ವಾರಾಹಿ, ಸಿಆರ್‌ಝೆಡ್ ಸಮಸ್ಯೆ ಅರಿಯಲು ಡಿಸಿಎಂಗೆ ಆಹ್ವಾನ: ಮಂಜುನಾಥ್ ಭಂಡಾರಿ
ಕುಂದಾಪುರ: ಕರಾವಳಿಯ ಪ್ರತ್ಯೇಕ ನೀತಿ ಬಗ್ಗೆ ಬೆಂಗಳೂರಿನಲ್ಲಿ ಕುಳಿತು ತೀರ್ಮಾನಿಸಲಾಗುವುದಿಲ್ಲ. ವಾರಾಹಿ ವಿಚಾರ ವಿಧಾನ ಪರಿಷತ್ ನಲ್ಲಿ ಸ್ಪಷ್ಟವಾಗಿ 3-4 ಬಾರಿ ಉಪಮುಖ್ಯಮಂತ್ರಿಗಳ ಬಳಿ ಧ್ವನಿಯೆತ್ತಿದ್ದು ಕರಾವಳಿ ವಿಚಾರದಲ್ಲಿ ವಾಸ್ತವ ಸ್ಥಿತಿ ತಿಳಿಯಲು ಇಲ್ಲಿಯೇ ಬಂದು ಸಭೆ ನಡೆಸುವುದಾಗಿ ಅವರು ಆಶ್ವಾಸನೆ ನೀಡಿದ್ದಾರೆ. ವಾರಾಹಿ, ಸಿಆರ್‌ಝೆಡ್ ಸಹಿತ ಹಲವು ವಾಸ್ತವ ಸಮಸ್ಯೆಗಳನ್ನು ಅರಿಯಲು ಹಾಗೂ ಅದಕ್ಕೆ ಪರಿಹಾರ ಕಂಡುಕೊಳ್ಳಲು ಡಿಸಿಎಂ ಅವರನ್ನು ಕರಾವಳಿಗೆ ಬರಮಾಡಿಕೊಳ್ಳಲಾಗುವುದು ಎಂದು ವಿಧಾನ ಪರಿಷತ್ ಸದಸ್ಯ ಮಂಜುನಾಥ ಭಂಡಾರಿ ಹೇಳಿದ್ದಾರೆ.
ಬೈಂದೂರು ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ವಿವಿಧ ಗ್ರಾಪಂಗಳಿಗೆ ಸೋಮವಾರ ಭೇಟಿ ನೀಡಿದ ಸಂದರ್ಭದಲ್ಲಿ ಅವರು ಕಟ್ಬೆಲ್ತೂರು ಗ್ರಾಪಂನಲ್ಲಿ ಸುದ್ದಿಗಾರರ ಜೊತೆ ಮಾತನಾಡುತಿದ್ದರು.
ಗ್ರಾಪಂ ವ್ಯಾಪ್ತಿಯ ಅಂಗನವಾಡಿ, ಕಟ್ಟಡಗಳು, ಲೈಬ್ರರಿ ಸಹಿತ ಮೂಲಭೂತ ಸಮಸ್ಯೆಗಳನ್ನು ಅರಿತು ಅದನ್ನು ಸರಿಪಡಿಸಲು ಬೇಕಾದ ಸಂಬಂಧಿತ ಅಧಿಕಾರಿಗಳಿಗೆ ಮಾತನಾಡಿ, ಅಗತ್ಯ ಕ್ರಮವಹಿಸಲು ಸೂಚಿಸಲಾಗುತ್ತದೆ. ಮೂರ್ನಾಲ್ಕು ಗ್ರಾಪಂ ಸೇರಿದ ಸಮಸ್ಯೆಗಳ ಬಗ್ಗೆ ಅರಿಯಲಾಗುತ್ತದೆ. ಹಾಗೆಯೇ 9/11, ವೇತನ, ವಿದ್ಯುತ್ ಸಹಿತ ರಾಜ್ಯಮಟ್ಟದ ಸಮಸ್ಯೆಗಳ ಬಗ್ಗೆ ವಿಧಾನಪರಿಷತ್‌ನಲ್ಲಿ ಧ್ವನಿಯೆತ್ತಿ, ಸಂಬಂಧಪಟ್ಟ ಸಚಿವರನ್ನು ಭೇಟಿ ಮಾಡಿ ಸಮಸ್ಯೆ ಬಗೆಹರಿಸಲು ಸಾಧ್ಯವಾಗುತ್ತದೆ ಎಂದರು.
ಪ್ರಾಥಮಿಕ ಆರೋಗ್ಯ ಕೇಂದ್ರಗಳನ್ನು ಉಪ ಆರೋಗ್ಯ ಕೇಂದ್ರಗಳಾಗಿ ಮಾಡುವ ವಿಚಾರದ ಬಗ್ಗೆ ಪತ್ರಕರ್ತರ ಪ್ರಶ್ನೆಗೆ ಉತ್ತರಿಸಿದ ಅವರು, ನಾಲ್ಕಾರು ಗ್ರಾ.ಪಂ ಸಂಬಂಧಪಟ್ಟ ವಿಚಾರಗಳನ್ನು ಸ್ಥಳೀಯ ಜನಪ್ರತಿನಿಧಿಗಳು ಪಕ್ಷಾತೀತವಾಗಿ ಜೊತೆಯಾಗಿ ಒಗ್ಗೂಡಿದರೆ ಸಮಸ್ಯೆ ಬಗೆಹರಿಸಲು ಮೇಲಿನ ಹಂತದಲ್ಲಿ ಕ್ರಮವಹಿಸಲು ಸಾಧ್ಯವಿದೆ. ಈ ಬಾರಿ ಹೆಚ್ಚಿನ ಮಳೆಯಿಂದಾಗಿ ಗ್ರಾಮೀಣ ರಸ್ತೆಗಳು ಹಾಳಾಗಿರುವ ಬಗ್ಗೆ ದೂರುಗಳು ಬಂದಿದ್ದು ಕೆಲವು ರಸ್ತೆಗಳನ್ನು ಪ್ರಾಕೃತಿಕ ವಿಕೋಪ ನಿಧಿಯಡಿ ಡಿಸಿಯವರು, ಲೋಕೋಪಯೋಗಿ ಇಲಾಖೆಯ ರಸ್ತೆಗಳು ಅದಕ್ಕೆ ಸಂಬಂದಪಟ್ಟವರಿಗೆ ಸರಿಪಡಿಸಲು ಸೂಚನೆ ನೀಡಲಾಗಿದೆ. ಶೀಘ್ರವೇ ಇದೆಲ್ಲಾ ಸಮಸ್ಯೆಗಳಿಗೆ ಪರಿಹಾರ ಸಿಗಲಿದೆ ಎಂದರು.
ವಿವಿಧ ಗ್ರಾಪಂ ಭೇಟಿಯ ಸಂದರ್ಭದಲ್ಲಿ ಮಾಜಿ ಶಾಸಕ ಕೆ.ಗೋಪಾಲ ಪೂಜಾರಿ, ಪಕ್ಷದ ಪ್ರಮುಖರಾದ ಎಸ್.ರಾಜು ಪೂಜಾರಿ, ಎಸ್. ಪ್ರಕಾಶ್ಚಂದ್ರ ಶೆಟ್ಟಿ, ಪ್ರದೀಪ್ ಶೆಟ್ಟಿ ಗುಡಿಬೆಟ್ಟು, ಪ್ರಸನ್ನ ಶೆಟ್ಟಿ ಕೆರಾಡಿ, ಉದಯ ಕುರ್ಮಾ ಶೆಟ್ಟಿ ವಂಡ್ಸೆ, ಆನಂದ ಬಿಲ್ಲವ, ಸುಧೀಶ್ ಶೆಟ್ಟಿ, ಶರತ್ ಕುರ್ಮಾ ಶೆಟ್ಟಿ, ಯಾಸಿನ್ ಸಾಹೇಬ್, ತಲ್ಲೂರು ಗ್ರಾ.ಪಂ. ಅಧ್ಯಕ್ಷ ಗಿರೀಶ್ ನಾಯ್ಕ್, ಉಪಾಧ್ಯಕ್ಷೆ ಚಂದ್ರಮತಿ ಹೆಗ್ಡೆ, ಸ್ಥಾಯಿ ಸಮಿತಿ ಅಧ್ಯಕ್ಷ ಉದಯ ಕುರ್ಮಾ ತಲ್ಲೂರು, ಸದಸ್ಯರು, ಪಿಡಿಒ, ಸಿಬಂದಿ, ಹೆಮ್ಮಾಡಿ ಗ್ರಾಪಂ ಅಧ್ಯಕ್ಷೆ ಶಕೀಲಾ, ಉಪಾಧ್ಯಕ್ಷ ಶೋಭಾ ಡಿ.ಕಾಂಚನ್, ಮಾಜಿ ಅಧ್ಯಕ್ಷರಾದ ಸತ್ಯನಾರಾಯಣ ರಾವ್ ಸುಧಾಕರ, ನೇತ್ರಾವತಿ, ಸದಸ್ಯರು, ಪಿಡಿಒ ಭಾವನಾ, ಸಿಬಂದಿ, ಕಟ್ ಬೆಲ್ತೂರು ಗ್ರಾಪಂ ಅಧ್ಯಕ್ಷೆ ವೈಶಾಲಿ, ಉಪಾಧಕ್ಷ ರಾಮ ಶೆಟ್ಟಿ, ಸ್ಥಾಯಿ ನಾಗರಾಜ್ ಪುತ್ರನ್, ಸದಸ್ಯರು, ಪ್ರಮುಖರಾದ ಶರತ್ ಕುಮಾರ್ ಶೆಟ್ಟಿ, ನಾಗರಾಜ ಪುತ್ರನ್, ರವಿ, ಶೇರ್ಖ ಬಳೆಗಾರ್, ಅಶೋಕ್ ಬಳೆಗಾರ್, ಚಂದ್ರ ಶೆಟ್ಟಿ, ನಾಡ ಗ್ರಾ.ಪಂ. ಅಧ್ಯಕ್ಷೆ ಪಾರ್ವತಿ, ಉಪಾಧ್ಯಕ್ಷ ಪೃಥ್ವಿಕ್ ಶೆಟ್ಟಿ, ಪಿಡಿಒ ಹರೀಶ್, ಸದಸ್ಯರು, ಉಪಸ್ಥಿತರಿದ್ದರು.
‘ಗ್ರಾಮ ಪಂಚಾಯತ್‌ನಲ್ಲಿ ಗೆದ್ದ ಪ್ರತಿನಿಧಿಗಳು ಜನರೊಂದಿಗಿದ್ದು ಅವರ ಕಷ್ಟಕ್ಕೆ ನಿತ್ಯ ಸ್ಪಂದನೆ ನೀಡುವವರು. ನಾನೊಬ್ಬ ಚುನಾಯಿತ ಪ್ರತಿನಿಧಿಗಳ ಪ್ರತಿನಿಧಿಯಾಗಿ ಗ್ರಾಮಪಂಚಾಯತ್ ಭೇಟಿಗಳು ನಮ್ಮ ಜವಬ್ದಾರಿ. ವರ್ಷಕ್ಕೆ ಸಿಗುವ 2 ಕೋಟಿ ಅನುದಾನದಲ್ಲಿ ಗ್ರಾಪಂ ಹಾಗೂ ವಾರ್ಡ್‌ಗಳಿಗೆ ಅನುದಾನ ಕೊಟ್ಟು ಅದರ ಮಾಹಿತಿ ನೀಡಲು ಆಯಾಯ ಗ್ರಾಪಂ ಭೇಟಿ ಮಾಡಲಾಗುತ್ತಿದೆ’
-ಮಂಜುನಾಥ್ ಭಂಡಾರಿ, ವಿಧಾನ ಪರಿಷತ್ ಸದಸ್ಯರು