×
Ad

ಕುಂದಾಪುರ| ವಿವಿಧೆಡೆ ಒಂದು ವಾರದಲ್ಲಿ 8 ಕಾಡುಹಂದಿ ಕಳೇಬರ ಪತ್ತೆ

ಶಾಸಕರ ನೇತೃತ್ವದ ಸಭೆಗೆ ವಲಯ ಅರಣ್ಯಾಧಿಕಾರಿ ಮಾಹಿತಿ

Update: 2026-07-13 20:49 IST

ಕುಂದಾಪುರ, ಜು.13: ಜು.2ರಿಂದ 10ರವರೆಗೆ ಕುಂದಾಪುರ ಹಾಗೂ ಬೈಂದೂರಿನ ವಿವಿಧೆಡೆ ಎಂಟು ಕಾಡು ಹಂದಿಗಳ ಕಳೇಬರ ಪತ್ತೆಯಾಗಿದ್ದು, ಅದರಲ್ಲಿ ಎರಡರಲ್ಲಿ ಮಾತ್ರ ವೈದ್ಯಕೀಯ ಮಾದರಿ ಸಂಗ್ರಹ ಮಾಡಲು ಸಾಧ್ಯವಾಗಿತ್ತು. ಈ ಮಾದರಿಯನ್ನು ಮಂಗಳೂರಿಗೆ ರವಾನಿಸಲಾಗಿದ್ದು ಶೀಘ್ರ ವರದಿ ಬರುವ ನಿರೀಕ್ಷೆಯಲ್ಲಿದ್ದೇವೆ. ಸಿಕ್ಕ ಎಲ್ಲಾ ಕಳೇಬರವನ್ನು ವೈಜ್ಞಾನಿಕವಾಗಿ ಹೂಳುವ ಪ್ರಕ್ರಿಯೆ ನಡೆಸಲಾಗಿದೆ. ಅಲ್ಲದೆ ಸ್ಥಳೀಯರಿಗೆ ಈ ಕುರಿತು ಎಚ್ಚರಿಕೆ ಹಾಗೂ ಮಾಹಿತಿ ನೀಡಲಾಗುತ್ತಿದ್ದು ಅರಣ್ಯ ಇಲಾಖೆಯಿಂದ ಬೇಕಾದ ಲ್ಲಾ ಕ್ರಮ ವಹಿಸಲಾಗಿದೆ ಎಂದು ಕುಂದಾಪುರ ವಲಯ ಅರಣ್ಯಾಧಿಕಾರಿ ರಾಘವೇಂದ್ರ ಹೇಳಿದ್ದಾರೆ.

ಬೈಂದೂರು ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಒಂದಷ್ಟು ಕಡೆ ಕಾಡು ಹಂದಿಗಳು ಹಾಗೂ ಫಾರ್ಮ್ (ಸಾಕು) ಹಂದಿ ಗಳ ಸರಣಿ ಸಾವಿನ ಪ್ರಕರಣದ ಹಿನ್ನೆಲೆಯಲ್ಲಿ ಸಂಬಂಧಪಟ್ಟ ಇಲಾಖೆಗಳ ಜೊತೆ ಬೈಂದೂರು ಶಾಸಕ ಗುರುರಾಜ್ ಗಂಟೆಹೊಳೆ ನೇತೃತ್ವದಲ್ಲಿ ಸೋಮವಾರ ಕುಂದಾಪುರ ತಾಲೂಕು ಪಂಚಾಯತ್ ಸಭಾಂಗಣದಲ್ಲಿ ನಡೆದ ಸಭೆ ಯಲ್ಲಿ ಅವರು ಈ ಬಗ್ಗೆ ಮಾಹಿತಿಯನ್ನು ಹಂಚಿಕೊಳ್ಳುತ್ತಾ ವಿಷಯ ತಿಳಿಸಿದರು.

ಹಿರಿಯ ಪಶುವೈದ್ಯಾಧಿಕಾರಿ ಡಾ. ಅರುಣ್ ಕುಮಾರ್ ಹೆಗ್ಡೆ ಮಾತನಾಡಿ, ಸೇನಾಪುರದ ಖಾಸಗಿ ಮಾಲಕತ್ವದ ಸಾಕು ಹಂದಿ ಫಾರ್ಮ್‌ನಲ್ಲಿ ಕಳೆದ ಕೆಲ ದಿನಗಳಿಂದ ರವಿವಾರದವರೆಗೆ ಒಟ್ಟು ಏಳು ಸಾಕು ಹಂದಿಗಳು ಮೃತ ಪಟ್ಟಿವೆ. ಕಾಡುಹಂದಿಗಳಿಗೆ ಹೋಲಿಸಿದಲ್ಲಿ ಸಾಕು ಹಂದಿಗಳು ಮೃತಪಟ್ಟ ಕೆಲವೇ ಗಂಟೆಗಳಲ್ಲಿ ಕೊಳೆಯುವ ಸ್ಥಿತಿ ತಲುಪುತ್ತಿದೆ. ಸಾಕು ಹಂದಿಗಳ ಮರಣೋತ್ತರ ಪರೀಕ್ಷೆ ಕೂಡ ನಡೆಸಿ ಮಾದರಿಯನ್ನು ಪ್ರಯೋಗಾಲಯಕ್ಕೆ ಕಳಿಸಲಾಗಿದೆ ಎಂದು ಮಾಹಿತಿ ನೀಡಿದರು

ಕಾಡಂಚಿನ ಗ್ರಾಮಗಳಲ್ಲಿ ಕಾಡು ಹಂದಿಗಳು ಹಾಗೂ ಊರಿನಲ್ಲಿ ಉದ್ಯಮಕ್ಕಾಗಿ ಸಾಕುತ್ತಿರುವ ಸಾಕು ಹಂದಿಗಳ ಸರಣಿ ಸಾವುಗಳ ಬಗ್ಗೆ ಸಂಬಂದಪಟ್ಟ ಅರಣ್ಯ ಇಲಾಖೆ, ಪಶು ಇಲಾಖೆ, ಆರೋಗ್ಯ ಇಲಾಖೆ ಮತ್ತು ಸ್ಥಳೀಯಾಡಳಿತ ಸಹಿತ ಎಲ್ಲಾ ಇಲಾಖೆಗಳು ಸಮನ್ವಯತೆ ಸಾಧಿಸಿ ಜನರ ಭಯ ನಿವಾರಿಸಬೇಕು. ಸಮಾರೋಪಾಧಿಯಲ್ಲಿ ಕರ್ತವ್ಯ ನಿರ್ವಹಿಸಿ ಈ ಸಮಸ್ಯೆ ಬಗೆಹರಿಸಲು ಕಠಿಬದ್ಧರಾಗಬೇಕು. ಇದಕ್ಕಾಗಿ ಜನತೆ ಹೆದರುವ ಅಗತ್ಯವಿಲ್ಲ ಎಂದು ಬೈಂದೂರು ಶಾಸಕ ಗುರುರಾಜ್ ಗಂಟಿಹೊಳೆ ಭರವಸೆ ಮಾತನಾಡಿದರು.

ಸಮಸ್ಯೆ ವರದಿಯಾದ ಸಾಕು ಹಂದಿಗಳ ಕೇಂದ್ರದ ಬಗ್ಗೆ ನಿಗಾವಹಿಸಿ. ಕ್ಷಣಕ್ಷಣದ ಮಾಹಿತಿ ಸಂಗ್ರಹ ಮಾಡಲು ತಂಡ ರಚಿಸಿ. ಹಾಗೆಯೇ ಕಾಡುಹಂದಿಗಳ ಸಾವಿನ ಬಗ್ಗೆ ಅರಣ್ಯ ಇಲಾಖೆ ಮುತುವರ್ಜಿವಹಿಸಬೇಕು. ಎರಡು ಪ್ರಕರಣ ದಲ್ಲಿಯೂ ಸಾರ್ವಜನಿಕರು ಹಾಗೂ ಅಧಿಕಾರಿ- ಸಿಬ್ಬಂದಿ ಗಳಿಗೂ ಸಮಸ್ಯೆಯಾಗದಂತೆ ಎಲ್ಲರನ್ನೂ ವಿಶ್ವಾಸಕ್ಕೆ ಪಡೆದು ಕರ್ತವ್ಯ ನಿರ್ವಹಿಸಿ ಎಂದ ಶಾಸಕರು, ಇಂದಿನ ತುರ್ತು ಸಭೆಗೆ ಬಾರದ ಅಧಿಕಾರಿಗೆ ನೋಟಿಸ್ ನೀಡುವಂತೆ ಎರಡು ತಾಲೂಕಿನ ಇಓಗಳಿಗೆ ಸೂಚಿಸಿದರು.

ಕುಂದಾಪುರ ತಾಲೂಕು ವೈದ್ಯಾಧಿಕಾರಿ ಡಾ. ಪ್ರೇಮಾನಂದ ಮಾತನಾಡಿ, ಹಂದಿ ಅಥವಾ ಯಾವುದೇ ಪ್ರಾಣಿಗಳ ಮೃತ ಶರೀರ ಪತ್ತೆಯಾದರೆ ಸಂಬಂದಪಟ್ಟ ಇಲಾಖೆಗಳ ಗಮನಕ್ಕೆ ತರಬೇಕು. ವರದಿಯ ಪ್ರಕಾರ ಜನರಿಗೆ ಈ ರೋಗ ಹರಡುವುದಿಲ್ಲ. ಆದರೆ ಪ್ರಸ್ತುತ ಹಂದಿ ಮಾಂಸ ತಿನ್ನುವುದು ಸೂಕ್ತವಲ್ಲ. ಜನರಲ್ಲಿ ಅನಗತ್ಯ ಭಯ, ಗೊಂದಲ ಬೇಡ, ಜಾಗೃತಿ ಇರಲಿ ಎಂದರು.

ಸಭೆಯಲ್ಲಿ ಸಂಬಂದಪಟ್ಟ ವೈದ್ಯಾಧಿಕಾರಿಗಳು, ಪಶುವೈದ್ಯಾಧಿಕಾರಿಗಳು, ಗ್ರಾ.ಪಂ ಅಭಿವೃದ್ಧಿ ಅಧಿಕಾರಿಗಳು, ಆಡಳಿತಾಧಿಕಾರಿಗಳು ಉಪಸ್ಥಿತರಿದ್ದರು.

ಹಾಲಾಡಿಯಲ್ಲಿ ಮತ್ತೆರಡು ಸಾಕು ಹಂದಿಗಳ ಸಾವು

ಆಲೂರು, ನಾಡ, ಹಟ್ಟಿಯಂಗಡಿ, ಚಿತ್ತೂರು ಮೊದಲಾದ ಕಡೆ ಅಲ್ಲಲ್ಲಿ ಕಳೆದ 15-20 ದಿನಗಳಿಂದ ಕಾಡುಹಂದಿಗಳ ಕೊಳೆತ ಕಳೇಬರ ಪತ್ತೆಯಾಗಿವೆ. ಬಳಿಕ ಒಂದು ವಾರದ ಅಂತರದಲ್ಲಿ ಸೇನಾಪುರದ ಖಾಸಗಿ ಫಾರ್ಮ್‌ನಲ್ಲಿ ಏಳು ಸಾಕು ಹಂದಿಗಳು ಮೃತಪಟ್ಟಿವೆ. ಹಾಲಾಡಿ ಸಮೀಪದ ಖಾಸಗಿ ಜಾಗವೊಂದರಲ್ಲಿ ಸೋಮವಾರ ಎರಡು ನಾಡ ಹಂದಿಗಳ ಕಳೇಬರ ಪತ್ತೆಯಾಗಿದ್ದು ಜನರಲ್ಲಿ ಮತ್ತಷ್ಟು ಆತಂಕಕ್ಕೆ ಕಾರಣವಾಗಿದೆ.

‘ಕಳೆದ ಕೆಲ ದಿನಗಳಿಂದ ಬೈಂದೂರು ಕ್ಷೇತ್ರದ ವಂಡ್ಸೆ, ಬೈಂದೂರು ಹೋಬಳಿಯ ಕೆಲವು ಗ್ರಾಪಂ ವ್ಯಾಪ್ತಿಯಲ್ಲಿ ಹಂದಿಗಳ ಕಳೇಬರ ಪತ್ತೆಯಾಗಿವೆ. ಕಾಡುಹಂದಿಗಳಲ್ಲದೆ, ನಾಡ ಹಂದಿಗಳ ಫಾರ್ಮ್‌ನಲ್ಲೂ ಸರಣಿ ಸಾವುಗಳು ವರದಿಯಾಗಿವೆ. ಸಂಬಂಧಿತ ವಿವಿಧ ಇಲಾಖೆಗಳ ಅಧಿಕಾರಿಗಳ ನೇತೃತ್ವದಲ್ಲಿ ಸಭೆ ನಡೆಸಲಾಗಿದ್ದು ಅವರು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಹಂದಿಗಳಿಗೆ ಬಂದ ರೋಗದಿಂದ ಮನುಷ್ಯರು ಸಹಿತ ಇನ್ನಿತರ ಯಾವುದೇ ಪ್ರಾಣಿ ಗಳಿಗೆ ಈ ರೋಗ ಹರಡುವುದಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಒಗ್ಗಟ್ಟಿನ ಪ್ರಯತ್ನದ ಮೂಲಕ ಈ ಸಮಸ್ಯೆ ನಿವಾರಿಸಲು ಸೂಚಿಸಲಾಗಿದೆ. ಪ್ರಯೋಗಾಲಯದ ವರದಿ ಬಂದ ಬಳಿಕ ಸಂಬಂದಪಟ್ಟ ಅಧಿಕಾರಿಗಳು ಸೂಕ್ತ ಕ್ರಮವಹಿಸುತ್ತಾರೆ. ನಾಡ ಹಂದಿ ಸಾಕಣೆದಾರರು ತಮ್ಮ ಫಾರ್ಮ್ ಹಂದಿಗಳಲ್ಲಿ ಯಾವುದೇ ರೋಗ ಲಕ್ಷಣ ಕಂಡುಬಂದರೆ ಕೂಡಲೇ ಸಂಬಂದಪಟ್ಟವರಿಗೆ ಮಾಹಿತಿ ನೀಡಿದಲ್ಲಿ ದೊಡ್ಡ ಮಟ್ಟದ ಸಮಸ್ಯೆ ತಪ್ಪಿಸಬಹುದು.

-ಗುರುರಾಜ್ ಗಂಟಿಹೊಳೆ, ಬೈಂದೂರು ಶಾಸಕ.

‘ಪ್ರಯೋಗಾಲಯದ ವರದಿ ಬಂದ ಬಳಿಕ ಸಾವಿನ ಬಗ್ಗೆ ನಿಖರ ಕಾರಣ ತಿಳಿದುಬರಲಿದೆ. ಕಾಡಂಚಿನಲ್ಲಿ ಹಂದಿಗಳ ಕಳೇಬರ ಕಂಡುಬಂದಲ್ಲಿ ಇಲಾಖೆ ಗಳಿಗೆ ಮಾಹಿತಿ ನೀಡಬೇಕು. ಹಂದಿ ಸಾಕುವವರು ಯಾವುದೇ ಸಮಸ್ಯೆ ಗಳಿದ್ದಲ್ಲಿ ಸಂಬಂದಪಟ್ಟವರಿಗೆ ಮಾಹಿತಿ ನೀಡಬೇಕು. ಕಾಡು ಹಂದಿಗಳ ಮರಣೋತ್ತರ ಪರೀಕ್ಷಾ ಮಾದರಿಯನ್ನು ಬೆಂಗಳೂರಿನ ಭಾರತೀಯ ಪ್ರಾಣಿ ಆರೋಗ್ಯ ಮತ್ತು ಜೈವಿಕ ಸಂಸ್ಥೆಗೆ ಕಳಿಸಲಾಗಿದೆ.

-ಡಾ.ಅರುಣ್ ಕುಮಾರ್ ಹೆಗ್ಡೆ, ಹಿರಿಯ ಪಶುವೈದ್ಯಾಧಿಕಾರಿ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News