ಕುಂದಾಪುರ | ಕೆಲಸದ ವೇಳೆ ಬಾವಿಗೆ ಬಿದ್ದು ವ್ಯಕ್ತಿ ಮೃತ್ಯು
ಸಾಂದರ್ಭಿಕ ಚಿತ್ರ
ಕುಂದಾಪುರ : ಹಗ್ಗದ ಸಹಾಯದಿಂದ ಬಾವಿಯಿಂದ ಮೇಲಕ್ಕೆ ಬರುತ್ತಿರುವಾಗ ಅಕಸ್ಮಿಕವಾಗಿ ಹಗ್ಗ ಕೈಯಿಂದ ಜಾರಿ ವ್ಯಕ್ತಿಯೊರ್ವರು ಬಾವಿಗೆ ಬಿದ್ದು ನೀರಿನಲ್ಲಿ ಮುಳುಗಿ ಮೃತಪಟ್ಟ ಘಟನೆ ಗೋಪಾಡಿ ಗ್ರಾಮದ ಮೂಡುಗೋಪಾಡಿಯಲ್ಲಿ ಬುಧವಾರ ನಡೆದಿದೆ.
ಮೃತರನ್ನು ಬಳ್ಕೂರು ಗ್ರಾಮದ ಸುಭಾಷ್ (50) ಎಂದು ಗುರುತಿಸಲಾಗಿದೆ.
ಬಾವಿ ತೋಡುವ ಕೆಲಸ ಮಾಡುವ ಸುಭಾಷ್ ತನ್ನ ಅಣ್ಣ ಸುರೇಂದ್ರರೊಂದಿಗೆ ಮೂರು ತಿಂಗಳಿನಿಂದ ಕರುಣಾಕರ ಎಂಬವರ ಜಾಗದಲ್ಲಿ ಬಾವಿ ತೋಡುವ ಕೆಲಸ ಮಾಡುತಿದ್ದರು. ಪ್ರತಿದಿನದಂತೆ ಬುಧವಾರ ಬೆಳಗ್ಗೆ ಕೆಲಸಕ್ಕೆ ಹೋಗಿದ್ದು, ಬಾವಿಯ ರಿಂಗ್ ಬದಿಯಲ್ಲಿ ಜಲ್ಲಿ ಕಲ್ಲು ಹಾಕಲು ಅಳವಡಿಸಿದ್ದ ಪಿವಿಸಿ ಪೈಪ್ ಬಾವಿಗೆ ಬಿದ್ದಿರುವುದನ್ನು ತೆಗೆಯಲು ಅಪರಾಹ್ನ 1:45ಕ್ಕೆ ಬಾವಿಗೆ ಇಳಿದಿದ್ದು, ಪೈಪ್ ಸಿಗದ ಕಾರಣ ಹಗ್ಗ ಹಿಡಿದು ಮೇಲಕ್ಕೆ ಬರುತ್ತಿರುವಾಗ ಈ ಘಟನೆ ನಡೆದಿದೆ.
ಅಕಸ್ಮಿಕವಾಗಿ ಹಗ್ಗ ಕೈಜಾರಿ ಸುಭಾಷ್ ನೀರಿಗೆ ಬಿದ್ದಿದ್ದು, ನೀರಿನಲ್ಲಿ ಮುಳುಗಿ ಮೃತಪಟ್ಟಿದ್ದಾರೆ ಎನ್ನಲಾಗಿದೆ.
ಈ ಕುರಿತು ಕುಂದಾಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.