ಲ್ಯಾನ್ಸೆಟ್ ಕಮಿಷನ್ ಆಯುಕ್ತರಾಗಿ ಮಣಿಪಾಲದ ಡಾ.ನವೀನ್ ಸಾಲಿನ್ಸ್
ಡಾ.ನವೀನ್ ಸಾಲಿನ್ಸ್
ಉಡುಪಿ, ಆ.21: ವಿರಳ ಸಂಪನ್ಮೂಲವಿರುವ ಪ್ರದೇಶಗಳಲ್ಲಿ ಕ್ಯಾನ್ಸರ್‌ನ ಮಾನವೀಯ ಬಿಕ್ಕಟ್ಟಿನ ಕುರಿತಂತೆ ಅಧ್ಯಯನ ನಡೆಸುವ ಅಂತಾರಾಷ್ಟ್ರೀಯ ಮಟ್ಟದ ಲ್ಯಾನ್ಸೆಟ್ ಕಮಿಷನ್‌ನ ಕಮಿಷನರ್ ಆಗಿ ಮಣಿಪಾಲ ಕೆಎಂಸಿ ಕ್ಯಾನ್ಸರ್ ವಿಭಾಗದ ಡಾ.ನವೀನ್ ಸುಲಕ್ಷಣ್ ಸಾಲಿನ್ಸ್ ನೇಮಕಗೊಂಡಿದ್ದಾರೆ.
ಲ್ಯಾನ್ಸೆಟ್ ಕಮಿಷನ್, ಯುರೋಪ್, ಏಷ್ಯಾ, ಆಫ್ರಿಕ, ದಕ್ಷಿಣ ಅಮೆರಿಕಾ ಹಾಗೂ ಒಶಿಯಾನಾ ದೇಶಗಳ ಪ್ರತಿನಿಧಿಗಳನ್ನು ಸದಸ್ಯರಾಗಿ ಹೊಂದಿರುವ ತಜ್ಞರನ್ನು ಒಳಗೊಂಡಿರುತ್ತದೆ. ಉಪಶಮನಕಾರಿ ಮೆಡಿಸಿನ್ ಹಾಗೂ ಕ್ಯಾನ್ಸರ್ ಕೇರ್ ಕ್ಷೇತ್ರಕ್ಕೆ ನೀಡಿದ ಅಸಾಧಾರಣ ಕೊಡುಗೆಗಳಿಗಾಗಿ ಡಾ.ನವೀನ್ ಸಾಲಿನ್ಸ್‌ರನ್ನು ಕಮಿಷನ್‌ನ ನೂತನ ಆಯುಕ್ತರನ್ನಾಗಿ ನೇಮಕ ಗೊಳಿಸಲಾಗಿದೆ ಎಂದು ಆಯೋಗದ ಪ್ರಕಟಣೆ ತಿಳಿಸಿದೆ.
ನೂತನ ಲ್ಯಾನ್ಸೆಟ್ ಕಮಿಷನ್ ತನ್ನ ಪ್ರಥಮ ಸಭೆಯನ್ನು ಮುಂದಿನ ನವೆಂಬರ್ 15ರಿಂದ 17ರವರೆಗೆ ಲಂಡನ್‌ನಲ್ಲಿ ನಡೆಸಲಿದೆ. ಅನಂತರದ ಸಭೆ 2024ರಲ್ಲಿ ಕೆನಡಾದ ಟೊರೆಂಟೊದಲ್ಲಿ ನಡೆಯಲಿದೆ.
ಮುಂದಿನ ಎರಡು ವರ್ಷಗಳ (2023-2025) ಕಾಲ ಡಾ ಸಾಲಿನ್ಸ್ ನೇತೃತ್ವದ ತಜ್ಞರ ತಂಡವು ಕ್ಯಾನ್ಸರ್ ಆರೈಕೆಯಲ್ಲಿ ಬಯೋಮೆಡಿಕಲ್ ಮತ್ತು ಮಾನವೀಯ ಅಂಶಗಳ ನಡುವೆ ಕಂಡುಬರುವ ಅಸಮಾನತೆಗೆ ಕಾರಣ ವಾಗುವ ವಿಷಯ ಗಳನ್ನು ಆಳವಾಗಿ ವಿಶ್ಲೇಷಿಸಲಿದೆ. ಈ ಅಸಮಾನತೆಯನ್ನು ಸರಿಪಡಿಸುವುದು ತಂಡದ ಮುಖ್ಯ ಉದ್ದೇಶವಾಗಿದೆ.
ಕ್ಯಾನ್ಸರ್ ಸಂಶೋಧನೆ, ಶಿಕ್ಷಣ ಮತ್ತು ಕ್ಲಿನಿಕಲ್ ಕೇರ್‌ಗೆ ಸಂಪನ್ಮೂಲ ಹಂಚಿಕೆಯ ಮೇಲೆ ಪ್ರಭಾವ ಬೀರುವ ರಾಜಕೀಯ ಆರ್ಥಿಕತೆ, ಮೌಲ್ಯಾಧಾರಿತ ವ್ಯವಸ್ಥೆಗಳು ಮತ್ತು ವಾಣಿಜ್ಯ ಅಂಶಗಳನ್ನು ಕಮಿಷನ್ ವಿವರವಾಗಿ ಪರಿಶೀಲಿಸಿ ಈ ಅಸಮಾ ನತೆಯನ್ನು ಸರಿಪಡಿಸಲು ಕಾರ್ಯತಂತ್ರ ವನ್ನು ರೂಪಿಸಲಿದೆ.
ಮಣಿಪಾಲದ ಕಸ್ತೂರ್ಬಾ ವೈದ್ಯಕೀಯ ಕಾಲೇಜಿನಲ್ಲಿ ಉಪಶಮನಕಾರಿ ಔಷಧ ವಿಭಾಗದ ಪ್ರಾಧ್ಯಾಪಕ ಮತ್ತು ಮುಖ್ಯಸ್ಥ ರಾಗಿ, ಮಣಿಪಾಲದ ಸಮಗ್ರ ಕ್ಯಾನ್ಸರ್ ಆರೈಕೆ ಕೇಂದ್ರದ ಸಂಯೋಜಕರಾಗಿ ಮತ್ತು ಮಣಿಪಾಲ ಕೆಎಂಸಿ ಸಂಶೋಧನಾ ವಿಭಾಗದ ಸಹಾಯಕ ಡೀನ್ ಆಗಿರುವ ಡಾ. ಸಾಲಿನ್ಸ್ ಲ್ಯಾನ್ಸೆಟ್ ಕಮಿಷನ್‌ನ ಹುದ್ದೆಗೆ ಅಗತ್ಯವಿರುವ ಪರಿಣತಿ ಹಾಗೂ ಅನುಭವವನ್ನು ಹೊಂದಿದ್ದಾರೆ.
ಈ ಹುದ್ದೆಗೆ ಹಿನ್ನೆಲೆಯಾಗಿ ಡಾ.ನವೀನ್ ಸಾಲಿನ್ಸ್ ಇತ್ತೀಚೆಗೆ ಪ್ರತಿಷ್ಠಿತ ಅಂತಾರಾಷ್ಟ್ರೀಯ ಉಪಶಮನಕಾರಿ ಆರೈಕೆ ಪ್ರಶಸ್ತಿಯನ್ನು ನೆದರ್ಲೆಂಡ್ಸ್‌ನ ರೋಟರ್‌ಡಾಂನಲ್ಲಿರುವ ಯುರೋಪಿಯನ್ ಅಸೋಸಿಯೇಶನ್ ಆಫ್ ಪ್ಯಾಲಿಯೇಟಿವ್ ನಿಂದ ತ್ತೀಚೆಗಷ್ಟೇ ಸ್ವೀಕರಿಸಿದ್ದಾರೆ. ಇದು ಅವರು ಈ ಕ್ಷೇತ್ರ ದಲ್ಲಿ ಮಾಡಿರುವ ಸಂಶೋಧನೆ ಮತ್ತು ಅವರ ಅಪಾರ ವೈದ್ಯಕೀಯ ಅನುಭವಕ್ಕೆ ಸಿಕ್ಕ ಪ್ರಶಸ್ತಿಯಾಗಿದೆ.
ದೇಶದ ಕ್ಯಾನ್ಸರ್ ತಜ್ಞರೊಬ್ಬರು ಲ್ಯಾನ್ಸೆಟ್ ಕಮಿಷನ್‌ನ್ನು ಮುನ್ನಡೆಸುವ ಅವಕಾಶ ಪಡೆಯುವ ಮೂಲಕ ಮಾರಣಾಂತಿಕ ಕಾಯಿಲೆ ಕ್ಯಾನ್ಸರ್‌ನ ಚಿಕಿತ್ಸೆಗೆ ಸಂಬಂಧಿಸಿ ನಡೆಯುವ ಅಂತಾರಾಷ್ಟ್ರೀಯ ಪ್ರಯತ್ನವೊಂದರ ನೇತೃತ್ವವನ್ನು ವಹಿಸುವ ಅವಕಾಶವನ್ನು ಪಡೆದಂತಾಗಿದೆ.
ಇದು ಕ್ಯಾನ್ಸರ್ ಆರೈಕೆ, ಸಂಪನ್ಮೂಲ ಹಂಚಿಕೆ ಮತ್ತು ಕ್ಯಾನ್ಸರ್ ಚಿಕಿತ್ಸೆಗೆ ಆರ್ಥಿಕ ಒತ್ತಡಗಳ ನಿವಾರಣೆಗೆ ಸಂಬಂಧಿಸಿ ದಂತೆ ತರಲಾಗುವ ಅಂತಾರಾಷ್ಟ್ರೀಯ ಆರೋಗ್ಯ ನೀತಿಗಳ ಮೇಲೆ ಗಮನಾರ್ಹ ಪ್ರಭಾವವನ್ನು ಬೀರುವ ಸಾಧ್ಯತೆ ಇದೆ.
ಮಾಹೆಯ ವೈದ್ಯರೊಬ್ಬರು ವಿಶ್ವದ ಈ ಪ್ರತಿಷ್ಠಿತ ಆಯೋಗವೊಂದರ ಪ್ರಮುಖ ಸ್ಥಾನವನ್ನು ಅಲಂಕರಿಸಿರುವುದಕ್ಕೆ ಮಾಹೆ ಮಣಿಪಾಲದ ಸಹ ಕುಲಾಧಿಪತಿ ಡಾ.ಎಚ್.ಎಸ್.ಬಲ್ಲಾಳ್, ಕುಲಪತಿ ಲೆ.ಜ.(ಡಾ) ಎಂ.ಡಿ. ವೆಂಕಟೇಶ್ ಹರ್ಷ ವ್ಯಕ್ತಪಡಿಸಿದ್ದು, ಡಾ.ನವೀನ್ ಸಾಲಿನ್ಸ್ ಅವರ ಅದ್ಭುತ ಸಾಧನೆಗೆ ಅಭಿನಂದನೆ ಸಲ್ಲಿಸಿದ್ದಾರೆ.