Malpe | ಸೆಪ್ಟಿಕ್ ಟ್ಯಾಂಕಿನೊಳಗೆ ಬಿದ್ದು ಮಹಿಳೆ ಮೃತ್ಯು
Update: 2026-06-08 22:10 IST
ಸಾಂದರ್ಭಿಕ ಚಿತ್ರ
ಮಲ್ಪೆ: ಸೆಪ್ಟಿಕ್ ಟ್ಯಾಂಕ್‌ಗೆ ಬಿದ್ದು ಮಹಿಳೆಯೊಬ್ಬರು ಮೃತಪಟ್ಟ ದುರ್ಘಟನೆ ಬಡಾನಿಡಿಯೂರು ಗ್ರಾಮದಲ್ಲಿ ಜೂನ್ 7ರಂದು ಬೆಳಗ್ಗೆ ನಡೆದಿದೆ.
ಮೃತರನ್ನು ಬಡಾನಿಡಿಯೂರು ಗ್ರಾಮದ ಆಲಿಸ್ ಡಿಸೋಜಾ (74) ಎಂದು ಗುರುತಿಸಲಾಗಿದೆ.
ಮಾಹಿತಿಯ ಪ್ರಕಾರ, ಆಲಿಸ್ ಡಿಸೋಜಾ ಅವರು ಬಟ್ಟೆ ತೊಳೆದು ಒಣಗಿಸಲು ಹೊರಗೆ ಹೋಗುತ್ತಿದ್ದ ವೇಳೆ ದಾರಿಯಲ್ಲಿದ್ದ ಸೆಪ್ಟಿಕ್ ಟ್ಯಾಂಕ್‌ನ ಕಲ್ಲಿನ ಮುಚ್ಚಳದ ಮೇಲೆ ಕಾಲಿಟ್ಟಿದ್ದಾರೆ. ಈ ಸಂದರ್ಭದಲ್ಲಿ ಕಲ್ಲು ಒಡೆದು ಅವರು ಟ್ಯಾಂಕ್ ಒಳಗೆ ಬಿದ್ದು ಸಿಲುಕಿಕೊಂಡಿದ್ದಾರೆ ಎಂದು ತಿಳಿದುಬಂದಿದೆ.
ಘಟನೆಯ ಮಾಹಿತಿ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಧಾವಿಸಿದ ಈಶ್ವರ್ ಮಲ್ಪೆ ಅವರು ಆಲಿಸ್ ಡಿಸೋಜಾ ಅವರನ್ನು ಮೇಲಕ್ಕೆ ಎತ್ತಿದರು. ಆದರೆ ಅಷ್ಟರಲ್ಲಾಗಲೇ ಅವರು ಮೃತಪಟ್ಟಿರುವುದು ಕಂಡುಬಂದಿದೆ.
ಈ ಸಂಬಂಧ ಮಲ್ಪೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಮುಂದಿನ ತನಿಖೆ ನಡೆಸುತ್ತಿದ್ದಾರೆ.