ಉಡುಪಿ: ನಾಲ್ವರ ಹತ್ಯೆ ಪ್ರಕರಣ; ಅಂತ್ಯಕ್ರಿಯೆಯಲ್ಲಿ ಸಹಸ್ರಾರು ಮಂದಿ ಭಾಗಿ
Update: 2023-11-13 15:58 IST
ಉಡುಪಿ, ನ.13: ನೇಜಾರು ತೃಪ್ತಿ ಲೇಔಟ್‌ನಲ್ಲಿ ಕೊಲೆಗೀಡಾದ ನಾಲ್ವರ ಅಂತ್ಯಕ್ರಿಯೆಯು ಕೋಡಿಬೆಂಗ್ರೆ ಜುಮಾ ಮಸೀದಿಯಲ್ಲಿ ಇಂದು ಮಧ್ಯಾಹ್ನ ಸಹಸ್ರಾರು ಮಂದಿಯ ಸಮ್ಮುಖದಲ್ಲಿ ನೆರವೇರಿಸಲಾಯಿತು.
ಬೆಳಗ್ಗೆ 11ಗಂಟೆಯಿಂದ ತೃಪ್ತಿ ಲೇಔಟ್‌ನಲ್ಲಿರುವ ಮನೆಯ ಹೊರಗಡೆ ಆಸೀಮ್, ಸಮೀಪದಲ್ಲೇ ಇರುವ ಹಸೀನಾರ ಸಹೋದರ ಮನೆಯ ಆವರಣದಲ್ಲಿ ತಾಯಿ ಮತ್ತು ಇಬ್ಬರು ಹೆಣ್ಣು ಮಕ್ಕಳ ಪ್ರಾರ್ಥಿವ ಶರೀರವನ್ನು ಸಾರ್ವ ಜನಿಕರ ದರ್ಶನಕ್ಕೆ ಇಡಲಾಯಿತು.
ಸಾವಿರಾರು ಸಂಖ್ಯೆಯಲ್ಲಿ ಆಗಮಿಸಿದ ಸರ್ವಧರ್ಮೀಯರು ಅಂತಿಮ ದರ್ಶನ ಪಡೆದರು. ಇದರಲ್ಲಿ ಬಹುತೇಕ ಮಂದಿ ಈ ನಾಲ್ವರ ದಾರುಣ ಸಾವು ಕಂಡು ಕಣ್ಣೀರಿಟ್ಟರು. ಮನೆಮಂದಿಯ ಆಕ್ರಂದನ ಮುಗಿಲು ಮುಟ್ಟುವಂತಿತ್ತು. ಬಳಿಕ 12.15ರ ಸುಮಾರಿಗೆ ನಾಲ್ಕು ಪಾರ್ಥಿವ ಶರೀರಗಳನ್ನು ವಾಹನಗಳಲ್ಲಿ ಕೋಡಿಬೆಂಗ್ರೆ ಮಸೀದಿಗೆ ಕೊಂಡೊಯ್ಯಲಾಯಿತು.