×
Ad

ಮಲ್ಪೆ ಬಂದರಿನಲ್ಲಿ ನಿರ್ವಹಣೆ ಇಲ್ಲದೆ ಪಾಳುಬಿದ್ದ ಶೌಚಾಲಯ: ಮೂಲಸೌಕರ್ಯಗಳ ಕೊರತೆಗೆ ಮೀನುಗಾರರ ಆಕ್ರೋಶ

Update: 2026-06-29 19:46 IST

ಉಡುಪಿ, ಜೂ.29: ಏಷ್ಯಾದ ಅತಿ ದೊಡ್ಡ ಸರ್ವಋತು ಮೀನುಗಾರಿಕಾ ಬಂದರು ಎಂಬ ಹೆಗ್ಗಳಿಕೆಗೆ ಪಾತ್ರವಾ ಗಿರುವ ಮಲ್ಪೆ ಬಂದರಿನಲ್ಲಿ ಮೀನುಗಾರರ ಅನುಕೂಲಕ್ಕಾಗಿ ಸುಮಾರು 12 ವರ್ಷಗಳ ಹಿಂದೆ ನಿರ್ಮಿಸಲಾದ ಶೌಚಾಲಯಗಳು ಇಂದಿಗೂ ಬಳಕೆಗೆ ಲಭ್ಯವಾಗದೇ ನಿರುಪಯುಕ್ತವಾಗಿ ಬಿದ್ದಿವೆ. ಮಹಿಳಾ ಮೀನುಗಾರರಿಗಾಗಿ ನಿರ್ಮಿಸಿದ್ದ ವಿಶ್ರಾಂತಿ ಕೊಠಡಿಯೂ ಪಾಳುಬಿದ್ದಿದ್ದು, ಮೂಲಸೌಕರ್ಯಗಳ ಕೊರತೆ ಬಗ್ಗೆ ಮೀನುಗಾರರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಮೀನುಗಾರಿಕೆ ಇಲಾಖೆಯು ಲಕ್ಷಾಂತರ ರೂಪಾಯಿ ವೆಚ್ಚದಲ್ಲಿ ಎರಡು ಶೌಚಾಲಯಗಳನ್ನು ನಿರ್ಮಿಸಿದ್ದರೂ, ಅವುಗಳನ್ನು ನಿರ್ವಹಿಸಲು ಸಿಬ್ಬಂದಿ ಯನ್ನು ನೇಮಿಸದ ಕಾರಣ ಸಾರ್ವಜನಿಕ ಬಳಕೆಗೆ ತೆರೆಯಲಾಗಿಲ್ಲ ಎಂದು ಮೀನುಗಾರರು ದೂರಿದ್ದಾರೆ.

ಮಲ್ಪೆ ಬಂದರಿನಲ್ಲಿ ಪ್ರತಿದಿನ ಸುಮಾರು 700 ಮೀನುಗಾರಿಕಾ ದೋಣಿಗಳು ಮೀನು ಇಳಿಸುತ್ತಿದ್ದು, ಸಾವಿರಾರು ಮೀನುಗಾರರು ಮತ್ತು ಕಾರ್ಮಿಕರು ಇಲ್ಲಿ ಕಾರ್ಯನಿರ್ವಹಿಸುತ್ತಾರೆ. ಆದರೆ ಶೌಚಾಲಯದ ಸೌಲಭ್ಯ ಇಲ್ಲದ ಕಾರಣ ಅವರು ಕಿಲೋಮೀಟರ್ಗಳಷ್ಟು ದೂರ ತೆರಳಿ ಶೌಚಾಲಯ ಬಳಸಬೇಕಾದ ಅನಿವಾರ್ಯತೆ ಎದುರಿಸುತ್ತಿದ್ದಾರೆ ಎಂದು ಮಲ್ಪೆ ಕನ್ನಿ ಮೀನುಗಾರರ ಸಂಘದ ಅಧ್ಯಕ್ಷ ದಯಾಕರ ಸುವರ್ಣ ತಿಳಿಸಿದ್ದಾರೆ.

ಶೌಚಾಲಯಗಳ ನಿರ್ವಹಣೆಗಾಗಿ ಸಿಬ್ಬಂದಿಯನ್ನು ನೇಮಿಸುವಂತೆ ಮೀನುಗಾರಿಕೆ ಇಲಾಖೆಗೆ ಹಲವು ಬಾರಿ ಮನವಿ ಸಲ್ಲಿಸಿದ್ದರೂ ಯಾವುದೇ ಕ್ರಮ ಕೈಗೊಂಡಿಲ್ಲ. ಜನಪ್ರತಿನಿಧಿಗಳು ಕೂಡ ಇತ್ತ ಗಮನಹರಿಸುತ್ತಿಲ್ಲ ಎಂದು ಅವರು ದೂರಿದರು.

ಕುಡಿಯುವ ನೀರಿನ ಟ್ಯಾಂಕ್ ಕೂಡ ದುಸ್ಥಿತಿಯಲ್ಲಿದ್ದು, ನಿರ್ಮಿಸಲಾದ ಮೂಲಸೌಕರ್ಯಗಳು ನಿರ್ವಹಣೆಯ ಕೊರತೆ ಯಿಂದ ಹಾಳಾಗುತ್ತಿವೆ. ಹಾಗಾಗಿ ಕೂಡಲೇ ಶೌಚಾಲಯಗಳನ್ನು ದುರಸ್ತಿಗೊಳಿಸಿ, ಅವುಗಳ ನಿರ್ವಹಣೆಗೆ ಸಿಬ್ಬಂದಿ ಯನ್ನು ನೇಮಿಸಬೇಕು. ಸಾಧ್ಯವಾಗದಿದ್ದರೆ ಸ್ಥಳೀಯರಿಗೆ ಟೆಂಡರ್ ಮೂಲಕ ನಿರ್ವಹಣೆಯ ಜವಾಬ್ದಾರಿ ವಹಿಸಬೇಕು ಎಂದು ಮೀನುಗಾರರು ಆಗ್ರಹಿಸಿದ್ದಾರೆ.

ಜನಪ್ರತಿನಿಧಿಗಳು ಹಾಗೂ ಸಂಬಂಧಪಟ್ಟ ಅಧಿಕಾರಿಗಳು ಈ ಸಮಸ್ಯೆ ಯತ್ತ ತಕ್ಷಣ ಗಮನಹರಿಸಬೇಕು ಎಂದು ಅವರು ಆಗ್ರಹಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News