ಎಂಬಿಕೆ- ಎಲ್‌ಸಿಆರ್‌ಪಿಗಳ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಧರಣಿ
ಉಡುಪಿ : ರಾಷ್ಟ್ರೀಯ ಗ್ರಾಮೀಣ ಜೀವನೋಪಾಯ ಅಭಿಯಾನದ ಅಡಿಯಲ್ಲಿ ಕರ್ನಾಟಕ ರಾಜ್ಯ ಗ್ರಾಮೀಣ ಜೀವ ನೋಪಾಯ ಸಂವರ್ಧನ ಸಂಸ್ಥೆ ‘ಸಂಜೀವಿನಿ’ಯಲ್ಲಿ ಕಾರ್ಯನಿರ್ವಹಿಸುತ್ತಿರುವ ಮುಖ್ಯ ಪುಸ್ತಕ ಬರಹಗಾರರು (ಎಂಬಿಕೆ) ಮತ್ತು ಸ್ಥಳೀಯ ಸಮುದಾಯ ಸಂಪನ್ಮೂಲ ವ್ಯಕ್ತಿ(ಎಲ್‌ಸಿಆರ್‌ಪಿ) ಗಳ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಸೋಮವಾರ ಉಡುಪಿ ಜಿಲ್ಲಾಧಿಕಾರಿ ಕಚೇರಿ ಎದುರು ಧರಣಿ ಹಮ್ಮಿಕೊಳ್ಳಲಾಗಿತ್ತು.
ಉಡುಪಿ ಜಿಲ್ಲಾ ಗ್ರಾಪಂ ಮಟ್ಟದ ಎಂಬಿಕೆ ಮತ್ತು ಎಲ್‌ಸಿಆರ್‌ಪಿ ಮಹಾ ಒಕ್ಕೂಟದ ನೇತೃತ್ವದಲ್ಲಿ ನಡೆದ ಧರಣಿ ಸ್ಥಳಕ್ಕೆ ಆಗಮಿಸಿದ ಕಾರ್ಮಿಕ ಸಚಿವ ಸಂತೋಷ್ ಲಾಡ್, ಧರಣಿ ನಿರತರಿಂದ ಅಹವಾಲು ಸ್ವೀಕರಿಸಿ ಸೂಕ್ತ ಕ್ರಮ ತೆಗೆದುಕೊಳ್ಳಲಾಗುವುದು. ಈ ಬಗ್ಗೆ ಬೆಂಗಳೂರಿಗೆ ಹೋದ ತತ್‌ಕ್ಷಣ ಮುಖ್ಯ ಮಂತ್ರಿಗಳೊಂದಿಗೆ ಚರ್ಚಿಸಿ ಸೂಕ್ತ ಕ್ರಮ ತೆಗೆದು ಕೊಳ್ಳುವ ಬಗ್ಗೆ ಭರವಸೆ ನೀಡಿದರು.
ಹುದ್ದೆಯನ್ನು ಖಾಯಂಗೊಳಿಸಿ ೩ವರ್ಷದ ನಂತರ ಸರಕಾರವೇ ವೇತನ ಭರಿಸಬೇಕು. ಎಂಬಿಕೆಗಳಿಗೆ 20,000 ರೂ. ಮತ್ತು ಎಲ್‌ಸಿಆರ್‌ಪಿಗಳಿಗೆ 15 ಸಾವಿರ ರೂ. ವೇತನವನ್ನು ಪ್ರಯಾಣ ಭತ್ಯೆ ಜೊತೆ ನೀಡಬೇಕು. ಇಎಸ್‌ಐ ಮತ್ತು ಪಿಎಫ್ ಸೌಲಭ್ಯವನ್ನು ಒದಗಿಸಬೇಕು. ಸಮವಸ್ತ್ರ ಹಾಗೂ ಗುರುತಿನ ಚೀಟಿಯನ್ನು ನೀಡಬೇಕು. ಇಲಾಖೆ ಕೆಲಸ ಬಿಟ್ಟು ಬೇರೆ ಇಲಾಖೆಯ ಕೆಲಸ ನೀಡಬಾರದು. ಒಕ್ಕೂಟದ ಕಚೇರಿಗೆ ಕಂಪ್ಯೂಟರ್, ಪ್ರಿಂಟರ್ ಮತ್ತು ಪ್ರತಿ ಗ್ರಾಪಂಗಳಿಗೆ ಒಂದು ಟ್ಯಾಬ್ ಒದಗಿಸಬೇಕೆಂದು ಧರಣಿ ನಿರತರು ಒತ್ತಾಯಿಸಿ ದರು.
ಸಚಿವರ ಭರವಸೆಯ ಬಳಿಕ ಪ್ರತಿಭಟನೆಯನ್ನು ಕೈಬಿಡಲಾಯಿತು. ಈ ಸಂದರ್ಭದಲ್ಲಿ ವಿಧಾನ ಪರಿಷತ್ ಸದಸ್ಯ ಮಂಜುನಾಥ್ ಭಂಡಾರಿ, ಮಹಾ ಒಕ್ಕೂಟದ ಕುಂದಾಪುರ ತಾಲೂಕು ಕಾರ್ಯದರ್ಶಿ ಸುಚಿತ್ರಾ, ಕೋಶಾಧಿಕಾರಿ ಪ್ರಮೀಳಾ, ಹೆಬ್ರಿ ತಾಲೂಕು ಅಧ್ಯಕ್ಷೆ ಪಿ.ಸುಜಾತ, ಉಡುಪಿ ತಾಲೂಕು ಅಧ್ಯಕ್ಷೆ ಸುಜಾತ, ಸುಶೀಲಾ, ರವಿಕಲಾ, ಉಷಾ ಮೊದಲಾದವರು ಉಪಸ್ಥಿತರಿದ್ದರು.