ಮಲ್ಪೆ ಬೀಚ್ ದುರಂತ: ಹಾಸನದ ಯುವಕರಿಬ್ಬರೂ ಮೃತ್ಯು
Update: 2025-10-04 18:19 IST
ಮಲ್ಪೆ, ಅ.4: ಮಲ್ಪೆ ಬೀಚ್‌ಗೆ ಪ್ರವಾಸಕ್ಕೆ ಬಂದು ನೀರು ಪಾಲಾಗಿ ನಾಪತ್ತೆಯಾಗಿದ್ದ ಹಾಗೂ ಅಸ್ವಸ್ಥಗೊಂಡ ಹಾಸನದ ಯುವಕರಿಬ್ಬರೂ ಇಂದು ಮೃತಪಟ್ಟ ಬಗ್ಗೆ ವರದಿಯಾಗಿದೆ.
ಸಮುದ್ರದಲ್ಲಿ ಮುಳುಗಿ ನಾಪತ್ತೆಯಾಗಿದ್ದ ಮಿಥುನ್ (20) ಎಂಬವರ ಮೃತದೇಹ ಇಂದು ಸಂಜೆ ವೇಳೆ ಪತ್ತೆಯಾಗಿದೆ. ತೀವ್ರವಾಗಿ ಅಸ್ವಸ್ಥಗೊಂಡ ಶಶಾಂಕ್ (22) ಎಂಬವರು ಇಂದು ಬೆಳಗಿನ ಜಾವ ಚಿಕಿತ್ಸೆ ಫಲಕಾರಿಯಾಗದೆ ಉಡುಪಿ ಖಾಸಗಿ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ.
ಒಟ್ಟು ಏಳು ಮಂದಿ ಯುವಕರ ತಂಡ ಹಾಸನದಿಂದ ಪ್ರವಾಸ ಬಂದಿದ್ದು, ಶುಕ್ರವಾರ ಸಂಜೆ ಮಲ್ಪೆ ಬೀಚಿನ ಸಮುದ್ರದಲ್ಲಿ ಆಡುತ್ತಿದ್ದರು. ಈ ವೇಳೆ ಯುವಕರು ಸಮುದ್ರದ ಅಲೆಗೆ ಸಿಲುಕಿ ಕೊಚ್ಚಿಕೊಂಡು ಹೋದರು. ಕೂಡಲೇ ಲೈಫ್ ಗಾರ್ಡ್‌ಗಳು ಹಾಗೂ ಸ್ಥಳೀಯರು ಆರು ಮಂದಿಯನ್ನು ರಕ್ಷಿಸಿದ್ದರು. ಇದರಲ್ಲಿ ತೀವ್ರವಾಗಿ ಅಸ್ವಸ್ಥಗೊಂಡಿದ್ದ ಶಶಾಂಕ್‌ನನ್ನು ಉಡುಪಿ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು.