ಅಜೆಕಾರು ನಾಡ ಕಚೇರಿಗೆ ಲೋಕಾಯುಕ್ತ ದಾಳಿ; ಕಂದಾಯ ಇಲಾಖಾ ಸಿಬ್ಬಂದಿ ವಶಕ್ಕೆ
Update: 2023-09-01 12:43 IST
ಅಜೆಕಾರು: ನಾಡ ಕಚೇರಿಗೆ ಲೋಕಾಯಕ್ತ ಪೊಲೀಸರು ದಾಳಿ ನಡೆಸಿದ್ದು, ಲಂಚ ಸ್ವೀಕರಿಸುತ್ತಿದ್ದಾಗಲೇ ಪ್ರಥಮ ದರ್ಜೆ ಸಹಾಯಕ ಲೋಕಾಯುಕ್ತರ ಬಲೆಗೆ ಬಿದ್ದ ಘಟನೆ ಗುರುವಾರ ನಡೆದಿದೆ.
ಕಂದಾಯ ಇಲಾಖಾ ಸಿಬ್ಬಂದಿ ನಿಜಾಮ್ ಎಂಬವವರು ಸಂತತಿ ನಕ್ಷೆಯ ಕೆಲಸಕ್ಕೆ ಲಂಚ ಸ್ವೀಕರಿಸುವ ವೇಳೆ ಉಡುಪಿ ಲೋಕಾಯುಕ್ತ ಪೊಲೀಸರು ದಾಳಿ ನಡೆಸಿ ವಶಕ್ಕೆ ಪಡೆದಿದ್ದಾರೆ.
ನಿಜಾಮ್ ಅವರು, ಸಂತತಿ ನಕ್ಷೆಯ ಕೆಲಸಕ್ಕೆ ಹಿರ್ಗಾನ ಮೂಲದ ವ್ಯಕ್ತಿಯೊಂದಿಗೆ 5 ಸಾವಿರ ರೂ. ಬೇಡಿಕೆಯಿಟ್ಟಿದ್ದರು ಎನ್ನಲಾಗಿದೆ. ಎರಡು ದಿನಗಳ ಹಿಂದೆ 4 ಸಾವಿರ ನೀಡಿದ್ದ ವ್ಯಕ್ತಿ ಈ ಕುರಿತು ಲೋಕಾಯುಕ್ತ ಪೊಲೀಸರಿಗೆ ಮಾಹಿತಿ ನೀಡಿದ್ದು, ಇಂದು ನಿಜಾಮ್ ಒಂದು ಸಾವಿರ ರೂ. ಹಣವನ್ನು ಪಡೆಯುವ ವೇಳೆ ಲೋಕಾಯುಕ್ತ ಪೊಲೀಸರು ದಾಳಿ ನಡೆಸಿದ್ದಾರೆ. ನಿಜಾಮುದ್ದಿನ್ 15 ವರ್ಷಗಳಿಂದ ಪ್ರಥಮ ದರ್ಜೆ ಸಹಾಯಕರಾಗಿ ಅಜೆಕಾರು ನಾಡ ಕಚೇರಿಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾರೆ.