ಭ್ರಷ್ಟಾಚಾರ ಆರೋಪ: ಡಿಎಚ್‌ಓ ವಿರುದ್ಧ ಶಿಸ್ತು ಕ್ರಮಕ್ಕೆ ಶಾಸಕ ಯಶ್‌ಪಾಲ್ ಸುವರ್ಣ ಆಗ್ರಹ
ಯಶ್‌ಪಾಲ್ ಸುವರ್ಣ
ಉಡುಪಿ: ಉಡುಪಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿಯಾಗಿ ಕಳೆದ 4 ತಿಂಗಳಿನಿಂದ ಕರ್ತವ್ಯ ನಿರ್ವಹಿಸುತ್ತಿರುವ ಬಸವರಾಜ ಜಿ.ಹುಬ್ಬಳ್ಳಿ ಕಾರ್ಯ ವೈಖರಿಯ ಬಗ್ಗೆ ಹಲವಾರು ದೂರುಗಳು ಕೇಳಿ ಬರುತ್ತಿರುವ ಹಿನ್ನೆಲೆಯಲ್ಲಿ ತಕ್ಷಣ ಅಧಿಕಾರಿಯ ವಿರುದ್ಧ ತನಿಖೆ ನಡೆಸಿ ಶಿಸ್ತು ಕ್ರಮ ವಹಿಸಬೇಕು ಎಂದು ಉಡುಪಿ ಶಾಸಕ ಯಶ್ ಪಾಲ್ ಸುವರ್ಣ ಜಿಲ್ಲಾಧಿಕಾರಿಗಳಿಗೆ ಪತ್ರ ಬರೆದು ಆಗ್ರಹಿಸಿದ್ದಾರೆ.
ಅಧೀನ ವೈದ್ಯರು, ವೈದ್ಯಾಧಿಕಾರಿಗಳು, ಶುಶ್ರೂಷಕರು ಹಾಗೂ ಸಿಬ್ಬಂದಿಗಳ ಸೇವಾ ವಿಷಯದಲ್ಲಿ ವ್ಯಾಪಕ ಭ್ರಷ್ಟಾಚಾರವೆಸಗುತ್ತಿರುವ ಬಗ್ಗೆ ಮೌಖಿಕ ದೂರುಗಳು ಬರುತ್ತಿವೆ. ಬಿಲ್ ಪಾವತಿ, ಟೆಂಡರ್ ಮತ್ತಿತರ ವಿಷಯಗಳಲ್ಲೂ ನಿಯಮ ಮೀರಿ ಭ್ರಷ್ಟಾಚಾರ ಎಸಗುತ್ತಿರುವ ಬಗ್ಗೆ ಆರೋಪಗಳಿವೆ. ಹಿರಿಯ ವೈದ್ಯ ಡಾ.ಪಿ.ವಿ.ಭಂಡಾರಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿಗಳ ಭ್ರಷ್ಟಾಚಾರಗಳ ಬಗ್ಗೆ ಗಮನಕ್ಕೆ ತಂದು, ಅವರ ವಿರುದ್ಧ ತುರ್ತಾಗಿ ಕ್ರಮ ವಹಿಸುವಂತೆ ಕೋರಿದ್ದಾರೆ.
ಸಿಬ್ಬಂದಿಗಳ ವರ್ಗಾವಣೆಗೆ ಅರ್ಹರ ಪಟ್ಟಿ ತಯಾರಿಸುವಲ್ಲೂ ಭ್ರಷ್ಟಾಚಾರವೆಸಗಿರುವ ಬಗ್ಗೆ ಆರೋಪ ಗಳಿವೆ. ಸ್ಥಳೀಯವಾಗಿ ವಿಚಾರಿಸಲಾಗಿ ಮೇಲ್ನೋಟಕ್ಕೆ ಇವರ ಮೇಲಿರುವ ಆರೋಪಗಳು ಸತ್ಯವಾಗಿ ರುವಂತೆ ಕಂಡು ಬರುತ್ತಿದೆ. ತಕ್ಷಣ ಈ ಅಧಿಕಾರಿಯ ವರ್ಗಾವಣೆಗೆ ಕ್ರಮ ಕೈಗೊಂಡು, ಇವರ ಕರ್ತವ್ಯದ ಅವಧಿಯಲ್ಲಿ ಕೈಗೊಂಡ ತೀರ್ಮಾನಗಳು ಮತ್ತು ವಿಲೇಗೊಳಿಸಿದ ಕಡತಗಳ ಬಗ್ಗೆ ತನಿಖೆ ನಡೆಸಿ, ಸೂಕ್ತ ಶಿಸ್ತು ಕ್ರಮಕೈಗೊಳ್ಳುವಂತೆ ಶಾಸಕರು ಪತ್ರ ಬರೆದು ಆಗ್ರಹಿಸಿದ್ದಾರೆ.