ಬೆಳೆಗಳಿಗೆ ರಾಸಾಯನಿಕ ಗೊಬ್ಬರ ಬಳಕೆ : ಕೃಷಿ ಇಲಾಖೆ ಶಿಫಾರಸ್ಸು
ಸಾಂದರ್ಭಿಕ ಚಿತ್ರ
ಉಡುಪಿ : ಮುಂಗಾರು ಆರಂಭದ ಬೆನ್ನಲ್ಲೇ ಕೃಷಿ ಆಧಾರಿತ ಬೆಳೆಗಳ ಉತ್ತಮ ಇಳುವರಿ ಹಾಗೂ ಮಣ್ಣಿನ ಫಲವತ್ತತೆ ಕಾಪಾಡಲು ಸಂಯುಕ್ತ ರಾಸಾಯನಿಕ ರಸಗೊಬ್ಬರಗಳನ್ನು ಬಳಕೆ ಮಾಡುವಂತೆ ಕೃಷಿ ಇಲಾಖೆ ಜಿಲ್ಲೆಯ ರೈತರಿಗೆ ಶಿಫಾರಸ್ಸು ಮಾಡಿದೆ.
ಜಿಲ್ಲೆಯಲ್ಲಿ ಪ್ರಮುಖವಾಗಿ ಬೆಳೆಯುವ ಕೃಷಿ ಬೆಳೆಗಳಿಗೆ ಅಗತ್ಯ ಪ್ರಮಾಣದಲ್ಲೇ ರಸಗೊಬ್ಬರಗಳನ್ನು ರೈತರಿಗೆ ವಿತರಿಸುವುದು ಅತ್ಯವಶ್ಯಕವಾಗಿದ್ದು, ಅತಿಯಾದ ಯೂರಿಯಾ ಬಳಕೆಗೂ ಕಡಿವಾಣ ಹಾಕುವ ನಿಟ್ಟಿನಲ್ಲಿ ಸಲಹೆ ನೀಡಲಾಗಿದೆ.
ಜಿಲ್ಲೆಯ ಪ್ರಮುಖ ಬೆಳೆಯಾದ ಭತ್ತ ಬೆಳೆಗೆ ನೀಡಬೇಕಾಗಿರುವ ರಸಗೊಬ್ಬರದ ಪ್ರಮಾಣವನ್ನು ಹಾಗೂ ವಿವಿಧ ಸಂಯುಕ್ತ ರಸಗೊಬ್ಬರಗಳ ಸಂಯೋಜನೆ ಮೂಲಕ ನೀಡಬಹುದಾದ ರಸಗೊಬ್ಬರ ಪ್ರಮಾಣದ ಮಾಹಿತಿಯನ್ನು ಈಗಾಗಲೇ ಜಿಲ್ಲೆಯ ಎಲ್ಲಾ ರಸಗೊಬ್ಬರ ಮಾರಾಟಗಾರರಿಗೆ ನೀಡಿದ್ದು, ರೈತರು ರಸಗೊಬ್ಬರ ಖರೀದಿ ಮಾಡುವಾಗ ಶಿಫಾರಿತ ಪ್ರಮಾಣವನ್ನು ಮಾತ್ರ ಖರೀದಿಸಬೇಕು.
ರೈತರು ಬೆಳೆಗಳಿಗೆ ಸಾರಜನಕವನ್ನು ಕೇವಲ ಯೂರಿಯಾ ಮೂಲಕ ನೀಡದೆ ಸಂಯುಕ್ತ ರಸಗೊಬ್ಬರಗಳಾದ 17:17:17, 19:19:19, 10:26:26 ಅಥವಾ ಅಮೋನಿಯಮ್ ಸಲ್ಪೇಟ್ಅನ್ನು ಮೂಲಗೊಬ್ಬರವಾಗಿ ಬಳಸಿ ಯೂರಿಯಾವನ್ನು ಮೇಲು ಗೊಬ್ಬರಕ್ಕಾಗಿ ಮಾತ್ರ ಬಳಸಬೇಕು. ಹಾಗೆಯೇ ಮೇಲುಗೊಬ್ಬರವಾಗಿ ನ್ಯಾನೋ ಯೂರಿಯಾ ಮತ್ತು ನ್ಯಾನೋ ಡಿ.ಎ.ಪಿ.ಯನ್ನು ಸಹ ರೈತರು ಯೂರಿಯಾ ಬದಲಾಗಿ ಬಳಸಬಹುದಾಗಿದೆ. ಬೆಳೆಗಳಿಗೆ ಸಮತೋಲನವಾಗಿ ರಸಗೊಬ್ಬರಗಳನ್ನು ಬಳಕೆ ಮಾಡುವುದರಿಂದ ಇಳುವರಿ ಹೆಚ್ಚುವ ಜೊತೆಗೆ ಮಣ್ಣಿನ ಫಲವತ್ತತೆಯನ್ನು ಕಾಪಾಡಬಹುದಾಗಿದೆ ಎಂದು ಕೃಷಿ ಇಲಾಖೆಯ ಜಂಟಿ ಕೃಷಿ ನಿರ್ದೇಶಕರು ಮಾಹಿತಿ ನೀಡಿದ್ದಾರೆ.
ಸಂಯುಕ್ತ ರಸಗೊಬ್ಬರ ಬಳಸಿ :
ಭಾರತೀಯ ಕೃಷಿ ಅನುಸಂಧಾನ ಸಂಸ್ಥೆಯು ದೇಶಾದ್ಯಂತ ಜಿಲ್ಲಾವಾರು ಪ್ರಮುಖ ಬೆಳೆಗಳಿಗೆ ರಸಗೊಬ್ಬರ ಶಿಫಾರಸ್ಸನ್ನು ಹೊರಡಿಸಿದ್ದು, ಜಿಲ್ಲೆಗೆ ಸಂಬಂಧಿಸಿದಂತೆ ಪ್ರಧಾನ ಬೆಳೆಯಾದ ಭತ್ತಕ್ಕೆ 60:30:45 ಅನುಪಾತದಲ್ಲಿ - N:P2O5: K2O kg/ha - ರಸಗೊಬ್ಬರ ಪ್ರಮಾಣವನ್ನು ಶಿಫಾರಸ್ಸು ಮಾಡಲಾಗಿದೆ. ಈ ಪ್ರಮಾಣವನ್ನು ಯೂರಿಯಾ -ರಾಕ್ ಫಾಸ್ಟೇಟ್- ಮ್ಯೂರೇಟ್ ಆಫ್ ಪೊಟ್ಯಾಪ್: 130.43-150-75, ಡಿ.ಎ.ಪಿ-ಯೂರಿಯಾ - ಮ್ಯೂರೇಟ್ ಆಫ್ ಪೊಟ್ಯಾಷ್: 65.21-104.93-75, 17:17:17 - ಯೂರಿಯಾ - ಮ್ಯೂರೇಟ್ ಆಫ್ ಪೊಟ್ಯಾಷ್: 176.47-65.21-25, 19:19:19 - ಯೂರಿಯಾ - ಮ್ಯೂರೇಟ್ ಆಫ್ ಪೊಟ್ಯಾಷ್: 157.89-65.21-25 ಹಾಗೂ 10:26:26 - ಯೂರಿಯಾ - ಮ್ಯೂರೇಟ್ ಆಫ್ ಪೊಟ್ಯಾಷ್: 115.38-105.34-25 ಸಂಯೋಜನೆಯೊಂದಿಗೆ ಬೆಳೆಗಳಿಗೆ ಪೂರೈಸಬಹುದು ಎಂದು ಕೃಷಿ ಇಲಾಖೆಯ ಪ್ರಕಟಣೆ ತಿಳಿಸಿದೆ.