ಉಡುಪಿ | ಮಾತುಕತೆಯೇ ಶಾಂತಿಯ ಅತ್ಯಂತ ಪರಿಣಾಮಕಾರಿ ಸಾಧನ : ನ್ಯಾ.ಅಬ್ದುಲ್ ನಝೀರ್
ವಿಶ್ವ ಶಾಂತಿ ಸಮಾವೇಶ
ಉಡುಪಿ, ಡಿ.13: ಮಾತುಕತೆಯೇ ಶಾಂತಿಯ ಅತ್ಯಂತ ಪರಿಣಾಮಕಾರಿ ಸಾಧನಗಳಲ್ಲಿ ಒಂದು. ಮಾತುಕತೆ ಮುರಿದಾಗ ಸಂಘರ್ಷಗಳು ಹುಟ್ಟುತ್ತವೆ. ಶಾಶ್ವತ ಶಾಂತಿಯು ಮಾತುಕತೆ, ಮಾನವೀಯತೆ ಮತ್ತು ಸಹಕಾರದಿಂದ ನಿರ್ಮಾಣವಾಗುತ್ತದೆಯೇ ಹೊರತು ಬಲದಿಂದಲ್ಲ ಎಂದು ಆಂಧ್ರ ಪ್ರದೇಶದ ರಾಜ್ಯಪಾಲ ನ್ಯಾಯಮೂರ್ತಿ ಅಬ್ದುಲ್ ನಜೀರ್ ಹೇಳಿದ್ದಾರೆ.
ಪರ್ಯಾಯ ಪುತ್ತಿಗೆ ಶ್ರೀಕೃಷ್ಣ ಮಠ ಆಶ್ರಯದಲ್ಲಿ ವಿಶ್ವಗೀತಾ ಪರ್ಯಾಯ ಪ್ರಯುಕ್ತ ರಾಜಾಂಗಣದಲ್ಲಿ ಶನಿವಾರ ಆಯೋಜಿಸಲಾದ ವಿಶ್ವ ಶಾಂತಿ ಸಮಾವೇಶದ ಉದ್ಘಾಟನಾ ಸಮಾರಂಭದಲ್ಲಿ ಅವರು ಮಾತನಾಡುತ್ತಿದ್ದರು.
ಇಂದಿನ ಸಂಘರ್ಷ, ವಿಭಜನೆ ಹಾಗೂ ಅನಿಶ್ಚಿತತೆಯಿಂದ ಕೂಡಿದ ಜಗತ್ತಿನಲ್ಲಿ ಭಾರತದ ಪಾತ್ರ ಅತ್ಯಂತ ಮಹತ್ವದಾಗಿದೆ. ಭಾರತದಲ್ಲಿ ವೈವಿಧ್ಯಮಯ ಸಂಸ್ಕೃತಿಗಳಿದ್ದರೂ ನಾವೆಲ್ಲರೂ ಒಂದೇ. ಭಿನ್ನಾಭಿಪ್ರಾಯಗಳನ್ನು ನಾವು ಗೌರವಿಸಬೇಕು. ನಾವೆಲ್ಲರೂ ಪರಸ್ಪರ ಅವಲಂಬಿತರಾಗಿರುವುದರಿಂದ ಜೀವನವು ಪರಸ್ಪರ ಸಹಕಾರದಿಂದಲೇ ಮುಂದುವರಿಯುತ್ತದೆ ಎಂದರು.
ಸಮಾಜಕ್ಕೆ ಸಕಾರಾತ್ಮಕ ಕೊಡುಗೆ ನೀಡುವವನು ಮಾನವಕುಲದ ನಿಜವಾದ ಮಿತ್ರ. ಪ್ರಕೃತಿಗೆ ಹಾನಿ ಮಾಡುವವರು ನೈಸರ್ಗಿಕ ಕ್ರಮ ಅಡ್ಡಿಯಾಗುತ್ತಾರೆ. ಪರಸ್ಪರ ಉನ್ನತಿಗೈಯುವ ಮೂಲಕವೇ ಪರಮ ಹಿತ ಸಾಧಿಸಬಹುದು. ಭಾರತದ ಆಧ್ಯಾತ್ಮಿಕ ಪರಂಪರೆ, ಪ್ರಜಾಸತ್ತಾತ್ಮಕ ಮೌಲ್ಯಗಳು ಹಾಗೂ ಮಾನವೀಯತೆಗೆ ಇರುವ ಬದ್ಧತೆ ಜಾಗತಿಕ ಶಾಂತಿ ಸಂವಾದಕ್ಕೆ ಭಾರತವನ್ನು ವಿಶಿಷ್ಟ ಸ್ಥಾನದಲ್ಲಿ ನಿಲ್ಲಿಸಿದೆ ಎಂದು ಅವರು ತಿಳಿಸಿದರು.
ಸಮಾವೇಶವನ್ನು ಉದ್ಘಾಟಿಸಿದ ಪರ್ಯಾಯ ಪುತ್ತಿಗೆ ಮಠಾಧೀಶ ಶ್ರೀಸುಗುಣೇಂದ್ರತೀರ್ಥ ಸ್ವಾಮೀಜಿ ಮಾತನಾಡಿ, ವಿಶ್ವಶಾಂತಿ ನಿರ್ಮಾಣವಾಗಬೇಕಾದರೆ ಸಂಕುಚಿತ ಮನೋಭಾವನೆಯನ್ನು ಬಿಟ್ಟು ವಿಶಾಲ ನಿಲುವು ಇಟ್ಟುಕೊಳ್ಳಬೇಕು. ಸಜ್ಜನರು ಯಾವ ಪಂಗಡದಲ್ಲಿ, ಜಗತ್ತಿನ ಯಾವ ಮೂಲೆಯಲ್ಲಿದ್ದರೂ ರಕ್ಷಣೆ ಆಗಬೇಕು. ಅದೇ ರೀತಿ ದುರ್ಜನರು ಯಾವ ಪಂಗಡದಲ್ಲಿ ಇದ್ದರೂ ಶಿಕ್ಷೆ ಆಗಬೇಕು. ಆಗ ಮಾತ್ರ ಜಗತ್ತಿನಲ್ಲಿ ಶಾಂತಿ ನೆಲೆಸುತ್ತದೆ ಮತ್ತು ಧರ್ಮ ಸಂಸ್ಥಾಪನೆ ಆಗುತ್ತದೆ ಎಂದರು.
ನಮ್ಮವರು ಮಾತ್ರ ರಕ್ಷಣೆಯಾಗಿ, ಇತರರು ನಾಶವಾಗಬೇಕೆಂಬ ಮನೋಭಾವನೆಯಿಂದ ಶಾಂತಿ ಸ್ಥಾಪನೆ ಸಾಧ್ಯವಿಲ್ಲ. ನಮ್ಮವರು ಇತರರು ಎಂಬ ಸಂಕುಚಿತ ಮನೋಭಾವನೆಯಿಂದಲೇ ಅಶಾಂತಿ ಸೃಷ್ಠಿಯಾಗುವುದು. ಜಗತ್ತು ಪ್ರಾದೇಶಿಕ, ಭಾವನಾತ್ಮಕವಾದ ಸಂಕುಚಿತತೆಯಿಂದ ಸಾಗುತ್ತಿದೆ. ಹೀಗಾಗಿ ಜಗತ್ತು ತಲ್ಲಣಗೊಂಡು ಅಶಾಂತಿಯಿಂದ ನಲುಗುತ್ತಿದೆ. ಯುದ್ಧದ್ಧ ಭೀತಿಯಲ್ಲಿ ಮುಳುಗಿದೆ. ಇದರಿಂದ ಹೊರಗೆ ಬರಬೇಕಾದರೆ ವಿನಯ ವಿಶ್ವಾಸ ಸೌಹಾರ್ದತೆ ಮುಖ್ಯ. ಆಗ ಮಾತ್ರ ಶಾಂತಿಯ ಸ್ಥಾಪನೆ ಆಗಲು ಸಾಧ್ಯ ಎಂದರು.
ಪುತ್ತಿಗೆ ಕಿರಿಯ ಶ್ರೀಸುಶ್ರೀಂದ್ರತೀರ್ಥ ಸ್ವಾಮೀಜಿ, ಅಮೆರಿಕಾದ ವರ್ಲ್ಡ್ ರಿಲೀಜಿಯಸ್ ಫಾರ್ ಪೀಸ್ ಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಡಾ.ವಿಲಿಯಂ ಎಫ್.ವಿಂಡ್ಲೆ, ಆಂಧ್ರಪ್ರದೇಶದ ರಾಜ್ಯಪಾಲ ನ್ಯಾ.ಅಬ್ದುಲ್ ನಝೀರ್, ಒನ್ ವರ್ಲ್ಡ್ ಒನ್ ಫ್ಯಾಮಿಲಿ ಸಂಸ್ಥಾಪಕ ಸದ್ಗುರು ಮಧುಸೂದನ ಸಾಯಿ ಮಾತನಾಡಿದರು.
ಈ ಸಂದರ್ಭದಲ್ಲಿ ‘ಸರ್ವಮೂಲಭಾವಪರಿಚಯ’ ಹಾಗೂ ‘ಗೀತಾಮೃತ ಸಾರ’, ‘ಉಡುಪಿ ಶ್ರೀಕೃಷ್ಣ ಮಠ ದೇವಾಲಯದ ಸಂಸ್ಕೃತಿ ಸಿರಿ’ ಪುಸ್ತಕಗಳನ್ನು ಬಿಡುಗಡೆಗೊಳಿಸಲಾಯಿತು. ಕಲಬುರಗಿ ಶ್ರೀಸತ್ಯಸಾಯಿ ಯುನಿವರ್ಸಿಟ್ ಫಾರ್ ಹ್ಯುಮನ್ ಎಕ್ಸಲೆನ್ಸ್ ಇದರ ಉಪಕುಲಪತಿ ಬಿ.ಎನ್.ನರಸಿಂಹ ಮೂರ್ತಿ, ಲೇಖಕರಾದ ಸುರೇಶ್ ಪುತ್ತಿಗೆ, ಕವಿತಾ ಪಲಿಮಾರ್, ಡಾ.ಚೂಡ ಮಣಿ ನಂದಗೋಪಾಲ್, ದಿವ್ಯಾಶ್ರೀ ಮಂಜುನಾಥ್, ಡಾ.ಅರುಣಾ ಕೆ., ಗೋಮತಿನಾಥನ್ ಉಪಸ್ಥಿತರಿದ್ದರು. ರೋಹಿತ್ ಚಕ್ರತೀರ್ಥ ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದರು.
‘ಪ್ರತಿವರ್ಷ ಪ್ರತಿಯೊಂದು ದೇಶಗಳು ಪೈಪೋಟಿಗೆ ಬಿದ್ದಂತೆ ತಮ್ಮ ವಾರ್ಷಿಕ ಬಜೆಟ್ ನಲ್ಲಿ ಶಸ್ತ್ರಾಸ್ತ್ರ ಸಂಗ್ರಹಕ್ಕೆ ಜಾಸ್ತಿ ಹಣವನ್ನು ಮೀಸಲಿಡುತ್ತಿದೆ. ಹೀಗೆ ಮುಂದುವರೆದರೆ ಮುಂದೆ ಬಜೆಟ್ ನ ಪ್ರತಿ 100ರೂ.ನಲ್ಲಿ 99 ರೂ. ಶಸ್ತ್ರಾಸ್ತ್ರ ಸಂಗ್ರಹಕ್ಕೆ ಹೋಗುತ್ತದೆ. ಇದು ಹೀಗೆ ಮುಂದುವರೆದರೆ ಇಡೀ ಜಗತ್ತಿಗೆ ಅಪಾಯಕಾರಿಯಾಗುತ್ತದೆ. ಈ ಪೈಪೋಟಿಗೆ ಬ್ರೇಕ್ ಹಾಕಬೇಕು. ಶಸ್ತ್ರಾಸ್ತ್ರ ಖರೀದಿ ಸಂಖ್ಯೆ ಕಡಿಮೆ ಮಾಡಬೇಕು’
-ಪುತ್ತಿಗೆ ಶ್ರೀಸುಗುಣೇಂದ್ರ ತೀರ್ಥ ಸ್ವಾಮೀಜಿ