ಸೌಕೂರು ಏತ ನೀರಾವರಿ ಯೋಜನೆಯ ರೈತರ ಸುಗ್ಗಿ ಬೆಳೆಗೆ ನೀರು ಒದಗಿಸಲು ಡಿಸಿಎಂಗೆ ಪತ್ರ ಬರೆದ ಎಂಎಲ್ಸಿ ಭಂಡಾರಿ
‘ವಾರ್ತಾಭಾರತಿ’ ವರದಿ ಉಲ್ಲೇಖ
ಕುಂದಾಪುರ, ಡಿ.11: ಕುಂದಾಪುರ ತಾಲೂಕು ಸೌಕೂರು ಏತ ನೀರಾವರಿ ಯೋಜನೆಯಡಿ ರೈತರ ಹಿಂಗಾರು ಋತುವಿನ ಎರಡನೇ ಬೆಳೆಗೆ (ಸುಗ್ಗಿ ಕೃಷಿ) ನೀರು ಒದಗಿಸುವ ಬಗ್ಗೆ ರಾಜ್ಯ ನೀರಾವರಿ ಖಾತೆ ಸಚಿವರೂ ಆಗಿರುವ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರಿಗೆ ವಿಧಾನ ಪರಿಷತ್ ಸದಸ್ಯ ಮಂಜುನಾಥ ಭಂಡಾರಿ ಪತ್ರಬರೆದಿದ್ದಾರೆ.
ಕಳೆದ ಸುಮಾರು ಒಂದೂವರೆ ವರ್ಷದಿಂದ ಅಂದಾಜು ಎರಡು ಕೋಟಿ ರೂಪಾಯಿಯಷ್ಟು ವಿದ್ಯುತ್ ಬಿಲ್ ಅನ್ನು ಕರ್ನಾಟಕ ನೀರಾವರಿ ನಿಗಮ ಪಾವತಿಸದೇ ಬಾಕಿ ಉಳಿಸಿಕೊಂಡಿರುವ ಹಿನ್ನೆಲೆಯಲ್ಲಿ ಮೆಸ್ಕಾಂ ಇದೀಗ ವಿದ್ಯುತ್ ಸಂಪರ್ಕದ ಕಡಿತಕ್ಕೆ ಮುಂದಾಗಿರುವುದು ಆ ಭಾಗದ ರೈತರ ಸಂಕಷ್ಟಕ್ಕೆ ಕಾರಣವಾಗಿದೆ. ಇದರಿಂದ ರೈತರ ಗದ್ದೆಗೆ ನೀರು ಇಲ್ಲದೇ ಕೃಷಿ ಕಾರ್ಯಗಳೆಲ್ಲವೂ ಸ್ಥಗಿತಗೊಂಡಿದ್ದು, ಈ ಬಗ್ಗೆ ‘ವಾರ್ತಾಭಾರತಿ’ ಇಂದು ವಿಸ್ತೃತ ವರದಿಯೊಂದಿಗೆ ಜನಪ್ರತಿನಿಧಿಗಳ ಹಾಗೂ ಅಧಿಕಾರಿಗಳ ಗಮನ ಸೆಳೆದಿದೆ.
ಪತ್ರಿಕೆಯ ವರದಿಯನ್ನು ಉಲ್ಲೇಖಿಸಿ ಡಿಸಿಎಂಗೆ ಪತ್ರ ಬರೆದಿರುವ ಭಂಡಾರಿ, ಅದರಲ್ಲಿ ವರದಿಯ ಪ್ರಮುಖ ಅಂಶಗಳತ್ತ ಅವರ ಗಮನ ಸೆಳೆದಿದ್ದಾರೆ. ‘ಹಲವಾರು ವರ್ಷಗಳಿಂದ ಕೃಷಿ ಕಾರ್ಯ ಮಾಡಲು ಪರಿತಪಿಸುತ್ತಿದ್ದ ರೈತರಿಗೆ ಸೌಕೂರು ಏತ ನೀರಾವರಿ ಯೋಜನೆ ನೆರವಾಗಿದ್ದು, ತಾಂತ್ರಿಕ ವ್ಯವಸ್ಥೆಗಳ ಜೊತೆಗೆ ಕೆರೆ-ಕಟ್ಟೆಗಳು, ನೈಸರ್ಗಿಕ ಕಾಲುವೆ-ತೋಡುಗಳ ಮೂಲಕ ಹರಿಯುವ ನೀರು ರೈತರ ಬಾಳು ಹಸನು ಮಾಡುವ ನಿರೀಕ್ಷೆಯಲ್ಲಿದ್ದವರಿಗೆ ಈ ಬಾರಿ ಬರಸಿಡಿಲು ಬಡಿದಂತಾಗಿದೆ’.
ಸುಗ್ಗಿ ಕೃಷಿ ಕಾರ್ಯಕ್ಕೆ ಪ್ರಸಕ್ತ ಸಮಯವೆಂದು ಗದ್ದೆಗಿಳಿದವರಿಗೆ ನೀರು ಮರೀಚಿಕೆಯಾಗಿದೆ. ಕೆಲವಷ್ಟು ಕಡೆ ಮಳೆಗಾಲದ ಒಂದಿಷ್ಟು ನೀರು ನಿಂತಿದ್ದರೂ ತಿಂಗಳಾಂತ್ಯಕ್ಕೆ ಜಲಮೂಲ ಬರಿದಾಗುವ ಭೀತಿ ಎದುರಾಗಿದೆ. ಬಹಳಷ್ಟು ಕಡೆ ಕೃಷಿ ತಯಾರಿ ಮಾಡಿ ಭೂಮಿಗೆ ಹಾಕಿದ ಗೊಬ್ಬರ ಹಾಗೆಯೇ ಇದ್ದು ನೀರು ಮಾತ್ರ ಬಂದಿಲ್ಲ. ಒಂದೊಮ್ಮೆ ಬಿತ್ತನೆ ಮಾಡಿದರೆ ನೀರಿಲ್ಲದೆ ಎಲ್ಲವೂ ನಾಶವಾಗುತ್ತದೆ ಎಂಬುದು ಕೃಷಿಕರ ಅಭಿಪ್ರಾಯವಾಗಿದೆ. ಈ ಬಗ್ಗೆ ಮುಂದಿನ ದಿನದಲ್ಲಿ ಪ್ರತಿಭಟನೆ ಹಮ್ಮಿಕೊಳ್ಳುವುದಾಗಿ ರೈತರು ತಿಳಿಸಿದ್ದಾರೆ.
ಆದ್ದರಿಂದ ರೈತರ ಹಿತದೃಷ್ಟಿಯಿಂದ ಮೆಸ್ಕಾಂಗೆ ಪಾವತಿಸಬೇಕಾದ ಬಾಕಿ ವಿದ್ಯುತ್ ಬಿಲ್ ಮೊತ್ತವನ್ನು ನೀರಾವರಿ ನಿಗಮದ ಮೂಲಕ ಪಾವತಿಸಲು ಹಾಗೂ ಸೌಕೂರು ಏತನೀರಾವರಿ ಯೋಜನೆಯ ಮೂಲಕ ರೈತರ ಹಿಂಗಾರು ಬೆಳೆಗೆ ಆದಷ್ಟು ಬೇಗ ನೀರು ಒದಗಿಸಲು ಸಂಬಂಧಪಟ್ಟ ಅಧಿಕಾರಿಗಳಿಗೆ ಆದೇಶಿಸಬೇಕಾಗಿ ಮಂಜುನಾಥ ಭಂಡಾರಿ ಅವರು ಉಪಮುಖ್ಯಮಂತ್ರಿಗಳಿಗೆ ಸವಿಸ್ತಾರವಾಗಿ ಬರೆದ ಪತ್ರದಲ್ಲಿ ಕೋರಿದ್ದಾರೆ.
‘ವಾರ್ತಾಭಾರತಿ’ ವರದಿ ಉಲ್ಲೇಖ :
‘ಸೌಕೂರು ಏತ ನೀರಾವರಿ ಯೋಜನೆ, ಮೆಸ್ಕಾಂ ಬಿಲ್ ಬಾಕಿಯಿಂದ ಪವರ್ ಕಟ್. ರೈತರಿಗೆ ಊಟಕ್ಕಿಲ್ಲದ ಉಪ್ಪಿನಕಾಯಿ! ನೀರು ಹರಿಸದ ಕಾರಣ ರೈತರು ಕಂಗಾಲು ಹಿಂಗಾರು ಕೃಷಿಗೆ ಸಜ್ಜಾದವರಿಗೆ ಆತಂಕ’ ಎಂಬ ಶೀರ್ಷಿಕೆಯಡಿ ಡಿ.11ರಂದು ವಾರ್ತಾ ಭಾರತಿ ದಿನಪತ್ರಿಕೆಯಲ್ಲಿ ಸೌಕೂರು ಏತ ನೀರಾವರಿ ಯೋಜನೆಯ ಅವ್ಯವಸ್ಥೆಯ ಕುರಿತಂತೆ ವರದಿಯಾಗಿರುತ್ತದೆ. ಪ್ರತಿಯನ್ನು ಲಗತ್ತಿಸಿರುವುದಾಗಿ ಪತ್ರದಲ್ಲಿ ತಿಳಿಸಿದ್ದಾರೆ.