ಮಲ್ಪೆ- ಕರಾವಳಿ ಜಂಕ್ಷನ್ ರಸ್ತೆ ದುರಸ್ಥಿಗೆ ಸಂಸದ ಕೋಟ ಸೂಚನೆ
ಉಡುಪಿ, ಆ.7: ರಾಷ್ಟ್ರೀಯ ಹೆದ್ದಾರಿ 169ಎಗೆ ಸಂಬಂಧಿಸಿದಂತೆ, ಮಲ್ಪೆಯಿಂದ ಕರಾವಳಿ ಜಂಕ್ಷನ್‌ವರೆಗೆ ಚತುಷ್ಪಥ ರಸ್ತೆ ಕಾಮಗಾರಿ ಭರದಿಂದ ನಡೆಯುತ್ತಿದ್ದು, ಮಳೆಗಾಲದಲ್ಲಿ ಸುರಿದ ಭಾರೀ ಮಳೆಯಿಂದಾಗಿ ರಸ್ತೆಯಲ್ಲಿ ಅಲ್ಲಲ್ಲಿ ಹೊಂಡಗುಂಡಿಗಳು ಕಾಣಿಸಿಕೊಂಡಿವೆ. ಇದರಿಂದ ಸಾರ್ವಜನಿಕರಿಗೆ ಹಾಗೂ ವಾಹನ ಚಾಲಕರಿಗೆ ಸುಗಮ ಸಂಚಾರಕ್ಕೆ ಅಡಚಣೆ ಉಂಟಾಗಿದ್ದು, ಇದನ್ನು ಕೂಡಲೇ ಸರಿಪಡಿಸಿ ಸುಗಮ ರಸ್ತೆ ಸಂಚಾರಕ್ಕೆ ಅನುವು ಮಾಡಿ ಕೊಡುವಂತೆ ಸಂಬಂಧಪಟ್ಟ ಇಲಾಖಾ ಅಧಿಕಾರಿಗಳಿಗೆ ಸಂಸದ ಕೋಟ ಶ್ರೀನಿವಾಸ ಪೂಜಾರಿ ಸೂಚಿಸಿದ್ದಾರೆ.
ಮುಖ್ಯವಾಗಿ ಕರಾವಳಿ ಜಂಕ್ಷನ್‌ನಿಂದ ಪ್ರಾರಂಭವಾಗಿ ಪಂದುಬೆಟ್ಟು ಮತ್ತು ಕಲ್ಮಾಡಿವರೆಗಿನ ರಸ್ತೆಯು ಮಳೆಗಾಲದಲ್ಲಿ ಸುರಿದ ತೀವ್ರ ಮಳೆಯಿಂದ ತೀರಾ ಹದಗೆಟ್ಟಿದ್ದು, ಸಂಸದ ಸೂಚನೆಯಂತೆ ಈ ರಸ್ತೆಯನ್ನು ತ್ವರಿತ ಕಾಮಗಾರಿ ಮೂಲಕ ಸರಿಪಡಿಸಲಾಯಿತು.
ಕರಾವಳಿ ಜಂಕ್ಷನ್‌ನಿಂದ ಮಲ್ಪೆವರೆಗಿನ ಹೊಂಡಗುಂಡಿಗಳನ್ನು ಮುಚ್ಚಿಸುವ ಸಂದರ್ಭದಲ್ಲಿ ನಗರಸಭೆಯ ಸದಸ್ಯರಾದ ಸುಂದರ್ ಕಲ್ಮಾಡಿ ಮತ್ತು ಕಾರ್ಯಪಾಲಕ ಅಭಿಯಂತರರಾದ ಚಂದ್ರಶೇಖರ್ ಉಪಸ್ಥಿತರಿದ್ದರು.
ಅಲ್ಲದೇ, ಭೂಸ್ವಾಧೀನಗೊಂಡ ಸರಿಸುಮಾರು 60 ಜನ ಭೂಮಾಲಕರಿಗೆ ಸುಮಾರು 10.96 ಕೋಟಿ ರೂ.ಗಳನ್ನು ಅವರವರ ಖಾತೆಗೆ ಜಮೆ ಮಾಡಲಾಗಿದೆ ಎಂದು ಸಂಸದರ ಕಚೇರಿ ಪ್ರಕಟಣೆ ತಿಳಿಸಿದೆ.
ಜಿಲ್ಲೆಯ ರಾಷ್ಟ್ರೀಯ ಹೆದ್ದಾರಿಯ ಎಲ್ಲಾ ಕಾಮಗಾರಿಗಳ ಪ್ರಗತಿ ಪರಿಶೀಲನಾ ಸಭೆಯನ್ನು ಜಿಲ್ಲಾಧಿಕಾರಿಗಳ ಸಮ್ಮುಖದಲ್ಲಿ ಸಂಬಂಧಪಟ್ಟ ಎಲ್ಲಾ ಅಧಿಕಾರಿಗಳನ್ನು ಕರೆದು ಆ.16ರಂದು ನಡೆಸಲು ತೀರ್ಮಾನಿಸಲಾಗಿದೆ ಎಂದು ಸಂಸದರು ತಿಳಿಸಿದ್ದಾರೆ.