ಕುಂದಾಪುರ| ರಸ್ತೆಗೆ ಅಡ್ಡನಿಂತ ಗೂಡ್ಸ್ ವಾಹನ; ಸಂಚಾರಕ್ಕೆ ಅಡಚಣೆ
ಕುಂದಾಪುರ, ಆ.6: ಖಾಸಗಿ ಸಂಸ್ಥೆಯ ಗೂಡ್ಸ್ ವಾಹನವೊಂದು ಗೋದಾಮಿಗೆ ತಿರುವು ತೆಗೆದುಕೊಳ್ಳುವ ವೇಳೆ ಸರ್ವೀಸ್ ರಸ್ತೆ ಚರಂಡಿ ಮೇಲ್ಭಾಗದಲ್ಲಿ ಅಳವಡಿಸಿದ ಸಿಮೆಂಟ್ ಸ್ಲ್ಯಾಬ್ ತುಂಡರಿಸಿ ರಸ್ತೆಗೆ ಅಡ್ಡವಾಗಿ ನಿಂತ ಪರಿಣಾಮ ಬಹಳಷ್ಟು ಹೊತ್ತು ಕುಂದಾಪುರ ಶಾಸ್ತ್ರೀವೃತ್ತದಿಂದ ಬಸ್ರೂರು ಮೂರುಕೈ ಸರ್ವೀಸ್ ರಸ್ತೆಯಲ್ಲಿ ಸುಗಮ ಸಂಚಾರಕ್ಕೆ ಅಡಚಣೆಯಾದ ಘಟನೆ ಬುಧವಾರ ಬೆಳಿಗ್ಗೆ ನಡೆದಿದೆ.
ನಗರದ ಬಸ್ರೂರು ಮೂರುಕೈ ಬಳಿ ಇತ್ತೀಚೆಗೆ ಖಾಸಗಿ ಕಂಪೆನಿಯವರ ಗೋದಾಮು ನಿರ್ಮಾಣವಾಗಿದ್ದು ಇದಕ್ಕೆ ಸನಿಹದಲ್ಲಿ ಕೆಎಸ್ಸಾರ್ಟಿಸಿ ಡಿಪೋ ಸಹ ಇದೆ. ಗೋದಾಮಿಗೆ ಬರುವ ಘನ ವಾಹನಗಳು ಸರ್ವೀಸ್ ರಸ್ತೆ ಪಕ್ಕದ ಚರಂಡಿಯ ಮೇಲಿನಿಂದ ಸಾಗುವಾಗ ಸಿಮೆಂಟ್ ಸ್ಲ್ಯಾಬ್‌ಗಳಿಗೆ ಹಾನಿ ಯಾಗುತ್ತಿದೆ. ಅಲ್ಲದೆ ಆ ಪ್ರದೇಶದಲ್ಲಿ ಕೆಸರು ನಿಂತು ರಸ್ತೆ ರಾಡಿಯಾಗಿದೆ.
ಬುಧವಾರವೂ ಸರಕು ತುಂಬಿದ್ದ ಘನ ವಾಹನವೊಂದು ಗೋದಾಮಿನ ಬಳಿ ಚಲಾಯಿಸುವಾಗ ಚಕ್ರ ಹುದುಗಿ ಬೃಹತ್ ಲಾರಿ ರಸ್ತೆಗೆ ಅಡ್ಡಲಾಗಿ ನಿಂತ ಪರಿಣಾಮ ಅರ್ಧ ತಾಸು ಟ್ರಾಫಿಕ್ ಜಾಮ್ ಉಂಟಾಗಿದೆ. ಇದರಿಂದಾಗಿ ಇನ್ನೊಂದು ಕಡೆಯ ಸರ್ವೀಸ್ ರಸ್ತೆಗೆ ವಾಹನಗಳನ್ನು ತಿರುವು ನೀಡಿದ್ದು ಸಂಚಾರ ದಟ್ಟಣೆ ಹೆಚ್ಚಾಗಿತ್ತು.
ಕುಂದಾಪುರ ಸಂಚಾರ ಠಾಣೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿದ್ದರು.