ಕುಂದಾಪುರ | ನ್ಯಾಯಾಂಗ ವ್ಯವಸ್ಥೆಯಲ್ಲಿ ಸಾಮರಸ್ಯದ ಕೆಲಸ ಅಗತ್ಯ : ನ್ಯಾ.ವಿಭು ಬಖ್ರು
ಕೆರಾಡಿಯಲ್ಲಿ ಕಾನೂನು ಅರಿವು -ನೆರವು ಶಿಬಿರ ಉದ್ಘಾಟನೆ
ಕುಂದಾಪುರ, ಡಿ.6: ನ್ಯಾಯಾಂಗವು ನ್ಯಾಯವನ್ನು ನೀಡಲು ಪ್ರತಿದಿನ ಶ್ರಮಿಸುತ್ತದೆ. ಆದರೂ, ಅದು ತಳಮಟ್ಟವನ್ನು ತಲುಪಿದಾಗ ನ್ಯಾಯಾಂಗದ ಕೆಲಸ ಅರ್ಥಪೂರ್ಣವಾಗುತ್ತದೆ. ನ್ಯಾಯಾಂಗ ವ್ಯವಸ್ಥೆಯಲ್ಲಿ ಸಾಂಸ್ಥಿಕ ಸಹಕಾರ, ಕಾನೂನು ಅಧಿಕಾರಿಗಳು, ಜಿಲ್ಲಾಡಳಿತ, ಪೊಲೀಸ್, ಗ್ರಾಪಂಗಳು, ಎನ್ಜಿಓಗಳು, ವಿದ್ಯಾ ಸಂಸ್ಥೆಗಳು, ಸಮುದಾಯ ಸಂಸ್ಥೆಗಳು ಎಲ್ಲವೂ ಸಾಮರಸ್ಯದಿಂದ ಕೆಲಸ ಮಾಡಬೇಕಾಗುತ್ತದೆಂದು ಕರ್ನಾಟಕ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿ ವಿಭು ಬಖ್ರು ಹೇಳಿದ್ದಾರೆ.
ಕರ್ನಾಟಕ ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರ ಬೆಂಗಳೂರು, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ಉಡುಪಿ, ಜಿಲ್ಲಾಡಳಿತ ಉಡುಪಿ, ವಕೀಲರ ಸಂಘ ಕುಂದಾಪುರ, ಗ್ರಾಮ ಪಂಚಾಯತ್ ಕೆರಾಡಿ, ವೈಕುಂಠ ಬಾಳಿಗಾ ಕಾನೂನು ಕಾಲೇಜು ಉಡುಪಿ ಮತ್ತು ವರಸಿದ್ಧಿ ವಿನಾಯಕ ಕಾಲೇಜು ಕೆರಾಡಿ ಇವುಗಳ ಸಂಯುಕ್ತ ಆಶ್ರಯದಲ್ಲಿ ವರಸಿದ್ಧಿ ವಿನಾಯಕ ಕಾಲೇಜಿನಲ್ಲಿ ಶನಿವಾರ ಆಯೋಜಿಸಲಾದ ಗ್ರಾಮೀಣ ಸಮುದಾಯಗಳ ಸಬಲೀಕರಣ; ಹಕ್ಕುಗಳ ಮತ್ತು ಯೋಜನೆಗಳ ಕುರಿತು ಕಾನೂನು ಅರಿವು ಮತ್ತು ನೆರವು ಶಿಬಿರವನ್ನು ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು.
ಸಮಸ್ಯೆಗಳನ್ನು ಮೊದಲೇ ಗುರುತಿಸಿದಾಗ, ನ್ಯಾಯಾಲಯದ ಪ್ರಕರಣಗಳು ಮತ್ತು ಸಂಘರ್ಷ ಕಡಿಮೆಯಾಗುತ್ತದೆ ಮತ್ತು ಪರಿಹಾರಗಳು ಶಾಂತಿಯುತವಾಗಿ ಹೊರಹೊಮ್ಮುತ್ತವೆ. ಒಂದು ಗ್ರಾಮವು ತನ್ನ ಭವಿಷ್ಯದ ಪೀಳಿಗೆಯನ್ನು ಸಬಲೀಕರಣಗೊಳಿಸಿದಾಗ, ಅದು ಜವಾಬ್ದಾರಿಯುತ ಪೌರತ್ವಕ್ಕೆ ಅಡಿಪಾಯ ಹಾಕುತ್ತದೆ. ನ್ಯಾಯಯುತ ಸಮಾಜವೆಂದರೆ ಕಾನೂನುಗಳು ಕೇವಲ ಇರುವ ಸಮಾಜವಲ್ಲ. ಪ್ರತಿಯೊಬ್ಬ ವ್ಯಕ್ತಿಯು ಅವುಗಳನ್ನು ಪ್ರವೇಶಿಸಲು ಸಾಧ್ಯವಾಗುವಂತಹ ಸಮಾಜ ಎಂದರು.
ಮಹಿಳೆಯರು, ಹಿರಿಯ ನಾಗರಿಕರು, ರೈತರು, ಕಾರ್ಮಿಕರು, ವಿದ್ಯಾರ್ಥಿಗಳು ಮತ್ತು ದುರ್ಬಲ ಗುಂಪುಗಳಿಗೆ ಕಲ್ಯಾಣ ಯೋಜನೆಗಳು ಜಾರಿಯಲ್ಲಿದ್ದರೂ ಮಾಹಿತಿ ಕೊರತೆಯಿಂದ ಅನೇಕ ಫಲಾನುಭವಿಗಳು ಇಂದಿಗೂ ಇದರ ಪ್ರಯೋಜನ ಪಡೆದುಕೊಳ್ಳುತ್ತಿಲ್ಲ. ಕಾನೂನು ನೆರವಿನ ಮೂಲತತ್ವವು ದಾನವಲ್ಲ, ಅದು ಸಾಂವಿಧಾನಿಕ ಭರವಸೆಯಾಗಿದೆ ಎಂದು ಅವರು ಹೇಳಿದರು.
ಕರ್ನಾಟಕ ಹೈಕೋರ್ಟ್ ನ್ಯಾಯಮೂರ್ತಿ ಅನು ಸಿವರಾಮನ್ ಅಧ್ಯಕ್ಷತೆ ವಹಿಸಿದ್ದರು. ಮುಖ್ಯ ನ್ಯಾಯಮೂರ್ತಿ ವಿಭು ಬಖ್ರು, ನ್ಯಾಯಮೂರ್ತಿ ಅನು ಸಿವರಾಮನ್ ಮತ್ತು ಕೆ.ಎಸ್.ಭರತ್ ಕುಮಾರ್ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು. ಮೂರು ಜನ ಫಲಾನುಭವಿಗಳಿಗೆ ಹಕ್ಕುಪತ್ರ ಮತ್ತು ಸಂಧ್ಯಾಸುರಕ್ಷಾ ಯೋಜನೆ ಮಂಜೂರಾತಿ ಪತ್ರ ವಿತರಿಸಲಾಯಿತು. ಸರಕಾರದ ಸುಮಾರು 27 ಇಲಾಖೆಗಳ ಮಳಿಗೆಗಳನ್ನು ತೆರೆದು ಆಯಾ ಇಲಾಖೆ ಅಧಿಕಾರಿಗಳು ಇಲಾಖೆ ಕಾರ್ಯಕ್ರಮ, ಯೋಜನೆಗಳ ಬಗ್ಗೆ ಜನರಿಗೆ ಮಾಹಿತಿ ಮಾರ್ಗದರ್ಶನ ನೀಡಿದರು.
ಕರ್ನಾಟಕ ಉಚ್ಛ ನ್ಯಾಯಾಲಯದ ಮಹಾ ವಿಲೇಖನಾಧಿಕಾರಿ ಕೆ.ಎಸ್. ಭರತ್ ಕುಮಾರ್, ಉಡುಪಿ ಜಿಲ್ಲಾಧಿಕಾರಿ ಸ್ವರೂಪ ಟಿ.ಕೆ., ರಾಜ್ಯ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಎಚ್.ಶಶಿಧರ ಶೆಟ್ಟಿ, ಕೆರಾಡಿ ವರಸಿದ್ಧಿ ವಿನಾಯಕ ಕಾಲೇಜಿನ ಅಧ್ಯಕ್ಷ ಕೆರಾಡಿ ಚಂದ್ರಶೇಖರ ಶೆಟ್ಟಿ, ಕುಂದಾಪುರ ವಕೀಲರ ಸಂಘದ ಅಧ್ಯಕ್ಷ ಶಿರಿಯಾರ ಗೋಪಾಲಕೃಷ್ಣ ಶೆಟ್ಟಿ, ಕೆರಾಡಿ ಗ್ರಾಪಂ ಅಧ್ಯಕ್ಷ ಸುದರ್ಶನ ಶೆಟ್ಟಿ ಉಪಸ್ಥಿತರಿದ್ದರು.
ಉಡುಪಿ ಎಸ್ಪಿ ಹರಿರಾಂ ಶಂಕರ್, ಜಿಪಂ ಸಿಇಒ ಪ್ರತೀಕ್ ಬಾಯಲ್, ಅಪರ ಜಿಲ್ಲಾಧಿಕಾರಿ ಅಬಿದ್ ಗದ್ಯಾಲ್, ಕುಂದಾಪುರ ವಿಭಾಗದ ಉಪ ಅರಣ್ಯ ಸಂರಕ್ಷಣಾಧಿಕಾರಿ ಗಣಪತಿ ಕೆ., ಹೆಚ್ಚುವರಿ ಎಸ್ಪಿ ಸುಧಾಕರ ನಾಯ್ಕ್, ಕುಂದಾಪುರ ಡಿವೈಎಸ್ಪಿ ಎಚ್.ಡಿ.ಕುಲಕರ್ಣಿ, ಬೈಂದೂರು ಸಿಪಿಐ ಶಿವ ಕುಮಾರ್, ವಕೀಲರಾದ ಪ್ರಸನ್ನ ಕುಮಾರ್ ಶೆಟ್ಟಿ ಕೆರಾಡಿ, ಕೊಲ್ಲೂರು ಪೊಲೀಸ್ ಠಾಣೆ ಎಸ್ಸೈ ವಿನಯ್ ಎಂ.ಕೊರ್ಲಹಳ್ಳಿ, ಭೀಮಾಶಂಕರ್ ವಿವಿಧ ಇಲಾಖೆಗಳ ಜಿಲ್ಲಾ ಮತ್ತು ತಾಲೂಕು ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.
ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ಕಿರಣ್ ಎಸ್.ಗಂಗಣ್ಣವರ್ ಸ್ವಾಗತಿಸಿದರು. ರಾಜ್ಯ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಎಚ್.ಶಶಿಧರ ಶೆಟ್ಟಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಪತ್ರಕರ್ತ ರಾಜೇಶ ಕೆ.ಸಿ. ಮತ್ತು ವಕೀಲ ರಾಘವೇಂದ್ರ ಚರಣ್ ನಾವಡ ಕಾರ್ಯಕ್ರಮ ನಿರ್ವಹಿಸಿದರು. ಪ್ರಾಧಿಕಾರದ ಉಡುಪಿ ಸದಸ್ಯ ಕಾರ್ಯದರ್ಶಿ ಮನು ಪಟೇಲ್ ಬಿ.ವೈ. ವಂದಿಸಿದರು.
2 ಗ್ರಾಮಗಳಲ್ಲಿ 1,230 ಮನೆಗಳಿಗೆ ಭೇಟಿ :
ಕೆರಾಡಿ ಮತ್ತು ಬೆಲ್ಲಾಳ ಗ್ರಾಮಗಳಲ್ಲಿ ಉಡುಪಿಯ ವೈಕುಂಠ ಬಾಳಿಗಾ ಕಾನೂನು ಕಾಲೇಜಿನ ವಿದ್ಯಾರ್ಥಿಗಳು, ಪ್ಯಾರಾಲೀಗಲ್ ಸ್ವಯಂ ಸೇವಕರ ಸಹಕಾರದೊಂದಿಗೆ ಕಾನೂನು ಸೇವೆಗಳ ಪ್ರಾಧಿಕಾರದ ತಂಡವು 1,230 ಮನೆಗಳನ್ನು ಮತ್ತು ಸುಮಾರು 3,700 ವ್ಯಕ್ತಿಗಳೊಂದಿಗೆ ಸಂವಹನ ನಡೆಸಿದೆ ಎಂದು ಮುಖ್ಯ ನ್ಯಾಯಮೂರ್ತಿ ವಿಭು ಬಖ್ರು ತಿಳಿಸಿದರು.
ಪಿಂಚಣಿಗೆ ಅರ್ಹರಾದ ಕುಟುಂಬಗಳು, ಆಯುಷ್ಮಾನ್ ಕಾರ್ಡ್ ಗಳಿಗೆ ಅರ್ಹರಾಗಿರುವ ಫಲಾನುಭವಿಗಳು, ಆಧಾರ್ಗೆ ಸಂಬಂಧಿಸಿದ ನೆರವು, ಪಡಿತರ ಚೀಟಿಗಳು, ಹಕ್ಕುಪತ್ರ, ಶಿಕ್ಷಣಕ್ಕೆ ಸಂಬಂಧಿಸಿದ ಬೆಂಬಲ, ದೈಹಿಕವಾಗಿ ಅಶಕ್ತ ನಾಗರಿಕರಿಗೆ ಪ್ರಯೋಜನಗಳು, ವಿಧವೆಯರು ಮತ್ತು ಇಲಾಖೆಗಳ ಮುಂದೆ ಬಾಕಿ ಇರುವ ಸಮಸ್ಯೆಗಳನ್ನು ಗುರುತಿಸಲಾಗಿದೆ. ಈ ಎಲ್ಲಾ ಸಮಸ್ಯೆಗಳಿಗೂ ಸ್ಪಂದಿಸುವ ಕೆಲಸ ಕಾನೂನು ಸೇವೆಗಳ ಪ್ರಾಧಿಕಾರ ಮಾಡುತ್ತಿದೆ ಎಂದರು.
ಲೋಕ ಅದಾಲತ್ಗಳು, ಮಧ್ಯಸ್ಥಿಕೆ ಕೇಂದ್ರಗಳು, ಕಾನೂನು ನೆರವು ಚಿಕಿತ್ಸಾಲಯಗಳು, ಪ್ಯಾರಾ-ಲೀಗಲ್ ಸ್ವಯಂಸೇವಕರು, ಗ್ರಾಮ ಕಾನೂನು ಆರೈಕೆ ಕೇಂದ್ರಗಳು ಮತ್ತು ಸಹಾಯವಾಣಿಯನ್ನು ಕೆರಾಡಿ ಮತ್ತು ಸುತ್ತಮುತ್ತಲಿನ ಪ್ರದೇಶಗಳ ನಾಗರಿಕರು ಅಗತ್ಯವಿದ್ದಾಗ ಈ ಕಾರ್ಯ ವಿಧಾನಗಳನ್ನು ಬಳಸಿಕೊಳ್ಳಬೇಕು ಎಂದು ಅವರು ಹೇಳಿದರು.
‘ಜನರು ತಮ್ಮ ಹಕ್ಕುಗಳನ್ನು ಅರ್ಥಮಾಡಿಕೊಂಡಾಗ, ರೈತನು ಯಾವ ಯೋಜನೆಗಳನ್ನು ಪಡೆದುಕೊಳ್ಳಬಹುದು ಎಂದು ತಿಳಿದಾಗ ಮತ್ತು ನಾಗರಿಕನು ಭಯ ಅಥವಾ ಹಿಂಜರಿಕೆಯಿಲ್ಲದೆ ನ್ಯಾಯ ಸಿಗುತ್ತದೆ ಎಂದು ತಿಳಿದುಕೊಂಡಾಗ ನ್ಯಾಯದ ನಿಜವಾದ ಅರ್ಥ ತಿಳಿಯುತ್ತದೆ. ಹೀಗಾದಾಗ ಮಾತ್ರವೇ ನ್ಯಾಯಾಲಯದ ಕಟ್ಟಡದಲ್ಲಿ ಮಾತ್ರವೇ ನ್ಯಾಯ ಸಿಗುವುದಲ್ಲ, ಬದಲಾಗಿ ಜನರು ವಾಸಿಸುವ ಸ್ಥಳದಲ್ಲಿ ನ್ಯಾಯದಾನ ಪ್ರಾರಂಭವಾಗುತ್ತದೆ’
-ನ್ಯಾ.ವಿಭು ಬಖ್ರು, ಮುಖ್ಯ ನ್ಯಾಯಮೂರ್ತಿಗಳು, ಹೈಕೋರ್ಟ್