×
Ad

ರಾಜ್ಯವನ್ನು ಸರ್ವಜನಾಂಗದ ಶಾಂತಿಯ ತೋಟ ಮಾಡೋಣ: ವಿಶ್ವ ಮಾನವ ದಿನಾಚರಣೆಯಲ್ಲಿ ಅಬೀದ್ ಗದ್ಯಾಳ್

Update: 2025-12-29 22:19 IST

ಉಡುಪಿ: ಕುವೆಂಪು ಬಯಸಿದಂತೆ ವಿಶ್ವ ಮಾನವ ಪ್ರಜ್ಞೆ ಪ್ರತಿಯೊಬ್ಬರಲ್ಲೂ ಇರಬೇಕು. ಪ್ರತಿಯೊಬ್ಬರಲ್ಲೂ ಸಮಾನತೆ, ಒಳ್ಳೆಯದನ್ನು ಬಯಸುವ ಗುಣವಿದ್ದಾಗ ಮಾನವ ಕಲ್ಪನೆ ಮೂಡುತ್ತದೆ.ವಿಶ್ವ ಮಾನವ ದಿನಾಚರಣೆಗೆ ಪೂರಕವಾಗಿ ರಾಜ್ಯವನ್ನು ಸರ್ವಜನಾಂಗದ ಶಾಂತಿಯ ತೋಟ ಮಾಡೋಣ ಎಂದು ಅಪರ ಜಿಲ್ಲಾಧಿಕಾರಿ ಅಬೀದ್ ಗದ್ಯಾಳ್ ವಿದ್ಯಾರ್ಥಿ ಗಳಿಗೆ ಕರೆ ನೀಡಿದ್ದಾರೆ.

ಉಡುಪಿಯ ಸರಕಾರಿ ಪದವಿ ಪೂರ್ವ ಕಾಲೇಜಿನ(ಬೋರ್ಡ್ ಹೈಸ್ಕೂಲ್) ಜನತಾ ಸಭಾಭವನದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಹಾಗೂ ಜಿಲ್ಲಾ ಕನ್ನಡ ಮತ್ತು ಸಂಸ್ಕೃತಿ ಇಲಾಖೆಗಳ ಸಂಯುಕ್ತ ಆಶ್ರಯದಲ್ಲಿ ರಾಷ್ಟ್ರಕವಿ ಕುವೆಂಪು ಅವರ ಜಯಂತಿ ಪ್ರಯುಕ್ತ ಸೋಮವಾರ ನಡೆದ ವಿಶ್ವ ಮಾನವ ದಿನಾಚರಣೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡುತಿದ್ದರು.

ಕಾರ್ಯಕ್ರಮವನ್ನು ದೀಪ ಬೆಳಗಿಸುವ ಮೂಲಕ ಉದ್ಘಾಟಿಸಿ, ಕುವೆಂಪು ಅವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿ ಮಾತನಾಡಿದ ಕರಾವಳಿ ಅಭಿವೃದ್ದಿ ಮಂಡಳಿಯ ಅಧ್ಯಕ್ಷ ಎಂ.ಎ.ಗಫೂರ್, ಕನ್ನಡ ಸಾಹಿತ್ಯ ಕ್ಷೇತ್ರಕ್ಕೆ ಅಪಾರ ಕೊಡುಗೆ ನೀಡಿದ ರಾಷ್ಟ್ರಕವಿ ಕುವೆಂಪು, ಡಾ.ಬಿ.ಆರ್.ಅಂಬೇಡ್ಕರ್, ಬಸವಣ್ಣ, ಬುದ್ದ ಅವರ ವಿಚಾರಧಾರೆಗಳನ್ನು ಹೊಸ ರೂಪದಲ್ಲಿ ನಾಡಿಗೆ ಪರಿಚಯಿಸಿದವರು. ಅವರ ವಿಶ್ವ ಮಾನವ ಸಂದೇಶದ ಪರಿಕಲ್ಪನೆಯನ್ನು ಪ್ರತಿಯೊಬ್ಬರೂ ಅಳವಡಿಸಿಕೊಂಡಾಗ ಸಮಾಜ ಸುಧಾರಣೆ ಸಾಧ್ಯ ಎಂದರು.

ವಿವಿಧತೆಯಲ್ಲಿ ಏಕತೆ ಹೊಂದಿರುವ ನಮ್ಮ ದೇಶದಲ್ಲಿ ಮನುಜ- ಮನುಜರಲ್ಲಿ ಭಾತೃತ್ವ ಮೂಡಬೇಕು. ಜಾತಿ, ಮತ, ಧರ್ಮ, ಪಂಥಕ್ಕೆ ಆದ್ಯತೆ ನೀಡದೇ ಮಾನವೀಯ ಧರ್ಮ ಮೇಲು ಎಂಬ ಆಶಾ ಭಾವನೆಯೊಂದಿಗೆ ಕುವೆಂಪು ನೀಡಿದ ವಿಶ್ವ ಮಾನವ ಸಂದೇಶ ಮನುಕುಲಕ್ಕೆ ಮಾದರಿ. ಅವರ ಸಾಹಿತ್ಯಗಳು ಎಲ್ಲಾ ವರ್ಗದ ವಯೋಮಾನದವರಿಗೂ ಅನ್ವಯವಾಗುವಂತೆ ಹಲವು ಆಯಾಮಗಳನ್ನು ಹೊಂದಿದೆ ಎಂದು ತಿಳಿಸಿದರು.

ಕುವೆಂಪು ಅವರ ಕಥೆ, ಕಾದಂಬರಿ, ಕಾವ್ಯ, ಮಹಾಕಾವ್ಯ, ವಿಮರ್ಶೆ, ಪ್ರಬಂಧ, ಜೀವನ ಚರಿತ್ರೆ, ನಾಟಕಗಳಲ್ಲಿ ಅಡಗಿದ ಬದುಕಿನ ಸಾರ ವಿದ್ಯಾರ್ಥಿಗಳ ಭವಿಷ್ಯ ರೂಪಿಸಲು ದಾರಿದೀಪವಾಗಲಿದ್ದು, ಯುವಪೀಳಿಗೆ ಕುವೆಂಪು ಅವರ ಪುಸ್ತಕಗಳನ್ನು ಅಧ್ಯಯನ ಮಾಡುವುದರೊಂದಿಗೆ ಅವರ ಕಾವ್ಯಗಳಲ್ಲಿನ ಮಾನವೀಯ ಮೌಲ್ಯಗಳನ್ನು ಪಾಲಿಸುವಂತಾಗಲಿ ಎಂದು ಸಲಹೆ ನೀಡಿದರು.

ತೆಂಕನಿಡಿಯೂರು ಸರಕಾರಿ ಪ್ರಥಮ ದರ್ಜೆ ಕಾಲೇಜಿನ ಸಹಾಯಕ ಪ್ರಾಧ್ಯಾಪಕ ಡಾ.ವಿಷ್ಣುಮೂರ್ತಿ ಪ್ರಭು ಕುವೆಂಪು ಅವರ ಕುರಿತು ವಿಶೇಷ ಉಪನ್ಯಾಸ ನೀಡಿ, ರಸ-ಋಷಿ, ಕವಿ ಕುವೆಂಪು ಜನ್ಮ ದಿನಾಚರಣೆಯನ್ನು ವಿಶ್ವ ಮಾನವ ದಿನಾಚರಣೆಯನ್ನಾಗಿ ಆಚರಿಸಲಾಗುತ್ತಿದೆ. ಸತ್ವಯುತವಾದ ಸಾಹಿತ್ಯವನ್ನು ರಚಿಸುವುದರೊಂದಿಗೆ ಜಾತಿ, ಮತ, ಧರ್ಮದ ಗಡಿಗಳನ್ನು ಮೀರಿ ಎಲ್ಲರೂ ಮಾನವರೇ, ಮಾನವೀಯತೆಯೇ ದೊಡ್ಡ ಧರ್ಮ ಎಂಬ ಸಂದೇಶ ಸಾರಿರುವ ರಾಷ್ಟ್ರಕವಿ ಕುವೆಂಪು, ಸಾಹಿತ್ಯ ಲೋಕದಲ್ಲಿ ಪ್ರಥಮ ಬಾರಿಗೆ ಜ್ಞಾನಪೀಠ ಪ್ರಶಸ್ತಿಯನ್ನು ಕರುನಾಡಿಗೆ ತಂದುಕೊಟ್ಟಿದ್ದಾರೆ. ಕುವೆಂಪು ಕಾವ್ಯಗಳಲ್ಲಿನ ತತ್ವಗಳನ್ನು ಮಾದರಿಯಾಗಿಟ್ಟುಕೊಂಡು ವಿದಾರ್ಥಿಳು ತಮ್ಮ ಭವಿಷ್ಯ ರೂಪಿಸಿಕೊಳ್ಳಬೇಕು ಎಂದರು.

ಕಾರ್ಯಕ್ರಮದಲ್ಲಿ ಶಾಲಾ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಲೋಕೇಶ್ ಸಿ, ಕಾಲೇಜಿನ ಪ್ರಾಂಶುಪಾಲೆ ಲೀಲಾಭಟ್, ಅಧ್ಯಾಪಕರು, ವಿದ್ಯಾರ್ಥಿಗಳು ಹಾಗೂ ಇತರರು ಉಪಸ್ಥಿತರಿದ್ದರು.

ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕಿ ಪೂರ್ಣಿಮಾ ಪ್ರಾಸ್ತಾವಿಕವಾಗಿ ಮಾತನಾಡಿ ಸ್ವಾಗತಿದರೆ, ವರ್ಷಾ ಕಾರ್ಯಕ್ರಮ ನಿರೂಪಿಸಿದರು. ಹಿರಿಯ ಸಹ ಶಿಕ್ಷಕಿ ಭಾಗೀರಥಿ ವಂದಿಸಿದರು.

 

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News