ರಾಷ್ಟ್ರೀಯ ಉದ್ಯೋಗ ಖಾತ್ರಿ ಯೋಜನೆ ಕೊಲ್ಲುವ ಹುನ್ನಾರ: ಸುರೇಶ ಕಲ್ಲಾಗರ
ಕುಂದಾಪುರ, ಜ.5: ಕೇಂದ್ರದ ಮೋದಿ ಸರಕಾರವು ಮಹಾತ್ಮ ಗಾಂಧಿ ರಾಷ್ಟ್ರೀಯ ಉದ್ಯೋಗ ಖಾತ್ರಿ ಯೋಜನೆ ಯಲ್ಲಿರುವ ಗಾಂಧಿಯ ಹೆಸರು ಅಳಿಸಿ ಹಂತ ಹಂತವಾಗಿ ಕೊಲ್ಲುವ ಯೋಚನೆ ಮಾಡಿದೆ. ಅಲ್ಲದೇ ಯೋಜನೆಯನ್ನೇ ದುರ್ಬಲಗೊಳಿಸಿ ಉದ್ಯೋಗ ಕಸಿಯುವ ಹುನ್ನಾರ ನಡೆಸುತ್ತಿದೆ ಎಂದು ಸಿಐಟಿಯು ಜಿಲ್ಲಾ ಉಪಾಧ್ಯಕ್ಷ ಸುರೇಶ ಕಲ್ಲಾಗರ ಆರೋಪಿಸಿದ್ದಾರೆ.
ಕರ್ನಾಟಕ ಪ್ರಾಂತ ಕೃಷಿ ಕೂಲಿಕಾರರ ಸಂಘಟನೆಯ ರಾಜ್ಯ ವ್ಯಾಪಿ ಕಪ್ಪು ಬಾವುಟ ಪ್ರದರ್ಶನ ಕರೆ ಭಾಗವಾಗಿ ಕುಂದಾಪುರ ತಾಲೂಕು ಗುಲ್ವಾಡಿ ಗ್ರಾಮ ಪಂಚಾಯತ್ ಎದುರು ಸೋಮವಾರ ನಡೆದ ಪ್ರತಿಭಟನೆಯಲ್ಲಿ ಅವರು ಮಾತನಾಡುತಿದ್ದರು.
ಕೂಲಿಕಾರರ ಸಂಘಟನೆಯ ಕಾರ್ಯದರ್ಶಿ ನಾಗರತ್ನ ನಾಡ ಮಾತನಾಡಿ, ಕೇಂದ್ರ ಸರ್ಕಾರ ಯೋಜನೆಯ ಹೆಸರನ್ನು ಬದಲಿಯಿಸಿರುವುದು ಮಾತ್ರವಲ್ಲ ತನ್ನ ಅನುದಾನ ಶೇ.90 ನ್ನು ಇಳಿಸಿದೆ. ಇದರಿಂದ ಮುಂದಿನ ದಿನಗಳಲ್ಲಿ ಗ್ರಾಮೀಣ ಪ್ರದೇಶದ ಕೂಲಿಕಾರರಿಗೆ ಉದ್ಯೋಗದ ಅಭದ್ರತೆ ಕಾಡಲಿದೆ ಎಂದು ಹೇಳಿದರು.
ಬೈಂದೂರು ಕಟ್ಟಡ ಕಾರ್ಮಿಕರ ಸಂಘದ ಅಧ್ಯಕ್ಷ ರಾಜೀವ ಪಡುಕೋಣೆ ಮಾತನಾಡಿ, ಕಳೆದ ಹಲವು ವರ್ಷಗಳಿಂದ ಯೋಜನೆಯಲ್ಲಿ ಕೆಲಸ ಮಾಡುವವರಿಗೆ ಉದ್ಯೋಗ ಖಾತ್ರಿಯಾಗಿತ್ತು. ಇನ್ನು ಮುಂದೆ ಕೂಲಿಕಾರರಿಗೆ ಖಾತ್ರಿ ಇಲ್ಲದ ಉದ್ಯೋಗ ಎಂಬಂತಾಗಿದೆ ಎಂದು ದೂರಿದರು.
ಸಿಐಟಿಯು ಜಿಲ್ಲಾ ಮುಖಂಡರಾದ ಎಚ್.ನರಸಿಂಹ, ಕೃಷಿ ಕೂಲಿಕಾರರ ಸಂಘಟನೆಯ ತಾಲ್ಲೂಕು ಅಧ್ಯಕ್ಷ ಜಿ.ಡಿ.ಪಂಜು ಮಾತನಾಡಿದರು. ಪ್ರತಿಭಟನೆಯಲ್ಲಿ ಮುಖಂಡರಾದ ಶೋಭ ನಾಡ, ಅನೂಷ, ಶಾರದಾ ಗುಲ್ವಾಡಿ, ರುಕ್ಕು, ನೇತ್ರಾವತಿ ಗುಲ್ವಾಡಿ ಮೊದಲಾದವರಿದ್ದರು.