×
Ad

ಕುಂದಾಪುರ: ಸಮುದ್ರಕ್ಕೆ ಇಳಿದ ಮೂವರು ಮೃತ್ಯು: ಓರ್ವನ ರಕ್ಷಣೆ

ಗೋಪಾಡಿ ಬೀಚ್‌ನಲ್ಲಿ ದುರಂತ

Update: 2025-09-07 17:48 IST

ಕುಂದಾಪುರ, ಸೆ.7: ಸಮುದ್ರದಲ್ಲಿ ಈಜಲು ತೆರಳಿದ್ದ ಬೆಂಗಳೂರು ಮೂಲದ ವಿದ್ಯಾರ್ಥಿಗಳಲ್ಲಿ ಮೂವರು ನೀರಿನಲ್ಲಿ ಮುಳುಗಿ ಮೃತಪಟ್ಟು, ಓರ್ವ ಗಂಭೀರವಾಗಿ ಅಸ್ವಸ್ಥಗೊಂಡ ಘಟನೆ ಕುಂದಾಪುರ ತಾಲೂಕಿನ ಗೋಪಾಡಿ ಗ್ರಾ.ಪಂ ವ್ಯಾಪ್ತಿಯ ಚರ್ಕಿಕಡು ಎಂಬಲ್ಲಿನ ಕಡಲ ತೀರದಲ್ಲಿ ರವಿವಾರ ಮಧ್ಯಾಹ್ನ ವೇಳೆ ನಡೆದಿದೆ.

ಮೃತರನ್ನು ಬೆಂಗಳೂರಿನ ಗೌತಮ್(19), ಲೋಕೇಶ್(19), ಆಶೀಶ್(18) ಎಂದು ಗುರುತಿಸಲಾಗಿದೆ. ನಿರೂಪ್ ಎಂಬಾತನನ್ನು ಸ್ಥಳೀಯರು ರಕ್ಷಿಸಿದ್ದು, ಗಂಭೀರ ಸ್ಥಿತಿಯಲ್ಲಿರುವ ಅವರು ಮಣಿಪಾಲ ಕೆಎಂಸಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಬೆಂಗಳೂರಿನ ವಿವಿಧೆಡೆ ಕಾಲೇಜು ವಿದ್ಯಾಭ್ಯಾಸದಲ್ಲಿ ತೊಡಗಿಸಿಕೊಂಡ ತಂಡವು ಎಲ್ಲರಿಗೂ ಸಂಪರ್ಕದಲ್ಲಿದ್ದ ಸ್ನೇಹಿತನೊಬ್ಬನ ನೇತೃತ್ವದಲ್ಲಿ 10 ಮಂದಿ ಒಗ್ಗೂಡಿ ಉಡುಪಿ ಜಿಲ್ಲಾ ಪ್ರವಾಸ ಕೈಗೊಂಡಿದ್ದರು. ಹೀಗೆ ಗೌತಮ್, ಲೋಕೇಶ್, ಆಶೀಶ್, ನಿರೂಪ್, ಧನುಷ್, ಅಂಜನ್, ಕುಶಲ್, ರಾಹುಲ್, ಅನೀಶ್, ನಿತಿನ್ ಎಂಬವರು ಎರಡು ದಿನಗಳ ಹಿಂದೆ ಇವರು ರೈಲಿನ ಮೂಲಕ ಉಡುಪಿಗೆ ಬಂದು ಉಡುಪಿ ಶ್ರೀಕೃಷ್ಣ ಮಠ, ಮಲ್ಪೆ ಬೀಚ್ ಮೊದಲಾದೆಡೆ ತಿರುಗಾಡಿ ಬಳಿಕ ಕುಂಭಾಶಿಯ ವಸತಿ ಗೃಹವೊಂದಕ್ಕೆ ಬಂದು ಕೊಠಡಿ ಬಾಡಿಗೆ ಪಡೆದಿದ್ದರು.

ಇವರು ರವಿವಾರ ಮೊಬೈಲ್ ಲೋಕೇಶನ್ ನೋಡಿ ತಮ್ಮ ರೂಮಿನಿಂದ ನಡೆದು ಸಮುದ್ರ ತೀರಕ್ಕೆ ಹೋಗಿದ್ದರು. ಇವರಲ್ಲಿ ಅಂಜನ್ ಎಂಬವರು ಸಮುದ್ರಕ್ಕೆ ಇಳಿಯದೆ ವಾಪಾಸ್ಸಾಗಿದ್ದು ಉಳಿದ 9 ಮಂದಿ ನೀರಿಗೆ ಇಳಿದಿದ್ದರು. ಈ ವೇಳೆ ಇವರು ಅಲೆಗಳ ಅಬ್ಬರಕ್ಕೆ ಸಿಲುಕಿ ನೀರಿನಲ್ಲಿ ಮುಳುಗಿದ್ದು ತೀರದ ಸಮೀಪವೇ ಇದ್ದ ಇಬ್ಬರು ಮೇಲೆ ಬಂದು ಮತ್ತಿಬ್ಬರನ್ನು ರಕ್ಷಿಸಿದ್ದಾರೆ ಎನ್ನಲಾಗಿದೆ.

ನಿರೂಪ್‌ನನ್ನು ಸ್ಥಳೀಯರಾದ ಉಮೇಶ್ ಪೂಜಾರಿ ಕೂಡಲೇ ಸಮುದ್ರಕ್ಕೆ ಹಾರಿ ರಕ್ಷಿಸಿ ಮೇಲೆ ಕರೆತಂದಿದ್ದು, ತೀವ್ರವಾಗಿ ಅಸ್ವಸ್ಥಗೊಂಡ ಅವರನ್ನು ಕೂಡಲೇ ಆಸ್ಪತ್ರೆಗೆ ಸಾಗಿಸಲಾಯಿತು. ನೀರುಪಾಲಾದ ಮೂವರಿಗಾಗಿ ತೀವ್ರ ಹುಡುಕಾಟ ನಡೆಸಲಾಯಿತು. ಸ್ಥಳಕ್ಕೆ ಆಗಮಿಸಿದ ಮುಳುಗು ತಜ್ಞ ಈಶ್ವರ್ ಮಲ್ಪೆ ಹಾಗೂ ಸ್ಥಳೀಯರು ತಕ್ಷಣ ಕಾರ್ಯಪ್ರವೃತ್ತರಾದರು. ಇದರಿಂದ ತಕ್ಷಣವೇ ಮೂವರ ಮೃತದೇಹವು ಅಲ್ಲೇ ಸಮೀಪ ಪತ್ತೆಯಾಯಿತು.

ಅಗ್ನಿ ಶಾಮಕದಳ ಹಾಗೂ ಸ್ಥಳೀಯ ಪೊಲೀಸರು ಕೂಡ ಈ ಸಂದರ್ಭ ದಲ್ಲಿ ಹಾಜರಿದ್ದರು. ಮೂವರ ಮೃತದೇಹ ಗಳನ್ನು ಹೆಚ್ಚಿನ ಮರಣೋತ್ತರ ಪರೀಕ್ಷೆಗಾಗಿ ಮಣಿಪಾಲ ಕೆ.ಎಂ.ಸಿ. ಆಸ್ಪತ್ರೆಗೆ ರವಾನಿಸಲಾಗಿದೆ. ಕರಾವಳಿ ಪ್ರವಾಸ ಮುಗಿಸಿ ಈ ಯುವಕರ ತಂಡ ರವಿವಾರ ಸಂಜೆ ವಾಪಾಸ್ ಬೆಂಗಳೂರಿಗೆ ರೈಲು ಟಿಕೆಟ್ ಬುಕ್ ಮಾಡಿದ್ದರು ಎಂದು ತಿಳಿದುಬಂದಿದೆ.

ಘಟನಾ ಸ್ಥಳಕ್ಕೆ ಕುಂದಾಪುರ ಶಾಸಕ ಎ.ಕಿರಣ್ ಕುಮಾರ್ ಕೊಡ್ಗಿ, ಡಿವೈಎಸ್ಪಿ ಎಚ್.ಡಿ.ಕುಲಕರ್ಣಿ, ಕುಂದಾಪುರ ಠಾಣೆ ಪ್ರಭಾರ ಪೊಲೀಸ್ ನಿರೀಕ್ಷಕ ಜಯರಾಮ್ ಗೌಡ, ಎಸ್ಸೈಗಳಾದ ನಂಜಾ ನಾಯ್ಕ್, ನೂತನ್ ಗೌಡ, ಕರಾವಳಿ ಕಾವಲು ಪಡೆ ಪೊಲೀಸರು, ಕೆ.ಎನ್.ಡಿ ಸಿಬ್ಬಂದಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದರು. ಈ ಬಗ್ಗೆ ಕುಂದಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ನಡೆಯುತ್ತಿದೆ.





 

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News