×
Ad

ಮಲ್ಪೆ | ಗುತ್ತಿಗೆ ಆಧಾರದಲ್ಲಿ ಮೀನು ಮಾರಾಟ ಫೆಡರೇಶನ್‌ಗೆ 9.50 ಎಕರೆ ಬಂದರು ಭೂಮಿ : ರಘುಪತಿ ಭಟ್ ವಿರೋಧ

Update: 2025-11-14 20:39 IST

 ರಘುಪತಿ ಭಟ್

ಉಡುಪಿ, ನ.14: ಮಲ್ಪೆ ಬಂದರು ವ್ಯಾಪ್ತಿಯ 37554.55 ಚದರ ಮೀಟರ್ ಅಂದರೆ ಸರಿ ಸುಮಾರು 9.50 ಎಕರೆ ವಿಸ್ತೀರ್ಣದ ಬಂದರು ಭೂಮಿಯನ್ನು ಉಡುಪಿ ಶಾಸಕರು ಅಧ್ಯಕ್ಷರಾಗಿರುವ ಉಡುಪಿ ಜಿಲ್ಲಾ ಮೀನು ಮಾರಾಟ ಫೆಡರೇಶನ್ ನಿಯಮಿತ ಮುಲಿಹಿತ್ಲು, ಬೋಳಾರ್, ಮಂಗಳೂರು ಇವರಿಗೆ 15 ವರ್ಷಗಳ ಅವಧಿಗೆ ಗುತ್ತಿಗೆ ಆಧಾರದ ಮೇಲೆ ನೀಡಲು ಮುಖ್ಯಮಂತ್ರಿ ಸಿದ್ದರಾಮಯ್ಯ ಅಧ್ಯಕ್ಷತೆಯ ಕರ್ನಾಟಕ ಜಲ ಸಾರಿಗೆ ಮಂಡಳಿಯ ಸಭೆಯಲ್ಲಿ ನಿರ್ಣಯಿಸಿ ಅನುಮೋದನೆ ನೀಡಿರುವುದು ಖಂಡನೀಯ ಎಂದು ಉಡುಪಿಯ ಮಾಜಿ ಶಾಸಕ ಕೆ.ರಘುಪತಿ ಭಟ್ ತಿಳಿಸಿದ್ದಾರೆ.

ಈ ಜಾಗವು ಟೆಬ್ಮಾ ಶಿಫ್ ಯಾರ್ಡ್ ಹಿಂದಿರುವ ಸಿವಾಕ್ ಮತ್ತು ಹನುಮಾನ್ ವಿಠೋಭ ಭಜನಾ ಮಂದಿರದ ಸಮೀಪವಿದ್ದು, ಇದನ್ನು ಮೀನುಗಾರಿಕಾ ಉದ್ದೇಶವೆಂದು ಮೀನುಗಾರಿಕಾ ಫೆಡರೇಷನ್ಗೆ ಗುತ್ತಿಗೆ ನೀಡಿರುವುದು ಸ್ಥಳೀಯ ಹಿತಾಸಕ್ತಿಗೆ ವಿರುದ್ಧವಾಗಿದೆ. ಈ ಜಾಗವನ್ನು ಮೀನುಗಾರಿಕಾ ಉದ್ದೇಶಕ್ಕೆಂದು ಫೆಡರೇಷನ್ಗೆ ನೀಡಿರುವುದು ಕಾನೂನು ಬಾಹಿರ ಮತ್ತು ಜನ ವಿರೋಧಿಯಾಗಿದೆ. ತಕ್ಷಣ ಈ ಆದೇಶವನ್ನು ರದ್ದು ಮಾಡಿ ಮಲ್ಪೆ ಭಾಗದಲ್ಲಿ ಇರುವ 5 ಭಜನಾ ಮಂಡಳಿಗಳ ನೇತೃತ್ವದ ಮಲ್ಪೆ ಬೀಚ್ ಅಭಿವೃದ್ಧಿ ಸಮಿತಿಗೆ ಜಾಗ ಮಂಜೂರು ಮಾಡಿ ಮರು ಆದೇಶ ಮಾಡಿ ಆ ಮೂಲಕ ಪ್ರವಾಸೋದ್ಯಮಕ್ಕೆ ಪೂರಕವಾದ ಯೋಜನೆಗಳನ್ನು ರೂಪಿಸಬೇಕು ಎಂದು ಅವರು ಆಗ್ರಹಿಸಿದ್ದಾರೆ.

ಈ ಭೂಮಿಯನ್ನು ಮೀನುಗಾರಿಕಾ ಫೆಡರೇಷನ್ಗೆ ನೀಡಿದರೆ ಅಲ್ಲಿ ಖಾಸಗಿಯವರ ನೇತೃತ್ವದಲ್ಲಿ ಫಿಶ್ ಮಿಲ್ ಅಥವಾ ಇನ್ನಿತರ ಮೀನುಗಾರಿಕಾ ಹಾಗೂ ಪ್ರವಾಸೋದ್ಯಮಕ್ಕೆ ಸಂಬಂಧಿಸಿದ ಚಟುವಟಿಕೆಗಳನ್ನು ಆರಂಭಿಸುತ್ತಾರೆ. ಇದು ಸ್ಥಳೀಯವಾಗಿ ಸಮಸ್ಯೆಗಳನ್ನು ಉಂಟುಮಾಡುತ್ತದೆ. ಇದು ಮಲ್ಪೆಯ ಪ್ರವಾಸೋದ್ಯಮಕ್ಕೆ ಮತ್ತು ಸ್ಥಳೀಯ ಜನಜೀವನಕ್ಕೆ ಮಾರಕವಾಗಲಿದೆ. ಮೀನುಗಾರಿಕಾ ಉದ್ದೇಶಕ್ಕೆ ಈ ಭೂಮಿಯನ್ನು ನೀಡುವುದಾದರೆ ಮೀನುಗಾರಿಕಾ ಇಲಾಖೆ ಮೂಲಕ 4ನೇ ಹಂತದ ಬಂದರಿನ ಯೋಜನೆಗೆ ಈ ಜಾಗ ಸೂಕ್ತವಾಗಿದೆಂದು ಅವರು ತಿಳಿಸಿದ್ದಾರೆ.

ಶಾಸಕರ ಬಳಿಗೆ ಕ್ಷೇತ್ರದ ಅಭಿವೃದ್ಧಿ ಹಾಗೂ ಜನರ ಸಮಸ್ಯೆಗಳ ಬಗ್ಗೆ ಮನವಿ ಮಾಡಿದರೆ ನಾವು ವಿರೋಧ ಪಕ್ಷದಲ್ಲಿದ್ದೇವೆ. ರಾಜ್ಯದಲ್ಲಿ ಕಾಂಗ್ರೆಸ್ ಸರಕಾರ ಇರುವುದರಿಂದ ನಮ್ಮ ಮಾತಿಗೆ ಬೆಲೆ ಇಲ್ಲ. ಬಿಜೆಪಿ ಶಾಸಕರ ಕೆಲಸಗಳು ಆಗುವುದಿಲ್ಲ ಎಂದು ಸಬೂಬು ನೀಡುತ್ತಾರೆ. ಆದರೆ ಶಾಸಕರ ಅಧ್ಯಕ್ಷತೆಯ ಮೀನುಗಾರಿಕಾ ಫೆಡರೇಷನ್ಗೆ ಬೆಲೆಬಾಳುವ ಸುಮಾರು 9.50 ಎಕರೆ ಜಾಗವನ್ನು 15 ವರ್ಷದ ಅವಧಿಗೆ ಕಾಂಗ್ರೆಸ್ ಸರಕಾರ ಮುಖ್ಯಮಂತ್ರಿ ಸಿದ್ದರಾಮಯ್ಯ ಅಧ್ಯಕ್ಷತೆಯ ಕರ್ನಾಟಕ ಜಲಸಾರಿಗೆ ಮಂಡಳಿ ಅನುಮೋದನೆ ನೀಡುತ್ತದೆ. ಅಂದರೆ ಶಾಸಕರು ಕಾಂಗ್ರೆಸ್ ನೊಂದಿಗೆ ಒಳ ಒಪ್ಪಂದ ಮಾಡಿದರೇ? ಇಲ್ಲಿ ಶಾಸಕರ ಸ್ವಂತ ಲಾಭದ ಕೆಲಸ ಆಗುತ್ತದೆ. ಕ್ಷೇತ್ರದ ಅಭಿವೃದ್ಧಿ ಮತ್ತು ಜನಸಾಮಾನ್ಯರ ಕೆಲಸಗಳು ಆಗುವುದಿಲ್ಲ ಯಾಕೆ ಎಂದು ಅವರು ಪ್ರಶ್ನಿಸಿದ್ದಾರೆ.

ಈ ಸಂಬಂಧ ಈಗಾಗಲೇ ಸ್ಥಳೀಯವಾಗಿ ವಿರೋಧ ವ್ಯಕ್ತವಾಗಿದ್ದು ಅವರೊಂದಿಗೆ ಸೇರಿ ಈ ಆದೇಶ ರದ್ದುಪಡಿಸುವವರೆಗೆ ಹೋರಾಟವನ್ನು ನಡೆಸಲಾಗುವುದು. ಯಾವುದೇ ಕಾರಣಕ್ಕೂ ಸ್ಥಳೀಯ ಜನರ ಹಿತಾಸಕ್ತಿಗೆ ವಿರುದ್ಧವಾದ ಈ ಆದೇಶವನ್ನು ಒಪ್ಪುವ ಪ್ರಶ್ನೆಯೇ ಇಲ್ಲ. ಈ ಬಗ್ಗೆ ಜಿಲ್ಲಾಡಳಿತ ಮದ್ಯಪ್ರವೇಶಿಸಿ ಸೂಕ್ತ ಕ್ರಮ ಕೈಗೊಳ್ಳಬೇಕು. ಮುಖ್ಯಮಂತ್ರಿ ಮತ್ತು ಮೀನುಗಾರಿಕೆ, ಬಂದರು ಒಳನಾಡು ಜಲ ಸಾರಿಗೆ ಸಚಿವರು ತಕ್ಷಣ ಕರ್ನಾಟಕ ಜಲ ಸಾರಿಗೆ ಮಂಡಳಿ ನೀಡಿದ ಈ ಆದೇಶವನ್ನು ರದ್ದುಪಡಿಸಬೇಕು ಎಂದು ಅವರು ಒತ್ತಾಯಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News