ಶಿರೂರು| ಮನೆಗೆ ಸಿಡಿಲು ಬಡಿದು ಅಪಾರ ಹಾನಿ: ಮಹಿಳೆಗೆ ಗಾಯ
Update: 2025-05-25 21:43 IST
ಬೈಂದೂರು: ಬೈಂದೂರು ತಾಲೂಕಿನಾದ್ಯಂತ ಗುಡುಗು ಸಿಡಿಲು ಸಹಿತ ಭಾರೀ ಗಾಳಿ ಮಳೆಯಾಗಿದ್ದು, ಮನೆಯೊಂದಕ್ಕೆ ಸಿಡಿಲು ಬಡಿದ ಪರಿಣಾಮ ಓರ್ವ ಮಹಿಳೆ ಗಾಯಗೊಂಡ ಬಗ್ಗೆ ವರದಿಯಾಗಿದೆ.
ಶಿರೂರು ಗ್ರಾಮದ ಗಿರಿಜಾ ಎಂಬವರ ಮನೆಗೆ ಇಂದು ಬೆಳಗೆ ಸಿಡಿಲು ಬಡಿದಿದ್ದು, ಇದರಿಂದ ಮನೆಯಲ್ಲಿದ್ದ ಮಂಗಳ ಎಂಬವರ ಕಾಲಿಗೆ ಗಾಯ ವಾಗಿದೆ. ಅಲ್ಲದೆ ಮುನೆಯ ಗೋಡೆಗಳು ಬಿರುಕು ಬಿಟ್ಟಿದ್ದು, ಎಲೆಕ್ಟ್ರಾನಿಕ್ಸ್ ವಸ್ತುಗಳಿಗೆ ಹಾನಿಯಾಗಿವೆ. ಇದರಿಂದ ಸುಮಾರು ಒಂದು ಲಕ್ಷ ರೂ. ನಷ್ಟ ಉಂಟಾಗಿದೆ ಎಂದು ಅಂದಾಜಿಸಲಾಗಿದೆ.
ಅದೇ ರೀತಿ ಯಳಜಿತ್ ಗ್ರಾಮದ ಪಾರ್ವತಿ ಎಂಬವರ ವಾಸ್ತವ್ಯದ ಮನೆಯ ಮೇಲೆ ಮರ ಬಿದ್ದು ಭಾಗಶಃ ಹಾನಿಯಾಗಿ ಒಂದು ಲಕ್ಷ ರೂ. ನಷ್ಟವಾಗಿದೆ. ಶಿರೂರು ಗ್ರಾಮದ ಕೋಟೆಮನೆ ಎಂಬಲ್ಲಿರುವ ದೇವಸ್ಥಾನ ಬಳಿಯ ಡ್ಯಾಂನಿಂದ ನೀರು ಉಕ್ಕಿ ಹರಿದು ಸಮೀಪದ ತೋಟಕ್ಕೆ ನುಗ್ಗಿದೆ. ಅದೇ ರೀತಿ ಅಲ್ಲೇ ಸಮೀಪದ ಮನೆಗೂ ನೀರು ನುಗ್ಗಿರುವ ಬಗ್ಗೆ ತಾಲೂಕು ಕಚೇರಿ ಮೂಲಗಳು ತಿಳಿಸಿವೆ.