ಬಿರುಗಾಳಿಗೆ ಕುಂದಾಪುರ ತಾಲೂಕು ತತ್ತರ: ಮನೆ, ತೋಟಗಳಿಗೆ ಹಾನಿ
ಉಡುಪಿ, ಜು.27: ಕಳೆದ ರಾತ್ರಿ ಬೀಸಿದ ಮಳೆ ಸಹಿತ ಭಾರೀ ಬಿರುಗಾಳಿಗೆ ಕುಂದಾಪುರ ತಾಲೂಕು ತತ್ತರಿಸಿ ಹೋಗಿದ್ದು, ಜಿಲ್ಲೆಯಾದ್ಯಂತ 60ಕ್ಕೂ ಅಧಿಕ ಮನೆಗಳು, ಕೊಟ್ಟಿಗೆ, ಕೃಷಿ ತೋಟ ಹಾಗೂ ವಿದ್ಯುತ್ ಕಂಬಗಳಿಗೆ ಹಾನಿಯಾಗಿ, ಒಟ್ಟು 29ಲಕ್ಷ ರೂ. ನಷ್ಟ ಉಂಟಾಗಿದೆ.
ಕಾರ್ಕಳ- 55.3ಮಿ.ಮೀ., ಕುಂದಾಪುರ- 105.6ಮಿ.ಮೀ., ಉಡುಪಿ- 38.9ಮಿ.ಮೀ., ಬೈಂದೂರು- 81.0ಮಿ.ಮೀ., ಬ್ರಹ್ಮಾವರ- 66.0ಮಿ.ಮೀ., ಕಾಪು- 38.8ಮಿ.ಮೀ., ಹೆಬ್ರಿ- 89.2ಮಿ.ಮೀ. ಮಳೆಯಾಗಿದ್ದು, ಜಿಲ್ಲೆಯಲ್ಲಿ ಸರಾಸರಿ 75.0 ಮಿ.ಮೀ. ಮಳೆಯಾಗಿರುವ ಬಗ್ಗೆ ವರದಿಯಾಗಿದೆ.
ಕಳೆದ ರಾತ್ರಿಯಿಂದ ನಸುಕಿನ ವೇಳೆಯವರೆಗೆ ಜಿಲ್ಲೆಯ ವಿವಿಧೆಡೆ ಭಾರೀ ಗಾಳಿ ಬೀಸುತ್ತಿದ್ದು, ಬೆಳಗ್ಗೆ ಯಿಂದ ಮಳೆ ಪ್ರಮಾಣ ಇಳಿಕೆಯಾಗಿತ್ತು. ಮಧ್ಯಾಹ್ನ ವೇಳೆ ಬಿಸಿಲಿನ ವಾತಾವರಣ ಕಂಡುಬಂದಿದೆ. ಈ ಮೂಲಕ ಕಳೆದ ಕೆಲವು ದಿನಗಳಿಂದ ಸುರಿಯುತ್ತಿರುವ ಮಳೆಗೆ ಕೊಂಚ ವಿರಾಮ ಸಿಕ್ಕಿದಂತಾಗಿದೆ.
ಕುಂದಾಪುರ ತಾಲೂಕಿನಲ್ಲಿ ಬೀಸಿದ ಭಾರೀ ಗಾಳಿಗೆ 36 ಮನೆಗಳಿಗೆ ಹಾನಿಯಾಗಿ ಒಟ್ಟು 16.67ಲಕ್ಷ ರೂ. ಹಾಗೂ ತೋಟ ಹಾಗೂ ಕೊಟ್ಟಿಗೆಗೆ ಹಾನಿಯಾಗಿ ಒಟ್ಟು 2.86ಲಕ್ಷ ರೂ. ನಷ್ಟ ಉಂಟಾಗಿದೆ. ಬೈಂದೂರು ತಾಲೂಕಿನ ಎಂಟು ಮನೆಗಳಿಗೆ ಹಾನಿಯಾಗಿ ಒಟ್ಟು 5.60ಲಕ್ಷ ರೂ., ಕಾಪು ತಾಲೂಕಿನ ಮೂರು ಮನೆಗಳಿಗೆ 60ಸಾವಿರ ರೂ., ಹೆಬ್ರಿ ತಾಲೂಕಿನ ಎಂಟು ಮನೆಗಳಿಗೆ ಹಾನಿಯಾಗಿ 3.35ಲಕ್ಷ ರೂ. ನಷ್ಟ ಅಂದಾಜಿಸಲಾಗಿದೆ.
ಕುಂದಾಪುರದಲ್ಲಿ ಅಪಾರ ಹಾನಿ: ವಿಪರೀತ ಗಾಳಿಯಿಂದ ಕುಂದಾಪುರ ತಾಲೂಕಿನ ರಟ್ಟಾಡಿ, ಹೆಂಗವಳ್ಳಿ, ಕುಂದಬಾರಂದಾಡಿ ಹಾಗೂ ಹೆಮ್ಮಾಡಿ ಗ್ರಾಮಗಳ ನಾಲ್ಕು ಮನೆಗಳ ಶೀಟುಗಳಿಗೆ ಗಾಳಿಗೆ ಹಾರಿ ಹೋಗಿವೆ. ನೂಜಾಡಿ ಬಗ್ವಾಡಿ ಗ್ರಾಮದ ಮನೆ ಯೊಂದರ ಹೆಂಚು ಹಾರಿ ಹೋಗಿ, ರೀಪು ಪಕ್ಕಾಸಿಗೆ ಹಾನಿಯಾಗಿವೆ. ಬೀಜಾಡಿ ಗ್ರಾಮದ ಮನೆ ಮೇಲೆ ಮರ ಮತ್ತು ವಿದ್ಯುತ್ ಕಂಬ ಬಿದ್ದು ಅಪಾರ ಹಾನಿಯಾಗಿದೆ.
ಗಾಳಿಯಿಂದ ಮರಗಳು ಬಿದ್ದು ಬಸ್ರೂರು, ಹೆಮ್ಮಾಡಿ, ತಲ್ಲೂರು ಆಲೂರು ಗ್ರಾಮದ ಎರಡು, ಕುಂಭಾಶಿ, ಕಾರ್ವಾಡಿ, ವಡೇರಹೋಬಳಿ, ಸೇನಾಪುರ, ಹೊಸಾಡು, ಯಡ್ಯಾಡಿ ಮತ್ಯಾಡಿ, ನೂಜಾಡಿ ಗ್ರಾಮದ ಎರಡು, ಹೊಸಂಗಡಿ, ಹಕ್ಲಾಡಿ, ಬಟ್ಟೆಕುದ್ರು ಗ್ರಾಮದ ಬಗ್ವಾಡಿ, ಕುಂದಾಪುರ ಫಿಶ್ ಮಾರ್ಕೆಟ್ ರಸ್ತೆ, ಕೋಣಿ, ವಂಡ್ಸೆ, ಕಾಳಾವರ, ಕುಂದಬಾರಂದಾಡಿ ಗ್ರಾಮದ ಮೂರು ಮನೆಗಳಿಗೆ, ಜಪ್ತಿ, ನೂಜಾಡಿ, ಬಗ್ವಾಡಿ, ಹೆಮ್ಮಾಡಿ, ವಂಡ್ಸೆ ಗ್ರಾಮದ ಎರಡು ಮನೆಗಳಿಗೆ ಅಪಾರ ಹಾನಿಯಾಗಿವೆ. ಅದೇ ರೀತಿ ಮಳೆಯಿಂದ ಕುಂದಾಪುರ ಚಿಕನ್ ಸಾಲ್ ರಸ್ತೆ, ಆನಗಳ್ಳಿ, ಚಿತ್ತೂರು ಮಾರಣಕಟ್ಟೆ, ಅಂಪಾರು, ಸೇನಾಪುರ, ವಂಡ್ಸೆ ಎಂಬಲ್ಲಿ ಮನೆಗಳ ಗೋಡೆ ಕುಸಿದು ಅಪಾರ ನಷ್ಟ ಉಂಟಾಗಿದೆ.
ಇತರೆಡೆ ಮನೆಗಳಿಗೆ ಹಾನಿ: ಬೈಂದೂರು ತಾಲೂಕಿನ ಬಡಾಕೆರೆ ಗ್ರಾಮದ ಎರಡು, ಕಾಲ್ತೂಡು, ಹೇರೂರು ಗ್ರಾಮದ ಎರಡು, ಶಿರೂರು, ಕಿರಿಮಂಜೇಶ್ವರ, ಕಾಪು ತಾಲೂಕಿನ ಪಾದೂರು, ಹೆಜಮಾಡಿ, ಮಜೂರು ಗ್ರಾಮಗಳ ಮನೆಗಳಿಗೆ ಗಾಳಿ ಮಳೆಯಿಂದ ಹಾನಿಯಾಗಿರುವ ಬಗ್ಗೆ ವರದಿಯಾಗಿದೆ.
ಹೆಬ್ರಿ ತಾಲೂಕಿನ ಕುಚ್ಚೂರು ಗ್ರಾಮದ ಮೂರು, ಹೆಬ್ರಿ ಗ್ರಾಮದ ಮೂರು, ಶೇಡಿಮನೆ ಗ್ರಾಮದ ಎರಡು, ಚಾರ ಗ್ರಾಮಗಳ ಮನೆಗಳಿಗೆ ಮಳೆಯಿಂದ ಹಾನಿಯಾಗಿರುವ ಬಗ್ಗೆ ತಾಲೂಕು ಕಚೇರಿ ಮೂಲಗಳು ತಿಳಿಸಿವೆ. ಸ್ಥಳಕ್ಕೆ ಅಧಿಕಾರಿಗಳು ತೆರಳಿ ಪರಿಶೀಲನೆ ನಡೆಸಿದ್ದಾರೆಂದು ತಿಳಿದುಬಂದಿದೆ.
ಅಡಿಕೆ ತೋಟಗಳಿಗೆ ಅಪಾರ ಹಾನಿ
ಭಾರೀ ಮಳೆಗಾಳಿಯಿಂದ ಕುಂದಾಪುರ ತಾಲೂಕಿನ ಕಾಳಾವರ ಗ್ರಾಮದ ಮತ್ತು ನುಜಾಡಿ ಗ್ರಾಮದ ಬಗ್ವಾಡಿ ಗ್ರಾಮದ ತಲಾ ಎರಡು ಮನೆಗಳ ಹಾಗೂ ಉಳ್ಳೂರು 74, ಗೋಪಾಡಿ, ಅಂಪಾರು ಗ್ರಾಮಗಳ ತಲಾ ಒಂದು ದನದ ಕೊಟ್ಟಿಗೆಗಳಿಗೆ ಹಾನಿಯಾಗಿರುವ ಬಗ್ಗೆ ವರದಿಯಾಗಿದೆ.
ಬೀರುಗಾಳಿಯಿಂದ ಆಲೂರು ಗ್ರಾಮದ ವನಜ ಎಂಬವರ ತೋಟದಲ್ಲಿನ ಸುಮಾರು 36 ಅಡಿಕೆ ಮರಗಳು ಬಿದ್ದು ಹಾನಿಯಾಗಿ, ಒಟ್ಟು 38,000ರೂ. ಮತ್ತು ಹೆಮ್ಮಾಡಿ ಗ್ರಾಮದ ಕೃಷ್ಣ ಪೂಜಾರಿ ಎಂಬವರ ಅಡಿಕೆ ತೋಟದ ಮೇಲೆ ಮರ ಬಿದ್ದು 25 ಅಡಿಕೆ ಮರಗಳು ತುಂಡಾಗಿ 20,000ರೂ., ಹೆಂಗವಳ್ಳಿ ಗ್ರಾಮದ ಶ್ರೀಧರ ಶೆಟ್ಟಿ ಎಂಬವರ ತೋಟದ 20ಕ್ಕೂ ಹೆಚ್ಚು ಅಡಿಕೆ ಮರಗಳು ಹಾನಿಯಾಗಿ 20,000ರೂ., ಹೆಂಗವಳ್ಳಿ ಗ್ರಾಮದ ಮೂಕಾಂಬಿಕಾ ಶೆಟ್ಟಿ ಎಂಬವರ ತೋಟದ 30ಕ್ಕೂ ಹೆಚ್ಚು ಅಡಿಕೆ ಮರಗಳು ಹಾನಿಯಾಗಿ 50,000ರೂ. ನಷ್ಟ ಉಂಟಾಗಿದೆ. ಶಂಕರನಾರಾಯಣ ಹಾಗೂ ಸಿದ್ದಾಪುರ ಗ್ರಾಮದಲ್ಲಿಯೂ ಅಡಿಕೆ ತೋಟವು ಗಾಳಿ ಮಳೆಗೆ ಹಾನಿಯಾಗಿ 28,000ರೂ. ನಷ್ಟವಾಗಿದೆ.