ಸಾಲಿಗ್ರಾಮ ಪಟ್ಟಣ ಪಂಚಾಯತ್: ಘನತ್ಯಾಜ್ಯ ವಸ್ತುಗಳ ನಿರ್ವಹಣೆ ನಿಯಮಗಳ ಪರಿಣಾಮಕಾರಿ ಅನುಷ್ಠಾನಕ್ಕೆ ಸೂಚನೆ
ಉಡುಪಿ : ಸಾಲಿಗ್ರಾಮ ಪಟ್ಟಣ ಪಂಚಾಯತ್ ವ್ಯಾಪ್ತಿಯ ಸಾರ್ವಜನಿಕರು, ವ್ಯಾಪಾರೋದ್ಯಮಗಳು, ಬಾರ್ ಮತ್ತು ರೆಸ್ಟೋರೆಂಟ್, ಹೋಟೆಲ್ ಮತ್ತು ಇತರೆ ವಾಣಿಜ್ಯ ಉದ್ದಿಮೆದಾರರು, ಅರಣ್ಯ, ಪರಿಸರ ಮತ್ತು ಹವಾಮಾನ ಬದಲಾವಣೆ ಸಚಿವಾಲಯವು ಇದೇ ಎ.1ರಿಂದ ಜಾರಿಗೆ ತಂದಿರುವ ಘನತ್ಯಾಜ್ಯ ವಸ್ತು ನಿರ್ವಹಣೆ ನಿಯಮಗಳು-2026ರ ನಿಯಮದ ಪ್ರಕಾರ, ತಮ್ಮ ವ್ಯಾಪ್ತಿಯಲ್ಲಿ ಉತ್ಪತ್ತಿಯಾಗುವ ಘನತ್ಯಾಜ್ಯ ವಸ್ತುಗಳನ್ನು ಈ ಕೆಳಕಂಡಂತೆ 4 ವಿಧಗಳಾಗಿ ಕಡ್ಡಾಯವಾಗಿ ಮೂಲದಲ್ಲಿಯೇ ವಿಂಗಡಿಸಿ ಪಟ್ಟಣ ಪಂಚಾಯತ್ ಘನತ್ಯಾಜ್ಯ ವಾಹನಗಳಿಗೆ ನೀಡಬೇಕು.
ಹಸಿ ತ್ಯಾಜ್ಯ :
ಅಡಿಗೆ ಮನೆ ತ್ಯಾಜ್ಯ, ಆಹಾರ ತ್ಯಾಜ್ಯ, ತರಕಾರಿ ತ್ಯಾಜ್ಯ, ಮಾಂಸದ ತ್ಯಾಜ್ಯ, ಹಣ್ಣಿನ ತ್ಯಾಜ್ಯ, ಹೂವಿನ ತ್ಯಾಜ್ಯ, ಗಾರ್ಡನ್ ತ್ಯಾಜ್ಯ ಇತರೆ ಕರಗುವ ತ್ಯಾಜ್ಯ ವಸ್ತುಗಳನ್ನು ಮೂಲದಲ್ಲಿಯೇ ವಿಂಗಡಿಸಿ ತಮ್ಮ ತಮ್ಮ ಮನೆ ಹಂತದಲ್ಲಿಯೇ ಪೈಪ್ ಕಾಂಪೋಸ್ಟ್, ಬಿನ್ ಕಾಂಪೋಸ್ಟ್, ಪಿಟ್ ಕಾಂಪೋಸ್ಟ್ ಇತರೆ ವಿಧಾನಗಳ ಮೂಲಕ ವಿಲೇ ಮಾಡಬೇಕು.
ಒಣ ತ್ಯಾಜ್ಯ :
ಎಲ್ಲಾ ರೀತಿಯ ಪ್ಲಾಸ್ಟಿಕ್ ತ್ಯಾಜ್ಯ ವಸ್ತುಗಳು, ಬಟ್ಟೆಯ ತ್ಯಾಜ್ಯವನ್ನು ಪ್ರತ್ಯೇಕವಾಗಿ ಪಟ್ಟಣ ಪಂಚಾಯತ್ ಘನತ್ಯಾಜ್ಯ ವಾಹನಗಳಿಗೆ ನೀಡಬೇಕು.
ಸ್ಯಾನಿಟರಿ ತ್ಯಾಜ್ಯ :
ಡೈಪರ್, ಸ್ಯಾನಿಟರಿ ನ್ಯಾಪ್ಕಿನ್ಸ್, ಕಾಂಡೂಮ್ಸ್ ಪ್ರತ್ಯೇಕವಾಗಿ ಪಟ್ಟಣ ಪಂಚಾಯತ್ ಘನತ್ಯಾಜ್ಯ ವಾಹನಗಳಿಗೆ ನೀಡಬೇಕು.
ವಿಶೇಷ ಕಾಳಜಿ ತ್ಯಾಜ್ಯ :
ಪೈಂಟ್ ಡ್ರಮ್ಸ್ / ಡಬ್ಬಾ ಕೀಟನಾಶಕ ಔಷದಿಗಳ ಡಬ್ಬಾ, ಅವಧಿ ಮೀರಿದ ಔಷಧಿಗಳು, ಬಲ್ಬ್, ಟ್ಯೂಬ್ ಲೈಟ್, ಒಡೆದ ಥರ್ಮಾಮೀಟರ್, ಹಳೆಯ ಬ್ಯಾಟರಿಗಳು, ಬಳಸಿದ ಸಿರಿಂಜ್ ನೀಡಲ್ಸ್ಗಳನ್ನು ಪ್ರತ್ಯೇಕವಾಗಿ ಪಟ್ಟಣ ಪಂಚಾಯತ್ ಘನತ್ಯಾಜ್ಯ ವಾಹನ ಗಳಿಗೆ ನೀಡಬೇಕು.
ಈ ಮೇಲ್ಕಂಡಂತೆ ಸಾಲಿಗ್ರಾಮ ಪಟ್ಟಣ ಪಂಚಾಯತ್ ವ್ಯಾಪ್ತಿಯಲ್ಲಿ ಉತ್ಪತ್ತಿಯಾಗುವ ತ್ಯಾಜ್ಯಗಳನ್ನು ವಿಂಗಡಿಸಿ ಪಟ್ಟಣ ಪಂಚಾಯತ್ ವಾಹನಗಳಿಗೆ ನೀಡಬೇಕು. ತಪ್ಪಿದಲ್ಲಿ ಘನತ್ಯಾಜ್ಯ ವಸ್ತು ನಿರ್ವಹಣೆ ನಿಯಮಗಳು-2026ರಂತೆ ತ್ಯಾಜ್ಯ ವಿಂಗಡಣೆ ಮಾಡದೇ ಇರುವವರ ವಿರುದ್ಧ ದಂಡ ವಿಧಿಸುವುದಲ್ಲದೇ ಮೂಲಭೂತ ಸೌಕರ್ಯಗಳಾದ ನೀರು ಮತ್ತು ವಿದ್ಯುತ್ ಸಂಪರ್ಕ ಕಡಿತಗೊಳಿಸಲು ಕ್ರಮವಹಿಸಲಾಗುವುದು.
ಆದ್ದರಿಂದ ಸಾಲಿಗ್ರಾಮ ಪಟ್ಟಣ ಪಂಚಾಯತ್ ವ್ಯಾಪ್ತಿಯ ಸಾರ್ವಜನಿಕರು ಘನತ್ಯಾಜ್ಯ ವಸ್ತು ನಿರ್ವಹಣೆ ನಿಯಮಗಳು-2026ರನ್ನು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸಲು ಸಹಕರಿಸುವಂತೆ ಪಟ್ಟಣ ಪಂಚಾಯತ್ ಮುಖ್ಯಾಧಿಕಾರಿಗಳ ಪ್ರಕಟಣೆ ವಿನಂತಿಸಿದೆ.