ಉಡುಪಿ ಜಿಲ್ಲೆಯ ರೈಸ್‌ಮಿಲ್‌ಗಳಿಂದ ರೈತರ ಭತ್ತ ಖರೀದಿ ವೇಳೆ ಭಾರಿ ಪ್ರಮಾಣದ ಮೋಸ: ಕೆಆರ್‌ಎಸ್ ಪಕ್ಷ ಆರೋಪ
ಉಡುಪಿ: ಮುಂಗಾರು ಸಂದರ್ಭದಲ್ಲಿ ಬೆವರಿಳಿಸಿ ದುಡಿದು ತಾವು ಬೆಳೆದ ಭತ್ತವನ್ನು ಕಟಾವಿನ ಬಳಿಕ ರೈಸ್‌ಮಿಲ್‌ಗೆ ಕೊಂಡೊಯ್ದು ಮಾರಾಟ ಮಾಡುವ ಜಿಲ್ಲೆಯ ರೈತರಿಗೆ ರೈಸ್‌ಮಿಲ್ ಮಾಲಕರು ಭಾರೀ ಪ್ರಮಾಣದ ಮೋಸ, ವಂಚನೆ ಮಾಡುತಿದ್ದಾರೆ. ಇದರಿಂದ ವಿವಿಧ ಕಾರಣಗಳಿಂದ ವಂಚನೆಗೆ ಸಿಲುಕುವ ರೈತರು ದೊಡ್ಡ ಪ್ರಮಾಣದ ಶೋಷಣೆಗೂ ಬಲಿಯಾಗುತಿದ್ದಾರೆ ಎಂದು ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷ (ಕೆಆರ್‌ಎಸ್) ಪಕ್ಷ ಉಡುಪಿ ಜಿಲ್ಲಾ ಘಟಕ ಆರೋಪಿಸಿದೆ.
ಉಡುಪಿಯಲ್ಲಿಂದು ಕರೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಕೆಆರ್‌ಎಸ್ ಪಕ್ಷದ ರಾಜ್ಯ ಪ್ರಧಾನ ಕಾರ್ಯದರ್ಶಿ ಹಾಗೂ ಉಡುಪಿ ಜಿಲ್ಲಾ ಉಸ್ತುವಾರಿ ರಘುಪತಿ ಭಟ್ ಅವರು, ರೈತ ಬೆಳೆದ ಭತ್ತವನ್ನು ಕೆ.ಜಿ.ಗೆ 23ರಿಂದ 27ರೂ.ಗಳಿಗೆ ಖರೀದಿಸುವ ರೈಸ್‌ಮಿಲ್ ಮಾಲಕರು, ಬಳಿಕ ಅಕ್ಕಿ ಮಾಡಿದ ಬಳಿಕ ಕೆ.ಜಿ.ಗೆ 54 ರೂ.ಗಳಿಗೆ ಅದೇ ರೈತನಿಗೆ ಮಾರುತ್ತಾರೆ. ಇದರಿಂದ ಒಂದು ಕ್ವಿಂಟಾಲ್ ಭತ್ತವನ್ನು ಮಾರುವ ರೈತನಿಗೆ ಕೇವಲ 500 ಕಿ.ಲೋ. ಅಕ್ಕಿ ಮರಳಿ ಸಿಗುತ್ತಿದೆ ಎಂದು ವಿವರಿಸಿದರು.
ಇದರಿಂದ ಕಷ್ಟಪಟ್ಟ ಬೇಸಾಯ ಮಾಡುವ ರೈತರಿಗೆ ದೊಡ್ಡಮಟ್ಟದ ನಷ್ಟ ಉಂಟಾಗುತಿದ್ದು, ದೊಡ್ಡ ದೊಡ್ಡ ರೈಸ್‌ಮಿಲ್ ಮಾಲಕರು, ದಲ್ಲಾಳಿಗಳು ಹಾಗೂ ಮದ್ಯವರ್ತಿಗಳು ಅನಧಿಕೃತವಾಗಿ, ಯಾವುದೇ ಶ್ರಮ ಪಡದೇ ಕುಳಿತಲ್ಲೇ ದೊಡ್ಡ ಪ್ರಮಾಣದ ಲಾಭ ಮಾಡಿಕೊಳ್ಳುತಿದ್ದಾರೆ. ಈ ಮೂಲಕ ಜಿಲ್ಲೆಯ ರೈತರು ರೈಸ್‌ಮಿಲ್ ಮಾಲಕರಿಂದ ತೀವ್ರ ಶೋಷಣೆಗೆ ಒಳಗಾಗುತ್ತಿದ್ದಾರೆ ಎಂದವರು ಆರೋಪಿಸಿದರು.
ಹಿಂದೆಲ್ಲಾ ಪ್ರತಿ ಊರುಗಳಲ್ಲಿ ಸಣ್ಣ ಸಣ್ಣ ರೈಸ್‌ಮಿಲ್‌ಗಳಿದ್ದು ರೈತರಿಗೆ ಅನುಕೂಲವಾಗುತಿದ್ದರೆ, ಇಂದು ಕೆಲವೇ ಕೆಲವು ದೊಡ್ಡ ದೊಡ್ಡ ರೈಸ್‌ಮಿಲ್‌ಗಳು ಮಾತ್ರವಿದ್ದು, ಇಲ್ಲಿ ನಿರಂತರವಾಗಿ ರೈತರು ಮೋಸ, ವಂಚನೆ ಹಾಗೂ ಶೋಷಣೆಗೆ ಗುರಿಯಾಗುತಿದ್ದಾರೆ ಎಂದರು.
ಈ ಬಗ್ಗೆ ವಂಚನೆಗೊಳಗಾದ ಕಾರ್ಕಳ ತಾಲೂಕಿನ ರೈತ ಸಂಘದವರು ಕೆಆರ್‌ಎಸ್ ಪಕ್ಷಕ್ಕೆ ದೂರು ನೀಡಿದ್ದು, ನಾವು ಜಿಲ್ಲೆಯಾದ್ಯಂತ ಈ ಬಗ್ಗೆ ಪರಿಶೀಲನೆ ನಡೆಸಿದಾಗ, ಇಡೀ ಜಿಲ್ಲೆಯಲ್ಲಿ ಇದೇ ರೀತಿ ರೈತರಿಗೆ ಮೋಸ ನಡೆಯುತ್ತಿರುವುದು ಮನದಟ್ಟಾಗಿದೆ. ಈ ಬಗ್ಗೆ ತಮ್ಮ ಪಕ್ಷ ಈಗಾಗಲೇ ಎಲ್ಲವನ್ನೂ ವಿವರಿಸಿ ಉಡುಪಿ ಜಿಲ್ಲಾಧಿಕಾರಿ, ಕೃಷಿ ಇಲಾಖೆಯ ಜಂಟಿ ನಿರ್ದೇಶಕರಿಗೆ ಮನವಿ ಅರ್ಪಿಸಿದ್ದು, ಜಿಲ್ಲೆಯ ರೈತರನ್ನು ರೈಸ್ ಮಿಲ್ ಮಾಲಕರ ವಂಚನೆ, ಮೋಸ ಹಾಗೂ ಶೋಷಣೆಯಿಂದ ರಕ್ಷಿಸಿ ಅವರಿಗೆ ನ್ಯಾಯ ದೊರಕಿಸಿಕೊಡಬೇಕು. ಅವರ ಶ್ರಮಕ್ಕೆ ತಕ್ಕ ಪ್ರತಿಫಲ ದೊರೆಯುವಂತೆ ನೋಡಿಕೊಳ್ಳಬೇಕು ಎಂದು ಮನವಿ ಮಾಡಿದ್ದೇವೆ ಎಂದರು.
ಈ ನಿಟ್ಟಿನಲ್ಲಿ ಕೇಂದ್ರ ಸರಕಾರ ಹಾಗೂ ರಾಜ್ಯ ಸರಕಾರಗಳು ರೈತ ಬೆಳೆದ ಭತ್ತವನ್ನು ಸೂಕ್ತ ಬೆಂಬಲ ಬೆಲೆ ನೀಡಿ ಸರಿಯಾದ ಸಮಯದಲ್ಲಿ ಖರೀದಿಸುವಂತೆ ನೋಡಿಕೊಳ್ಳಬೇಕು. ಎಪಿಎಂಸಿ ಮೂಲಕ ಬೆಂಬಲ ಬೆಲೆಯಲ್ಲಿ ರೈತರಿಂದ ಖರೀದಿಸಲು ಈಗ ಸೂಕ್ತ ವ್ಯವಸ್ಥೆಗಳಿಲ್ಲ. ಅಕ್ಟೋಬರ್- ನವೆಂಬರ್ ತಿಂಗಳಲ್ಲಿ ಬೆಳೆ ಕಟಾವು ಮಾಡುವ ರೈತ, ಅನಿವಾರ್ಯವಾಗಿ ರೈಸ್‌ಮಿಲ್‌ಗಳಿಗೆ ಭತ್ತವನ್ನು ಮಾರಾಟ ಮಾಡಬೇಕಾದ ಸ್ಥಿತಿ ಈಗ ಇದೆ ಎಂದವರು ವಿವರಿಸಿದರು.
ಸರಕಾರಗಳು ಅಕ್ಟೋಬರ್‌ನಲ್ಲೇ ಬೆಂಬಲಬೆಲೆ ಘೋಷಿಸಿ ಖರೀದಿಗೆ ವ್ಯವಸ್ಥೆ ಮಾಡಿದರೆ, ರೈತರು ಶೋಷಣೆಗೊಳಗಾಗುವುದು ತಪ್ಪುತ್ತದೆ. ಈಗ ನವೆಂಬರ್ ಕೊನೆಯಲ್ಲಿ ಎಪಿಎಂಸಿ ಖರೀದಿಗೆ ಮುಂದಾಗುತ್ತದೆ. ಆದರೆ ಕಟಾವಾದ ಭತ್ತವನ್ನು ಅಷ್ಟು ಸಮಯ ಶೇಖರಿಸಿಟ್ಟುಕೊಳ್ಳುವ ವ್ಯವಸ್ಥೆ ರೈತರಲ್ಲಿಲ್ಲದ ಕಾರಣ ಅವರು ರೈಸ್‌ಮಿಲ್‌ಗಳಿಗೆ ನೇರವಾಗಿ ಭತ್ತವನ್ನು ಮಾರಾಟ ಮಾಡುತಿದ್ದಾರೆ. ವಿವಿಧ ನೆಪದಲ್ಲಿ 10 ಕ್ವಿಂಟಾಲ್ ಭತ್ತ ನೀಡುವ ರೈತನಿಗೆ ಮರಳಿ ಸಿಗುವುದು 5 ಕ್ವಿಂಟಾಲ್ ಅಕ್ಕಿ ಮಾತ್ರ ಎಂದು ರಘುಪತಿ ಭಟ್ ತಿಳಿಸಿದರು.
ಕರಾವಳಿಯನ್ನು ಹೊರತು ಪಡಿಸಿ ರಾಜ್ಯದ ಉಳಿದೆಡೆ ಇಂಥ ಮೋಸ ನಡೆಯುತ್ತಿಲ್ಲ. ಈ ಬಗ್ಗೆ ಹಲವು ಬಾರಿ ಸರಕಾರಕ್ಕೆ ಮನವಿ ಮಾಡಿದರೂ ಯಾವುದೇ ಕ್ರಮ ಕೈಗೊಂಡಿಲ್ಲ ಎಂದ ಅವರು, ರೈಸ್‌ಮಿಲ್‌ಗಳ ಕಾನೂನುಬಾಹಿರ ಮೋಸದ ದಂಧೆಗೆ ಕಡಿವಾಣ ಹಾಕಬೇಕು. ಎಪಿಎಂಸಿ ಮೂಲಕ ರೈತರ ಭತ್ತದ ಖರೀದಿಗೆ ಸೂಕ್ತ ವ್ಯವಸ್ಥೆಯನ್ನು ಕೂಡಲೇ ಮಾಡಬೇಕು. ರೈತರಿಗೆ ಈವರೆಗೆ ಆಗಿರುವ ನಷ್ಟವನ್ನು ಮರುಪಾವತಿಸಲು ಆದೇಶ ಹೊರಡಿಸಬೇಕೆಂದು ಜಿಲ್ಲಾಧಿಕಾರಿ ಹಾಗೂ ಕೃಷಿ ಜಂಟಿ ನಿರ್ದೇಶಕರಿಗೆ ಮನವಿ ಮಾಡಿದ್ದೇವೆ ಎಂದರು.
ರೈತರ ಆದಾಯವನ್ನು ಡಬಲ್ ಮಾಡುವ ಉದ್ದೇಶದಿಂದ ಅಧಿಕಾರಕ್ಕೆ ಬಂದ ಕೇಂದ್ರ ಸರಕಾರವಾಗಲೀ, ರಾಜ್ಯ ಸರಕಾರವಾಗಲೀ ರೈತರ ಆದಾಯವನ್ನು ಹಗಲು ದರೋಡೆ ಮೂಲಕ ಕೊಳ್ಳೆ ಹೊಡೆಯುತ್ತಿರುವ ಮಿಲ್‌ಗಳ ವಿರುದ್ಧ ಯಾವುದೇ ಕ್ರಮಕ್ಕೆ ಮುಂದಾಗದಿರುವುದು ಖಂಡನೀಯ. ಈಗಲೂ ಕ್ರಮಕೈಗೊಳ್ಳದಿದ್ದರೆ ರೈತರೊಂದಿಗೆ ಸೇರಿ ಹೋರಾಟದ ಹಾದಿ ಹಿಡಿಯುತ್ತೇವೆ ಎಂದವರು ಎಚ್ಚರಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಪಕ್ಷದ ಜಿಲ್ಲಾಧ್ಯಕ್ಷ ರಾಜೇಶ್ ಕೆ.ವಿ., ಕೃಷಿ ವಿಭಾಗದ ಸಂಚಾಲಕ ನಿರುಪಾದಿ ಗೋಮಿಸಿ, ಕಾರ್ಯದಶಿ ಆರತಿ, ಸಂತೋಷ್, ರವಿಕುಮಾರ್, ಶ್ರೀನಿವಾಸ ಸಾಲ್ಯಾನ್ ಮುಂತಾದವರು ಉಪಸ್ಥಿತರಿದ್ದರು.
ಅಕ್ಕಿ ನೀಡುವಾಗಲೂ ಮಿಲ್‌ಗಳಿಂದ ಮೋಸ: ಸುಕೇಶ್ ಜೈನ್
ತಾವು ಬೆಳೆದ ಭತ್ತವನ್ನು ರೈಸ್‌ಮಿಲ್‌ಗೆ ಮಾರಾಟ ಮಾಡುವಾಗ ಮಿಲ್‌ನವರು ಭತ್ತಕ್ಕೆ ಒಂದು ದರ ನಿಗದಿ ಮಾಡಿದರೆ, ಭತ್ತದ ಬದಲು ಅಕ್ಕಿ ಕೇಳಿದರೆ, ಮಾರುಕಟ್ಟೆಯಲ್ಲಿರುವ ದರವನ್ನು ವಸೂಲಿ ಮಾಡುವುದಲ್ಲದೇ, ರೈತ ನೀಡಿದ ಭತ್ತದ ಅಕ್ಕಿ ನೀಡದೇ, ಕಳಪೆ ಗುಣಮಟ್ಟದ ಅಕ್ಕಿಯನ್ನು ತಾವೇ ನಿಗದಿ ಪಡಿಸಿದ ದರಕ್ಕೆ ನೀಡುತ್ತಾರೆ ಎಂದು ರೆಂಜಾಳದ ಕೃಷಿ ಕಿಸಾನ್ ರಕ್ಷಣಾ ಸಂಘದ ಅಧ್ಯಕ್ಷ ಸುಕೀರ್ತಿ ಜೈನ್ ಆರೋಪಿಸಿದರು.
ರೈತರಿಗೆ ಭತ್ತದ ದರವನ್ನು ಕೆಜಿಗೆ 26 ರೂ. ಎಂದಾದರೆ ಅದೇ ದರ ನೀಡಿ ಪಡೆದುಕೊಂಡು, ಅಕ್ಕಿಯನ್ನು ಈಗಿನ ಮಾರುಕಟ್ಟೆ ದರ ಅಂದರೆ 55 ರೂ.ನಲ್ಲಿ ಕೊಡುತ್ತಾರೆ. ರೈತ ಒಂದು ಕ್ವಿಂಟಾಲ್ ಭತ್ತ ನೀಡಿದರೆ ಮಿಲ್‌ನವರು ಶೇಕಡಾವಾರು ಪರಿಶೀಲನೆ ಮಾಡಿ ಕ್ವಿಂಟಾಲ್‌ಗೆ ಶೇ.72ರಷ್ಟು ನೀಡಬೇಕು. ಆದರೆ ಇವರು ಶೇ.50ರಷ್ಟು ಮಾತ್ರ ನೀಡುತ್ತಾರೆ. ಜೊತೆಗೆ ಭತ್ತದ ತೌಡು, ಉಮಿಯನ್ನು ರೈತರಿಗೆ ನೀಡುವುದಿಲ್ಲ. ನೀಡುವ ಭತ್ತದಲ್ಲಿ ವಿವಿಧ ಕಾರಣಗಳಿಗೆ ಕಡಿತ ಮಾಡುತ್ತಾರೆ. ಇದರೊಂದಿಗೆ ರೈತ ಗದ್ದೆಯಿಂದ ವಾಹನದಲ್ಲಿ ಮಿಲ್‌ಗೆ ಸಾಗಿಸುವ ವೆಚ್ಚವನ್ನು ತಾನೇ ಭರಿಸಬೇಕಾಗಿದೆ. ಹೀಗಾಗಿ ಜಿಲ್ಲೆಯ ರೈತ ಈಗಲೂ ಎಲ್ಲಾ ವಿಧದದ ಶೋಷಣೆಗೆ ಗುರಿಯಾ ಗುತಿದ್ದಾನೆ ಎಂದು ಜೈನ್ ಆರೋಪಿಸಿದರು.