×
Ad

ಗ್ರಾ.ಪಂ.ಗಳ ಬಲವರ್ಧನೆಗೆ ನರೇಗಾ ಕೊಡುಗೆ ಅಪಾರ: ಲಕ್ಷ್ಮಿ ಹೆಬ್ಬಾಳ್ಕರ್

Update: 2023-08-14 22:05 IST

ಕಾರ್ಕಳ : ಹಳ್ಳಿಗಳು ಸುಧಾರಣೆ ಆಗಬೇಕೆಂದರೆ ಮೊದಲು ಗ್ರಾಮ ಪಂಚಾಯತಿಗಳು ಸುಧಾರಣೆಯಾಗಬೇಕು ಎಂದು ರಾಜ್ಯ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಹಾಗೂ ಉಡುಪಿ ಜಿಲ್ಲಾ ಉಸ್ತುವಾರಿ ಸಚಿವರಾದ ಲಕ್ಷ್ಮಿ ಹೆಬ್ಬಾಳ್ಕರ್ ಅಭಿಪ್ರಾಯ ಪಟ್ಟಿದ್ದಾರೆ.

ಕಾರ್ಕಳ ತಾಲೂಕಿನ ಮುಡಾರು ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ವಿವಿಧ ಕಾಮಗಾರಿಗಳನ್ನು ಉದ್ಘಾಟಿಸಿದ ಬಳಿಕ ಮಾತನಾಡಿದ ಸಚಿವರು, ಗ್ರಾಮಗಳ ಸುಧಾರಣೆಯ ದೃಷ್ಟಿಯಿಂದಲೇ ಗ್ರಾಮ ಪಂಚಾಯಿತಿ ತರಲಾಗಿದೆ. ಅದಕ್ಕೂ ಮುನ್ನ ಗ್ರಾಮ ಪಂಚಾಯತ್‌ಗಳನ್ನು ಲಘುವಾಗಿ ನೋಡಲಾಗ್ತಿತ್ತು. ಯುಪಿಎ ಸರ್ಕಾರದ ಅವಧಿಯಲ್ಲಿ ನರೇಗಾ ಯೋಜನೆ ಜಾರಿಗೆ ತರುವ ಮೂಲಕ ಗ್ರಾಮ ಪಂಚಾಯತಿಗಳಿಗೆ ಶಕ್ತಿ ತುಂಬಲಾಯಿತು ಎಂದು ತಿಳಿಸಿದರು.

ನರೇಗಾ ಯೋಜನೆ ಜಾರಿಗೆ ಬರದಿದ್ದರೆ, ಗ್ರಾಮ ಪಂಚಾಯಿತಿಗಳು ಕೇವಲ ಮೂರು ಲಕ್ಷ ರೂಪಾಯಿಯಲ್ಲಿ ಕಾರ್ಯ ನಿರ್ವ ಹಿಸಬೇಕಾಗಿತ್ತು. ಅಲ್ಲದೆ, ರಾಜೀವ್ ಗಾಂಧಿ ಸೇವಾಕೇಂದ್ರದಿಂದ ಗ್ರಾಮ ಪಂಚಾಯಿಗಳು ಸ್ವಂತ ಕಟ್ಟಡ ನಿರ್ಮಿಸಿ ಕೊಳ್ಳಲು 25 ಲಕ್ಷ ರೂಪಾಯಿ ಅನುದಾನ ನೀಡಲಾಗ್ತಿದೆ. ಮಹಾತ್ಮ ಗಾಂಧಿ ಉದ್ಯೋಗ ಖಾತ್ರಿ ಯೋಜನೆಯನ್ನು ಗ್ರಾಮ ಪಂಚಾಯತಿಗೆ ನೀಡಲಾಗಿದೆ. ಹೀಗಾಗಿ ಗ್ರಾಮ ಪಂಚಾಯಿಗಳು ಶಕ್ತಿಯುತವಾಗಿ ಬೆಳೆದಿವೆ ಎಂದು ಸಚಿವರು ತಿಳಿಸಿದರು.

ಸಿಕ್ಕ ಅಧಿಕಾರವನ್ನು ಸೂಕ್ತವಾಗಿ ಬಳಸಿಕೊಂಡು, ಕೆಲಸ ಮಾಡುವುದೇ ದೊಡ್ಡ ಸವಾಲು. ಸ್ಥಳೀಯ ಸಮಸ್ಯೆಗಳಿಗೆ ಸೂಕ್ತವಾಗಿ ಸ್ಪಂದಿಸಲು ಗ್ರಾಮ ಪಂಚಾಯತಿ ವೇದಿಕೆಯಾಗಿದೆ ಎಂದು ಲಕ್ಷ್ಮಿ ಹೆಬ್ಬಾಳ್ಕರ್ ನುಡಿದರು.

ಉಡುಪಿ ಜಿಲ್ಲೆ ಉದಯವಾಗಿ ಕೇವಲ 25 ವರ್ಷಗಳಲ್ಲಿ ಉತ್ತಮ ಅಭಿವೃದ್ಧಿ ಕಂಡಿದೆ. ಇಲ್ಲಿಯ ಜನ ಬುದ್ಧಿವಂತರು ಅನ್ನೋ ದಕ್ಕೆ ಇದು ಸಾಕ್ಷಿ. ಜಿಲ್ಲೆಯ ಅಭಿವೃದ್ಧಿಯೇ ನನ್ನ ಗುರಿ, ಇಲ್ಲಿ ಯಾವುದೇ ರಾಜಕೀಯ ಬೇಡ. ಮುಡಾರು ಗ್ರಾಮ ಪಂಚಾಯತಿ ಉತ್ತಮ ಕೆಲಸಗಳನ್ನು ಮಾಡಿದೆ ಎಂದರು.

ಈ ಸಂದರ್ಭದಲ್ಲಿ ಕಾರ್ಕಳ ಶಾಸಕ, ಮಾಜಿ ಸಚಿವ ಸುನೀಲ್ ಕುಮಾರ್, ಜಿಲ್ಲಾಧಿಕಾರಿ ಡಾ.ಕೆ.ವಿದ್ಯಾಕುಮಾರಿ, ಜಿಲ್ಲಾ ಪಂಚಾಯತ್ ಸಿಇಒ ಪ್ರಸನ್ನ, ಉಪವಿಭಾಗಾಧಿಕಾರಿ ರಶ್ಮಿ, ಕಾಂಗ್ರೆಸ್ ನಾಯಕ ಉದಯಕುಮಾರ್ ಶೆಟ್ಟಿ ಮುಂತಾದವರು ಉಪಸ್ಥಿತರಿದ್ದರು. 



Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News