು, ಇಡೂರು, ಕೆರಾಡಿ, ಅಂಪಾರು, ಜಡ್ಕಲ್ ಮೊದಲಾದ ಗ್ರಾಮ ಪಂಚಾಯತ್ ಗಳಿಂದ ಕೇಳಿ ಬಂದವು. 20 ದಿನಗಳ ಒಳಗೆ ರಸ್ತೆಗೆ ಆಗಿರುವ ಹಾನಿಯನ್ನು ವ್ಯವಸ್ಥಿತವಾಗಿ ಸರಿಪಡಿಸಿ ಎಂದು ಅಧಿಕಾರಿಗಳಿಗೆ ಶಾಸಕರು ಸೂಚನೆ ನೀಡಿದರು.

ಎಲ್ಲಾ ಗ್ರಾಮ ಪಂಚಾಯತ್ ಮಟ್ಟದಲ್ಲೂ ಜೆಜೆಎಂ ಸಮಸ್ಯೆಯಿದೆ. ಎಷ್ಟು ವರ್ಷಗಳಿಂದ ಕಾಮಗಾರಿ ನಡೆಯುತ್ತಿದೆ. ಇನ್ನೂ ಒಂದು ಹಂತಕ್ಕೂ ಬಂದಿಲ್ಲ. ಅವರು ಮಾಡಿರುವ ಪೈಪ್ ಲೈನ್ ಬಳಸಿಕೊಂಡು ಪಂಚಾಯತ್ಗಳು ನೀರು ಬಿಡಲು ಸಾಧ್ಯವಿಲ್ಲ. ಎಲ್ಲ ಕಡೆ ಒಂದೇ ಅಳತೆಯ ಪೈಪ್ ಅಳವಡಿಸಿದ್ದಾರೆ. ನೀರು ಸರಬರಾಜು ಪೈಪ್ ಯಾವ ರೀತಿಯಲ್ಲಿ ಅಳವಡಿಸಬೇಕು ಎನ್ನುವುದು ಸಾಮಾನ್ಯ ವ್ಯಕ್ತಿಗಾದರೂ ಗೊತ್ತಿರುತ್ತದೆ. ಇಲ್ಲಿ ಇಂಜಿನಿಯರ್ಗಳು ಎಲ್ಲ ಒಂದೇ ಅಳತೆಯ ಪೈಪ್ ಅಳವಡಿಸಿರುವುದರಿಂದ ನೀರು ವೇಗವಾಗಿ ಹೋಗಲು ಸಾಧ್ಯವಿಲ್ಲ ಎಂದು ಗ್ರಾಮ ಪಂಚಾಯತ್ ಪ್ರತಿನಿಧಿಗಳು ಅಸಮಾಧಾನ ವ್ಯಕ್ತ ಪಡಿಸಿದರು.

ಬೈಂದೂರು ಕ್ಷೇತ್ರದಲ್ಲಿ ಸತತ ಸಭೆಯ ಬಳಿಕ 94ಸಿ ಹಕ್ಕುಪತ್ರ ಆರ್ಹರಿಗೆ ಸಿಕ್ಕಿದೆ. ಕ್ಷೇತ್ರ ಯಾವುದಾದರೂ ಆರ್ಹ ಫಲಾನುಭವಿಗಳಿಗೆ ಹಕ್ಕು ಪತ್ರ ಸಿಗದಿದ್ದರೆ ಮಾಹಿತಿ ನೀಡಿ ಎಂದು ಶಾಸಕ ಗಂಟಿಹೊಳೆ ಹೇಳಿದರು. ಕುಮ್ಕಿ ಹಕ್ಕು ರೈತರದ್ದೆ. ಗದ್ದೆಯ ತಲೆಯ ಭಾಗವನ್ನು ರೈತರದ್ದೇ ಆಗಿರುತ್ತದೆ. ಈ ಬಗ್ಗೆ ಶೀಘ್ರ ಕುಮ್ಕಿ ಹಕ್ಕಿನ ಬಗ್ಗೆ ಹೋರಾಟ ಮಾಡಿರುವ ತಜ್ಞರನ್ನು ಕರೆಯಿಸಿ ಸಭೆ ನಡೆಸಲಾಗುವುದು ಎಂದರು.

ಈಗಾಗಲೇ ಬೈಂದೂರು ಕ್ಷೇತ್ರದಲ್ಲಿ 2700 ವಸತಿ, 7904 ನಿವೇಶನ ಬೇಡಿಕೆ ಇದೆ. ವಸತಿ ಸಮಸ್ಯೆ ಹಾಗೂ ನಿವೇಶನ ಸಮಸ್ಯೆಯನ್ನು ಬಗೆಹರಿಸಲು ಪರಿಣಾಮಕಾರಿ ಕ್ರಮಗಳನ್ನು ಹಾಕಿಕೊಳ್ಳಬೇಕು. ಅಕ್ರಮ ಸಕ್ರಮದಲ್ಲಿ ಮಿತಿಗಿಂತ ಜಾಸ್ತಿ ಒತ್ತುವರಿ ಮಾಡಿಕೊಂಡಿರುವ ಸರಕಾರಿ ಭೂಮಿಯನ್ನು ಸರಕಾರದ ಮಾನದಂಡದಷ್ಟೆ ನೀಡಿ ಉಳಿಕೆಯನ್ನು ನಿವೇಶನ ರಹಿತರಿಗೆ ನೀಡುವ ಬಗ್ಗೆಯೋ ಚಿಂತನೆ ಮಾಡಲಾಗುತ್ತಿದೆ. ಪ್ರತಿ ಗ್ರಾಮ ಪಂಚಾಯತ್ ಮಟ್ಟದಲ್ಲೂ ನಿವೇಶನ ರಹಿತರ ಪಟ್ಟಿ ಇದೆ. 500 ಕ್ಕೂ ಹೆಚ್ಚು ಅರ್ಜಿ ಇರುವ ಪಂಚಾಯತ್ಗಳಿವೆ. ಸರಕಾರಿ ಸ್ಥಳಗಳನ್ನು ಗುರುತಿಸಿ ಪಂಚಾಯತ್ಗಳ ಸ್ವಾಧಿನಕ್ಕೆ ತಗೆದುಕೊಳ್ಳುವ ಕೆಲಸ ಪಂಚಾಯತ್ಗಳು ಮಾಡಬೇಕು ಎಂದರು.

ಸಭೆಯಲ್ಲಿ ಅಕ್ರಮ-ಸಕ್ರಮ, ಜಾತಿ ಪ್ರಮಾಣ ಪತ್ರ, ಬೀಡಾಡಿ ಗೋವುಗಳಿಂದ ಕೃಷಿಕರಿಗೆ ಆಗುತ್ತಿರುವ ತೊಂದರೆ, ಬೀದಿ ನಾಯಿಗಳ ಸಮಸ್ಯೆ, ಕೆಎಸ್ಆರ್ಟಿಸಿ, 9/11 ಸಮಸ್ಯೆ, ಪಡಿತರ ಚೀಟಿ ಗೊಂದಲ, ಟ್ಯಾಂಕರ್‌ ನೀರು ಸರಬರಾಜು, ಪ್ರವಾಸೋದ್ಯಮ, 15ನೇ ಹಣಕಾಸು ಬಿಡುಗಡೆ ಆಗದೆ ಇರುವುದು, ಬಿಎಸ್ಸೆನ್ನೆಲ್ ನೆಟ್ವರ್ಕ್ ಸಮಸ್ಯೆ, ಇ-ಸ್ವತ್ತು ಆಸ್ತಿ ನೊಂದಣಿಯಲ್ಲಿ ಹೆಸರು ಬಿಟ್ಟು ಹೋದವರ ಹೆಸರು ಸೇರ್ಪಡೆಗೆ ಕಾಲಾವಕಾಶ ನೀಡಬೇಕು ಇತ್ಯಾದಿ ವಿಷಯಗಳ ಬಗ್ಗೆ ಚರ್ಚೆ ನಡೆಯಿತು.

ಕುಂದಾಪುರ ತಹಶೀಲ್ದಾರ್ ಪ್ರದೀಪ ಕುರ್ಡೇಕರ್, ಬೈಂದೂರು ತಹಶೀಲ್ದಾರ್ ಎಚ್.ರಾಮಚಂದ್ರಪ್ಪ, ಜಿಲ್ಲಾ ಉಪ ಕಾರ್ಯದರ್ಶಿ ಎಸ್.ಎಸ್.ಖಾದ್ರಳ್ಳಿ, ಕುಂದಾಪುರ ತಾಪಂ ಕಾರ್ಯನಿರ್ವಹಣಾಧಿಕಾರಿ ಮಹೇಶ್, ಬೈಂದೂರು ತಾಪಂ ಕಾರ್ಯನಿರ್ವಹಣಾಧಿಕಾರಿ ರಾಮದಾಸ್, ಜಿಪಂ ಕುಡಿಯುವ ನೀರು ವಿಭಾಗದ ಇಂಜಿನಿಯರ್ ಉದಯ ಶೆಟ್ಟಿ ಉಪಸ್ಥಿತರಿದ್ದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News