ಎಕೆಎಂಎಸ್ ಸೈಫ್ ಕೊಲೆ ಪ್ರಕರಣ: ವಿದೇಶದಲ್ಲಿ ತಲೆಮರೆಸಿಕೊಂಡಿರುವ ಆರೋಪಿ ಅಕ್ರಂಗೆ ಲುಕ್‌ಔಟ್ ನೋಟೀಸ್
ಬಸ್ ಮಾಲಕ ಸೈಫ್ ಯಾನೆ ಸೈಯಿಪುದ್ದಿನ್
ಉಡುಪಿ: ಮಲ್ಪೆ ಪೊಲೀಸ್ ಠಾಣಾ ವ್ಯಾಪ್ತಿಯ ಕೊಡವೂರು ಎಂಬಲ್ಲಿ ಸೆ.27ರಂದು ನಡೆದ ಎಕೆಎಂಎಸ್ ಬಸ್ ಮಾಲಕ ಸೈಫ್ ಯಾನೆ ಸೈಯಿಪುದ್ದಿನ್ ಆತ್ರಾಡಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿ ವಿದೇಶದಲ್ಲಿ ತಲೆಮರೆಸಿಕೊಂಡಿರುವ ಪ್ರಮುಖ ಆರೋಪಿ ಅಕ್ರಂ ವಿರುದ್ಧ ಲುಕ್‌ಔಟ್ ನೋಟೀಸ್ ಜಾರಿ ಮಾಡಲಾಗಿದೆ.
2016ರ ಜು.14ರಂದು ಆತ್ರಾಡಿ ಸಮೀಪದ ಶೇಡಿಗುಡ್ಡೆ ಎಂಬಲ್ಲಿ ನಡೆದ ಕೆಮ್ಮಣ್ಣುವಿನ ಶೇಖ್ ಮಹಮ್ಮದ್ ತಸ್ಲೀಮ್ ಕೊಲೆ ಪ್ರಕರಣದಲ್ಲಿ ಸೈಫ್ ಜೊತೆ ಅಕ್ರಂ ಕೂಡ ಆರೋಪಿಯಾಗಿದ್ದನು. ಆ ಬಳಿಕ ವ್ಯವಾಹರದಲ್ಲಿ ಇವರಿಬ್ಬರು ಜೊತೆಯಾಗಿದ್ದರು.
ಸೈಫ್ ಕೊಲೆಗೆ ಒಂದು ವಾರ ಮೊದಲು ಅಕ್ರಂ, ಕೊಲೆಗೆ ಸಂಬಂಧಿಸಿ ಎಲ್ಲ ರೀತಿಯ ಸಂಚು ರೂಪಿಸಿ, ದುಬೈಗೆ ಪರಾರಿಯಾಗಿದ್ದನು. ಇದೇ ವೇಳೆ ಅಕ್ರಂ, ವ್ಯವಹಾರಕ್ಕೆ ಸಂಬಂಧಿಸಿ ಸಾಲಗಳನ್ನು ಸೈಫ್ ಮತ್ತು ಸೈಫ್‌ನ ಪತ್ನಿ ಹೆಸರಿಗೆ ಹಾಗೂ ಲಾಭದ ವ್ಯವಹಾರವನ್ನು ತನ್ನ ಪಾಲಿಗೆ ಮಾಡಿದ್ದನು ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ಇದೀಗ ಸೈಫ್ ಕೊಲೆಗೆ ಸಂಚು ರೂಪಿಸಿ ವಿದೇಶದಲ್ಲಿ ತಲೆಮರೆಸಿ ಕೊಂಡಿರುವ ಅಕ್ರಂ ಬಂಧನಕ್ಕೆ ಉಡುಪಿ ಪೊಲೀಸರು ಕ್ರಮ ಜರಗಿಸಿದ್ದು, ಇಂಟರ್ ಪೋಲ್ ಸಹಾಯದಿಂದ ಆತನ ಬಂಧನಕ್ಕೆ ಬಲೆ ಬೀಸಲಾಗಿದೆ ಎಂದು ಮೂಲಗಳು ತಿಳಿಸಿವೆ.