ಕುಂದಾಪುರ | ಮೀನುಗಾರಿಕಾ ದೋಣಿ ಮಗುಚಿ ಮೂವರು ಮೀನುಗಾರರು ನಾಪತ್ತೆ: ಓರ್ವ ಪಾರು
ಕುಂದಾಪುರ: ಗಂಗೊಳ್ಳಿ ಬಂದರಿನಿಂದ ಮೀನುಗಾರಿಕೆಗೆ ತೆರಳಿದ್ದ ದೋಣಿಯೊಂದು ಅಲೆಗಳ ಅಬ್ಬರಕ್ಕೆ ಸಿಲುಕಿ ಮಗುಚಿಬಿದ್ದ ಪರಿಣಾಮ ಮೂವರು ಮೀನುಗಾರರು ನಾಪತ್ತೆಯಾದ ಘಟನೆ ಇಂದು ಬೆಳಗ್ಗೆ ನಡೆದಿದೆ.
ಗಂಗೊಳ್ಳಿ ಸೀವಾಕ್ ಬಳಿ ಈ ದುರ್ಘಟನೆ ನಡೆದಿದ್ದು, ಓರ್ವ ಮೀನುಗಾರನನ್ನು ರಕ್ಷಿಸಲಾಗಿದೆ. ಸುರೇಶ್ ಖಾರ್ವಿ, ಜಗನ್ನಾಥ್ ಖಾರ್ವಿ ಮತ್ತು ರೋಹಿತ್ ಖಾರ್ವಿ ನಾಪತ್ತೆಯಾದ ಮೀನುಗಾರರು. ಸಂತೋಷ್ ಖಾರ್ವಿ ಎನ್ನುವವರನ್ನು ಬೇರೊಂದು ಬೋಟ್ ನವರು ರಕ್ಷಿಸಿದ್ದಾರೆ ಎಂದು ತಿಳಿದುಬಂದಿದೆ.
ಸುರೇಶ ಖಾರ್ವಿ ಮಾಲಕತ್ವದ ದೋಣಿಯಲ್ಲಿ ಮಂಗಳವಾರ ಬೆಳಗ್ಗೆ ನಾಲ್ವರು ಮೀನುಗಾರರು ಮೀನುಗಾರಿಕೆ ಹೊರಟಿದ್ದರು. ಈ ವೇಳೆ ಅಲೆಗಳ ಅಬ್ಬರಕ್ಕೆ ಸಿಲುಕಿದ ದೋಣಿ ಮಗುಚಿ ಬಿದ್ದಿದೆ. ಈ ವೇಳೆ ಸಂತೋಷ್ ಖಾರ್ವಿ ಈಜಿ ಬೇರೊಂದು ದೋಣಿ ತಲುಪಿದ್ದರೆ, ಉಳಿದ ಮೂವರು ಮೀನುಗಾರರು ಈತನಕ ನಾಪತ್ತೆಯಾಗಿದ್ದಾರೆ.
ಘಟನಾ ಸ್ಥಳಕ್ಕೆ ಪೊಲೀಸರು, ಕರಾವಳಿ ಕಾವಲು ಪಡೆ ಪೊಲೀಸರು ಭೇಟಿ ನೀಡಿದ್ದು ಶೋಧ ಕಾರ್ಯ ನಡೆಸುತ್ತಿದ್ದಾರೆ. ದೋಣಿ ಸಮುದ್ರ ಪಾಲಾಗಿದ್ದು ಲಕ್ಷಾಂತರ ರೂ.ನಷ್ಟ ಸಂಭವಿಸಿದೆ ಎನ್ನಲಾಗಿದೆ.