×
Ad

ಉಡುಪಿ ಕೋರ್ಟ್‌ ಸಂಕೀರ್ಣಕ್ಕೆ ಮೂರನೇ ಬಾರಿಗೆ ಹುಸಿ ಬಾಂಬ್‌ ಬೆದರಿಕೆ

Update: 2026-06-29 18:41 IST

ಸೂಕ್ತ ತನಿಖೆಗೆ ಒತ್ತಾಯಿಸಿ ಉಡುಪಿ ವಕೀಲರ ಸಂಘದಿಂದ ಮನವಿ

ಉಡುಪಿ, ಜೂ.29: ಉಡುಪಿ ಜಿಲ್ಲಾ ನ್ಯಾಯಾಲಯದ ಸಂಕೀರ್ಣದಲ್ಲಿ ಮೂರನೇ ಬಾರಿಗೆ ಬಾಂಬ್‌ ಇಟ್ಟಿರುವುದಾಗಿ ಬೆದರಿಕೆ ಇಮೇಲ್‌ ಸಂದೇಶ ಬಂದಿದೆ. ಈ ಹಿನ್ನೆಲೆಯಲ್ಲಿ ಪೊಲೀಸರು ಸೋಮವಾರ ಬೆಳಿಗ್ಗೆ ಕೋರ್ಟ್‌ ಆವರಣದಲ್ಲಿ ತೀವ್ರ ಶೋಧ ಕಾರ್ಯ ನಡೆಸಿದರು.

ಇಂದು ಬೆಳಗ್ಗೆ ಅನಾಮೇಧ ಇಮೇಲ್‌ನಿಂದ ಕೋರ್ಟ್‌ ಇಮೇಲ್‌ಗೆ ಸಂದೇಶ ಬಂದಿದ್ದು, ಕೂಡಲೇ ಈ ಬಗ್ಗೆ ಉಡುಪಿ ನಗರ ಪೊಲೀಸರಿಗೆ ಮಾಹಿತಿ ನೀಡಲಾಯಿತು. ಅದರಂತೆ ಸ್ಥಳಕ್ಕೆ ಆಗಮಿಸಿದ ಶ್ವಾನ ದಳ ಮತ್ತು ಬಾಂಬ್‌ ನಿಷ್ಕಿೃಯ ದಳ ತಪಾಸಣೆ ನಡೆಸಿತು. ಎಲ್ಲೂ ಯಾವುದೇ ವಸ್ತುಗಳು ಪತ್ತೆಯಾಗದ ಹಿನ್ನೆಲೆಯಲ್ಲಿ ಇದೊಂದು ಹುಸಿ ಕರೆ ಎಂಬುದು ದೃಢಪಟ್ಟಿತು.

ಜೂ.21ರಂದು ಮತ್ತು ಜೂ.26ರಂದು ಇದೇ ರೀತಿಯ ಇಮೇಲ್‌ ಸಂದೇಶ ನ್ಯಾಯಾಲಯಕ್ಕೆ ಬಂದಿತ್ತು. ಹೀಗೆ ಪದೇ ಪದೇ ಕೋರ್ಟ್‌ನಲ್ಲಿ ಬಾಂಬ್‌ ಇಟ್ಟಿರುವ ಬಗ್ಗೆ ಸಂದೇಶ ಬರುತ್ತಿರುವ ಬಗ್ಗೆ ವಕೀಲರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಎಸ್ಪಿಗೆ ವಕೀಲರ ಮನವಿ: ಉಡುಪಿ ನ್ಯಾಯಾಲಯಕ್ಕೆ ಪದೇ ಪದೇ ಹುಸಿ ಬಾಂಬ್‌ ಬೆದರಿಕೆ ಬರುತ್ತಿರುವ ಹಿನ್ನಲೆಯಲ್ಲಿ ಸೂಕ್ತ ತನಿಖೆಗೆ ಒತ್ತಾಯಿಸಿ ಉಡುಪಿ ವಕೀಲರ ಸಂಘದ ಪ್ರತಿನಿಧಿಗಳು ಉಡುಪಿ ಜಿಲ್ಲಾ ಪೊಲೀಸ್‌ ಅಧೀಕ್ಷಕರಿಗೆ ಮನವಿ ಸಲ್ಲಿಸಿದರು.

ನ್ಯಾಯಾಧೀಶರ, ವಕೀಲರ, ನ್ಯಾಯಾಲಯ ಸಿಬ್ಬಂದಿ ಮತ್ತು ಕಕ್ಷಿಗಾರರುಗಳ ಹಿತದೃಷ್ಟಿಯಿಂದ ಜಿಲ್ಲಾ ಪೊಲೀಸ್‌ ಅಧೀಕ್ಷಕರ ಕಚೇರಿಗೆ ಭೇಟಿ ನೀಡಿದ ನಿಯೋಗ, ಈ ಸಂಬಂಧ ನ್ಯಾಯಾಲಯಕ್ಕೆ ಸೂಕ್ತ ರಕ್ಷಣೆ ಮತ್ತು ಪ್ರಕರಣದ ತನಿಖೆ ನಡೆಸಿ ಕ್ರಮಕೈಗೊಳ್ಳಬೇಕು ಎಂದು ಮನವಿ ಮಾಡಿತು.

ಬೇಡಿಕೆಗೆ ಸಕಾರತ್ಮಕವಾಗಿ ಸ್ಪಂದಿಸಿದ ಹೆಚ್ಚುವರಿ ಪೊಲೀಸ್‌ ಅಧೀಕ್ಷಕ ಸುಧಾಕರ ನಾಯ್ಕ್‌, ಶೀಘ್ರ ತನಿಖೆ ನಡೆಸಿ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದರು. ನಿಯೋಗದಲ್ಲಿ ವಕೀಲರ ಸಂಘದ ಪ್ರಧಾನ ಕಾರ್ಯದರ್ಶಿ ಚಂದ್ರ ಶೇಖರ್‌ ಶೆಟ್ಟಿ, ವಕೀಲರಾದ ವೈ.ಟಿ.ರಾಘವೇಂದ್ರ, ಅಖಿಲ ಬಿ.ಹೆಗ್ಡೆ, ಗುರುರಾಜ್‌ ಜಿ.ಎಸ್‌., ಅನಿಲ್‌ ಪೂಜಾರಿ, ಕವಿತಾ, ನಾಗರಾಜ್‌ ಕೆ., ಭಾನುಮತಿ ನಾಯರಿ ಮತ್ತಿತರರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News