ಸರಕು ಸಾಗಾಣಿಕೆ ವಾಹನಗಳಿಗೆ ಸ್ಪೀಡ್ ಗವರ್ನರ್ ಕಡ್ಡಾಯಗೊಳಿಸಿ: ಸಾರಿಗೆ ಅಧಿಕಾರಿಗಳಿಗೆ ಉಡುಪಿ ಡಿಸಿ ಸೂಚನೆ
ಉಡುಪಿ, ಜೂ.29: ಸಾರ್ವಜನಿಕ ವಾಹನಗಳು ಸುರಕ್ಷಿತ ಹಾಗೂ ಸುಗಮವಾಗಿ ರಸ್ತೆಗಳಲ್ಲಿ ಸಂಚರಿಸಲು ಅನುಕೂಲವಾಗುವಂತೆ ವೈಜ್ಞಾನಿಕ ರೀತಿಯಲ್ಲಿ ರಸ್ತೆಗಳ ನಿರ್ವಹಣೆ ಮಾಡುವುದರ ಜೊತೆಗೆ ಸರಕು ಸಾಗಣೆಯ ವಾಹನಗಳಿಗೆ ವೇಗದ ಮಿತಿಯುಳ್ಳ ಸ್ಪೀಡ್ ಗವರ್ನರ್‌ಗಳನ್ನು ಕಡ್ಡಾಯವಾಗಿ ಅಳವಡಿಸುವಂತೆ ನೋಡಿಕೊಳ್ಳ ಬೇಕು ಎಂದು ಜಿಲ್ಲಾಧಿಕಾರಿ ಸ್ವರೂಪ ಟಿ.ಕೆ ಸಾರಿಗೆ ಇಲಾಖೆಯ ಅಧಿಕಾರಿಗಳಿಗೆ ಸೂಚನೆಗಳನ್ನು ನೀಡಿದ್ದಾರೆ.
ಸೋಮವಾರ ಮಣಿಪಾಲ ರಜತಾದ್ರಿಯ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ನಡೆದ ರಸ್ತೆ ಸುರಕ್ಷತಾ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡುತ್ತಿದ್ದರು. ಜಿಲ್ಲೆಯ ಒಳಗೆ ಸಂಚರಿಸುವ 6 ಚಕ್ರ ಮತ್ತು ಮೇಲ್ಪಟ್ಟ ಎಲ್ಲಾ ಸರಕು ಸಾಗಾಣಿಕೆ ವಾಹನಗಳಿಗೆ ಪ್ರತಿ ಗಂಟೆಗೆ ಗರಿಷ್ಠ 60 ಕಿ.ಮೀ. ವೇಗದ ಸ್ಪೀಡ್ ಗವರ್ನರ್‌ಗಳನ್ನು ಅಳವಡಿಸುವಂತೆ ಅವರು ನಿರ್ದೇಶನ ನೀಡಿದರು.
ಎಲ್ಲಾ ರಸ್ತೆಗಳಲ್ಲಿ ವೇಗವಾಗಿ ಓಡಾಡುವ ಸಿದ್ಧ ಕಾಂಕ್ರೀಟ್ ಮಿಕ್ಸಿಂಗ್ ವಾಹನಗಳು ಓವರ್‌ಲೋಡ್ ಹೇರಿಕೊಂಡು ರಸ್ತೆ ಮೇಲೆ ಕಾಂಕ್ರೀಟ್ ಎಲ್ಲೆಡೆ ಬಿದ್ದು ರಸ್ತೆ ಹಾಳಾಗುತ್ತಿದೆ, ಮಾತ್ರವಲ್ಲ ಮರಳು ಸಾಗಾಣಿಕೆ ವಾಹನಗಳ ಓವರ್ ಲೋಡ್‌ನಿಂದಲೂ ತೊಂದರೆ ಉಂಟಾಗುವುದರ ಜೊತೆಗೆ ಅಪಘಾತ ಗಳು ಹೆಚ್ಚುತ್ತಿವೆ. ಇವುಗಳ ನಿಯಂತ್ರಣಕ್ಕೆ ಪ್ರಾದೇಶಿಕ ಸಾರಿಗೆ ಅಧಿಕಾರಿಗಳಿಗೆ ತಿಳಿಸಿದ್ದು, ಇದರ ಅನುಷ್ಠಾನ ಇನ್ನಷ್ಟು ಪರಿಣಾಮಕಾರಿಯಾಗಿ ಹಾಗೂ ನಿರಂತರವಾಗಿ ನಡೆಯಬೇಕು ಎಂದವರು ಸೂಚನೆಗಳನ್ನು ನೀಡಿದರು.
ಸಾರ್ವಜನಿಕರು ಸೇರಿದಂತೆ ಪ್ರತಿಯೊಬ್ಬ ವಾಹನ ಚಾಲಕರು ರಸ್ತೆಯಲ್ಲಿ ವಾಹನವನ್ನು ಚಲಾಯಿಸಿಕೊಂಡು ಹೋಗುವಾಗ ರಸ್ತೆ ಸುರಕ್ಷತಾ ನಿಯಮ ಗಳನ್ನು ಕಡ್ಡಾಯವಾಗಿ ಪಾಲಿಸಿದ್ದಲ್ಲಿ ರಸ್ತೆ ಅಪಘಾತ ಆಗುವುದನ್ನು ತಪ್ಪಿಸಲು ಸಾಧ್ಯ. ಎಲ್ಲರೂ ಇದಕ್ಕೆ ಒತ್ತು ನೀಡಬೇಕು. ಅಜಾಗರೂಕತೆ, ನಿರ್ಲಕ್ಷ್ಯ ಹಾಗೂ ವೇಗದ ಚಾಲನೆ ಮಾಡುವುದು ಕಾನೂನಿಗೆ ವಿರುದ್ಥ. ರಸ್ತೆ ಸುರಕ್ಷತಾ ನಿಯಮಗಳನ್ನು ಪ್ರತಿಯೊಬ್ಬರೂ ಚಾಚೂ ತಪ್ಪದೇ ಪಾಲಿಸಬೇಕು ಎಂದರು.
ಬಸ್‌ಗಳಿಗೆ ಬಾಗಿಲು ಅಳವಡಿಸಿ: ಜಿಲ್ಲೆಯಲ್ಲಿ ಸಂಚರಿಸುವ ಎಲ್ಲಾ ಖಾಸಗಿ ಹಾಗೂ ಸರಕಾರಿ ಬಸ್‌ಗಳಲ್ಲಿ ಕಡ್ಡಾಯ ವಾಗಿ ಬಾಗಿಲುಗಳನ್ನು ಅಳವಡಿ ಸುವಂತೆ ಈ ಹಿಂದಿನ ಸಭೆಯಲ್ಲಿ ಸೂಚಿಸಲಾಗಿದ್ದರೂ, ಇನ್ನೂ ಸಹ ಇದು ಪೂರ್ಣ ಪ್ರಮಾಣದಲ್ಲಿ ಅನುಷ್ಠಾನ ಆಗದೇ ಇರುವ ಬಗ್ಗೆ ಜಿಲ್ಲಾಧಿಕಾರಿ ತೀವ್ರ ಅಸಮಾಧಾನ ವ್ಯಕ್ತಪಡಿಸಿದರು. ಕೂಡಲೇ ಈ ಬಗ್ಗೆ ಕ್ರಮ ತೆಗೆದು ಕೊಳ್ಳುವಂತೆ ಅವರು ಸೂಚಿಸಿದರು.
ಜಿಲ್ಲೆಯಲ್ಲಿ ಸಂಚರಿಸುವ ಬಸ್‌ಗಳ ಸಂಖ್ಯೆ, ಅವುಗಳಲ್ಲಿ ಡೋರ್ ಅಳವಡಿಸಿರುವ ಹಾಗೂ ಅಳವಡಿಸದೇ ಇರುವ ಬಸ್‌ಗಳ ಸಂಖ್ಯೆ ಹಾಗೂ ಅಳವಡಿಸದೇ ಇರುವ ಬಸ್‌ಗಳ ವಿರುದ್ಧ ತೆಗೆದುಕೊಂಡ ಕ್ರಮಗಳ ಬಗ್ಗೆ ಎರಡು ವಾರಗಳ ಒಳಗೆ ತಮಗೆ ಮಾಹಿತಿ ನೀಡುವಂತೆ ಸಾರಿಗೆ ಇಲಾಖೆಯ ಅಧಿಕಾರಿಗಳಿಗೆ ತಿಳಿಸಿದ ಅವರು, ವಾಹನಗಳ ಫಿಟ್ನೆಸ್ ರಿನೀವಲ್‌ಗೆ ಬಂದಂತಹ ಸಂದರ್ಭದಲ್ಲಿ ಅಳಡಿಸಿದ್ದಲ್ಲಿ ಮಾತ್ರ ನವೀಕರಣ ಮಾಡಲು ಕ್ರಮಕೈಗೊಳ್ಳಬೇಕು ಎಂದರು.
ಶಾಲಾ-ಕಾಲೇಜುಗಳ ಪರಿಮಿತಿಯ ರಸ್ತೆಗಳಲ್ಲಿ ಸೂಚನಾ ಫಲಕಗಳು, ಹಂಪ್ಸ್‌ಗಳು, ವೇಗ ತಡೆ, ಬ್ಯಾರಿಕೇಡ್, ಝೀಬ್ರಾ ಪಟ್ಟಿ ಸೇರಿದಂತೆ ಇತರ ಅಗತ್ಯ ಸುರಕ್ಷತಾ ಕ್ರಮಗಳನ್ನು ಆದ್ಯತೆಯ ಮೇಲೆ ಕೈಗೊಳ್ಳಬೇಕು ಎಂದ ಅವರು, ರಸ್ತೆ ಸುರಕ್ಷತಾ ಕ್ರಮಗಳನ್ನು ಅಳವಡಿಸಲು ಇಲಾಖೆಯ ಹಂತದಲ್ಲಿಯೇ ನಿರ್ಣಯ ಕೈಗೊಂಡು ಅನುಷ್ಠಾನಗೊಳಿಸಬೇಕು ಎಂದರು.
ಪ್ರಯಾಣಿಕರು ಬಸ್‌ಗಳಲ್ಲಿ ಸಂಚರಿಸುವಾಗ ಕಸ ಸೇರಿದಂತೆ ನೀರಿನ ಬಾಟಲಿಗಳನ್ನು ಎಲ್ಲೆಂದರಲ್ಲಿ ಎಸೆಯುತ್ತಾರೆ. ಇದು ನಗರದ ಸ್ವಚ್ಛತೆಗೆ ಮಾರಕ. ಪ್ರಯಾಣಿಕರು ಕಸವನ್ನು ಹಾಕಲು ಅನುಕೂಲವಾಗುವಂತೆ ಬಸ್ಸಿನಲ್ಲಿಯೇ ಕಸದ ಬುಟ್ಟಿಗಳನ್ನು ಅಳವಡಿಸಲು ಸೂಚನೆಗಳನ್ನು ನೀಡಲಾಗಿತ್ತು. ಆದರೆ ನಿರೀಕ್ಷಿತ ಮಟ್ಟದಲ್ಲಿ ಇದು ಅನುಷ್ಠಾನ ಗೊಂಡಿಲ್ಲ. ಈ ಬಗ್ಗೆ ಪ್ರಾದೇಶಿಕ ಸಾರಿಗೆ ಅಧಿಕಾರಿಗಳು ಕ್ರಮವಹಿಸಬೇಕು ಎಂದರು.
ಜಿಲ್ಲೆಯ ರಾಷ್ಟ್ರೀಯ ಹೆದ್ದಾರಿಗಳಲ್ಲಿ ಈಗಾಗಲೇ ಗುರುತಿಸಿರುವ 18 ಬ್ಲ್ಯಾಕ್‌ಸ್ಪಾಟ್ ಪ್ರದೇಶಗಳಲ್ಲಿ ಸುರಕ್ಷತಾ ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂದ ಅವರು ಉಳಿದ ಪ್ರದೇಶಗಳಲ್ಲಿ ಹೆಚ್ಚುವರಿ ಸುರಕ್ಷತಾ ಕ್ರಮಗಳನ್ನು ಶೀಘ್ರ ವಾಗಿ ಪೂರ್ಣಗೊಳಿಸಬೇಕು ಎಂದರು.
ಸಂಚಾರ ದಟ್ಟಣೆ ಪ್ರದೇಶದಲ್ಲಿ ಪಾರ್ಕಿಂಗ್ ಬೇಡ: ನಗರದೊಳಗೆ ಜನಸಂಚಾರ ದಟ್ಟಣೆ ಇರುವ ಪ್ರದೇಶಗಳಲ್ಲಿ ವಾಹನಗಳ ಪಾರ್ಕಿಂಗ್‌ಗೆ ಅವಕಾಶ ನೀಡಬಾರದು. ಜೊತೆಗೆ ರಸ್ತೆ ಬದಿಯಲ್ಲಿರುವ ಅನಧಿಕೃತ ಗೂಡಂಗಡಿ, ಫಾಸ್ಟ್ ಫುಡ್ ಅಂಗಡಿ, ತಳ್ಳುಗಾಡಿಗಳನ್ನು ತೆರವುಗೊಳಿಸಬೇಕು. ಸಾಕಷ್ಟು ಪ್ರಮಾಣದಲ್ಲಿ ವೆಂಡಿಗ್ ಝೋನ್‌ಗಳನ್ನು ಗುರು ತಿಸಿ, ಬದಲಿ ವ್ಯವಸ್ಥೆಯನ್ನು ಮಾಡಲು ಮುಂದಾಗಬೇಕು ಎಂದು ನಗರಸಭಾ ಆಯುಕ್ತರಿಗೆ ಜಿಲ್ಲಾಧಿಕಾರಿ ಸ್ವರೂಪ ಟಿ.ಕೆ. ಸೂಚನೆ ನೀಡಿದರು.
ಸಭೆಯಲ್ಲಿ ಜಿಲ್ಲಾ ಪೊಲೀಸ್ ಅಧೀಕ್ಷಕ ಹರಿರಾಮ್ ಶಂಕರ್, ಪೌರಾಯುಕ್ತ ಮಹಾಂತೇಶ ಹಂಗರಗಿ, ಲೋಕೋಪ ಯೋಗಿ ಇಲಾಖೆಯ ಕಾರ್ಯಪಾಲಕ ಅಭಿಯಂತರ ಕಿರಣ್ ಎಸ್, ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಯೋಜನಾ ನಿರ್ದೇಶಕ ಅಬ್ದುಲ್ಲಾ ಮೊಹಮ್ಮದ್ ಅಜ್ಮಿ, ಅಭಿಯಂತರರು, ವಿವಿಧ ಜಿಲ್ಲಾ ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.
ನಿಲ್ದಾಣಗಳಲ್ಲಿ ಮಾತ್ರ ನಿಲುಗಡೆಗೆ ಅವಕಾಶ
ಜಿಲ್ಲೆಯಲ್ಲಿ ಸಂಚರಿಸುವ ಬಸ್‌ಗಳು ಬಸ್ ನಿಲ್ದಾಣವನ್ನು ಹೊರತುಪಡಿಸಿ ಇತರೆಡೆ ಜನರನ್ನು ಹತ್ತಿಸಿಕೊಳ್ಳಲು ಬಸ್‌ಗಳನ್ನು ನಿಲ್ಲಿಸಿದ್ದಲ್ಲಿ ಅಂತಹ ಬಸ್‌ಗಳ ವಿರುದ್ಧ ಸೂಕ್ತ ಕ್ರಮ ಜರುಗಿಸಬೇಕು ಎಂದು ಜಿಲ್ಲಾಧಿಕಾರಿಗಳು ಇಲಾಖಾ ಅಧಿಕಾರಿಗಳಿಗೆ ಸೂಚಿಸಿದರು.
ರಾಷ್ಟ್ರೀಯ ಹೆದ್ದಾರಿಗಳಲ್ಲಿ ಹೆಚ್ಚುವರಿ ಮೀಡಿಯನ್ ಓಪನಿಂಗ್‌ಗಳನ್ನು ಕೈಗೊಳ್ಳುವಾಗ ರಾಷ್ಟ್ರೀಯ ಹೆದ್ದಾರಿ ಇಲಾಖೆಯ ಅಧಿಕಾರಿಗಳು ಹಾಗೂ ಪೊಲೀಸ್ ಇಲಾಖೆಗಳು ಜಂಟಿ ಸಮೀಕ್ಷೆ ನಡೆಸಿ, ನಿಯಮಾನುಸಾರ ಅವಶ್ಯಕತೆಗಳನ್ನು ಆಧರಿಸಿ ಅಂತಿಮ ನಿರ್ಧಾರ ಕೈಗೊಳ್ಳಬೇಕು ಎಂದರು.