ಕುಂದಾಪುರ | ಡಾ.ಬಿ.ಆರ್.ಅಂಬೇಡ್ಕರ್ ಅವರ 70ನೇ ಪರಿನಿಬ್ಬಾಣ ಕಾರ್ಯಕ್ರಮ
ಕುಂದಾಪುರ, ಡಿ.7: ಕರ್ನಾಟಕ ದಲಿತ ಸಂಘರ್ಷ ಸಮಿತಿ ಅಂಬೇಡ್ಕರ್ ವಾದ ತಾಲೂಕು ಸಮಿತಿ ಕುಂದಾಪುರ ವತಿಯಿಂದ ಭಾರತ ಭಾಗ್ಯವಿಧಾತ ಸಂವಿಧಾನ ಶಿಲ್ಪಿ ಭಾರತ ರತ್ನ ಬಾಬಾ ಸಾಹೇಬ್ ಡಾ.ಬಿ.ಆರ್.ಅಂಬೇಡ್ಕರ್ ಅವರ 70ನೇ ಪರಿನಿಬ್ಬಾಣ ಕಾರ್ಯಕ್ರಮ ಕುಂದಾಪುರದ ಡಾ.ಬಿ.ಆರ್.ಅಂಬೇಡ್ಕರ್ ಮೆಟ್ರಿಕ್ ಪೂರ್ವ ವಿದ್ಯಾರ್ಥಿ ನಿಲಯದಲ್ಲಿ ನಡೆಯಿತು.
ದಸಂಸ ಜಿಲ್ಲಾ ಪ್ರಧಾನ ಸಂಚಾಲಕ ಟಿ.ಮಂಜುನಾಥ ಗಿಳಿಯಾರು ಮಾತನಾಡಿ, ಬಾಬಾ ಸಾಹೇಬರು ತನ್ನ ಬಾಲ್ಯದ ದಿನಗಳಿಂದ ಸಮಾಜದಲ್ಲಿ ನೋವು ಅವಮಾನವನ್ನು ಸಹಿಸುತ್ತಲೇ ಬಂದಿದ್ದು, ಎಂದಿಗೂ ಅವಮಾನ ನಿಂದನೆಗಳ ಬಗ್ಗೆ ಅಂಜಿದವರಲ್ಲ. ಎಲ್ಲವನ್ನೂ ಧೈರ್ಯದಿಂದ ಎದುರಿಸಿ ಛಲದಿಂದ ಬೆಳೆದು ಅತೀ ಹೆಚ್ಚಿನ ವಿದ್ಯಾಬ್ಯಾಸ ಪಡೆದು ಈ ದೇಶದ ಸಂವಿಧಾನ ಶಿಲ್ಪಿಯಾದದ್ದು ಇತಿಹಾಸ ಎಂದರು.
ತಾಲೂಕು ಸಂಚಾಲಕ ಕೆ.ಸಿ.ರಾಜುಬೆಟ್ಟಿನಮನೆ ಮಾತನಾಡಿ, ಇಂದಿನ ವಿದ್ಯಾರ್ಥಿಗಳ ಮನ ಮನಸ್ಸುಗಳಲ್ಲಿ ಅಂಬೇಡ್ಕರರ ವಿಚಾರದಾರೆಗಳನ್ನು ಬಿತ್ತರಿಸಿ ಮುಂದಿನ ವಿದ್ಯಾರ್ಥಿ ಜೀವನ ಉತ್ತಮಗೊಳಿಸುವ ಉದ್ದೇಶ ವಾಗಿದೆ. ಅಂಬೇಡ್ಕರ್ ಅವರ ಜೀವನದ ಮೌಲ್ಯವನ್ನು ಅರಿತು ಉತ್ತಮ ವಿದ್ಯಾರ್ಥಿಗಳಾಗಿ ಭಾರತದ ಭವಿಷ್ಯ ರೂಪಿಸುವಲ್ಲಿ ಶ್ರಮ ವಹಿಸಬೇಕು. ವಿದ್ಯಾರ್ಥಿ ಜೀವನದಲ್ಲಿ ಶಿಸ್ತನ್ನು ಮೈಗೂಡಿಸಿಕೊಂಡು ಹೆತ್ತವರಿಗೆ ಗುರು ಹಿರಿಯನ್ನು ಪೂಜ್ಯ ಭಾವನೆಯಿಂದ ಕಾಣಬೇಕು. ಯಾವುದೇ ದುಷ್ಚಟಗಳಿಗೆ ಬಲಿಯಾಗದೆ ಸದಾ ಸಮಾಜದ ಹಿತಕ್ಕಾಗಿ ಶ್ರಮಿಸಿದರೆ ನಿಮ್ಮಲ್ಲೂ ಕೂಡ ಅಂಬೇಡ್ಕರರಂತಾಗುವ ಅವಕಾಶಗಳು ದೊರಯಲಿದೆ ಎಂದರು.
ಜಿಲ್ಲಾ ಸಂಘಟನ ಸಂಚಾಲಕ ಸುರೇಶ ಹಕ್ಲಾಡಿ, ಬ್ರಹ್ಮಾವರ ತಾಲೂಕು ಸಂಚಾಲಕ ಶ್ಯಾಮ್ ಸುಂದರ್ ತೆಕ್ಕಟ್ಟೆ, ತಾಲೂಕು ಸಂಘಟನ ಸಂಚಾಲಕ ವಿಜಯ್ ಗಿಳಿಯಾರು, ವಿದ್ಯಾರ್ಥಿ ನಿಲಯದ ಕಾರ್ಯಪಾಲಕ ಗುರುರಾಜ್ ರಾವ್, ವಿದ್ಯಾರ್ಥಿ ನಿಲಯದ ಸಿಬ್ಬಂದಿಗಳು ಉಪಸ್ಥಿತರಿದ್ದರು.