ವಕೀಲರಲ್ಲಿ ಮನುಷ್ಯತ್ವ, ತೃಪ್ತಿ ಅತೀ ಅಗತ್ಯ: ನ್ಯಾ.ರಾಜೇಶ್ ರೈ
ಉಡುಪಿ, ಡಿ.2: ವಕೀಲರಲ್ಲಿ ಮನುಷ್ಯತ್ವ ಹಾಗೂ ತೃಪ್ತಿ ಎಂಬ ಎರಡು ಗುಣಗಳು ಇರಬೇಕಾಗಿರುವುದು ಅತೀ ಅಗತ್ಯ. ವೃತ್ತಿಯಲ್ಲಿ ಮಾನವೀಯತೆ ಎಂಬುದು ಇಲ್ಲದಿದ್ದರೆ ಕೇವಲ ಹಣ ಗಳಿಸುವುದು ಮಾತ್ರವೇ ಮುಖ್ಯ ವಾಗುತ್ತದೆ. ಆದುದರಿಂದ ವಕೀಲರ ಮೂಲಭೂತವಾದ ಈ ಗುಣಗಳನ್ನು ಅಳವಡಿಸಿಕೊಳ್ಳಬೇಕು ಎಂದು ಕರ್ನಾಟಕ ಹೈಕೋರ್ಟ್ ನ್ಯಾಯಮೂರ್ತಿ ರಾಜೇಶ್ ರೈ ಕಲಂಗಲ ಹೇಳಿದ್ದಾರೆ.
ಉಡುಪಿ ವಕೀಲರ ಸಂಘದ ವತಿಯಿಂದ ಶನಿವಾರ ಉಡುಪಿ ನ್ಯಾಯಾಲಯ ಸಂಕೀರ್ಣದ ಆವರಣದಲ್ಲಿ ಆಯೋಜಿಸಲಾದ ವಕೀಲರ ದಿನಾಚರಣೆಯನ್ನು ಉದ್ಘಾಟಿಸಿ, ಡಾ.ರಾಜೇಂದ್ರ ಪ್ರಸಾದ್ ಅವರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿ ಅವರು ಮಾತನಾಡುತಿದ್ದರು.
ಸಮಾಜದಲ್ಲಿ ಬಡವರು ಮತ್ತು ಶ್ರೀಮಂತರು ಇದ್ದಾರೆ. ಬಡವರಿಗೆ ನಾವು ಮನುಷ್ಯತ್ವ ತೋರಿದೆ ಸಮಾನ ನ್ಯಾಯದಾನ ನೀಡಲು ಸಾಧ್ಯವಾಗುತ್ತದೆ. ವೃತ್ತಿಯಲ್ಲಿ ತೃಪ್ತಿ ಇಲ್ಲದಿದ್ದರೆ ಜೀವನ ಸಂತೃಪ್ತಿಯಿಂದ ಕೂಡಿರಲು ಆಗುವುದಿಲ್ಲ. ವಕೀಲರು ಕಾನೂನಿನ ಬಗ್ಗೆ ಪರಿಣಿತರಾಗಿ ವಾದಿಸಿರುವುದರಿಂದ ನ್ಯಾಯಾ ಧೀಶರು ಉತ್ತಮವಾಗಿ ನ್ಯಾಯದಾನ ಮಾಡಲು ಸಾಧ್ಯವಾಗುತ್ತದೆ ಎಂದರು.
ಅನ್ಯಾಯ ಮತ್ತು ಶೋಷಣೆಗೆ ಒಳಪಡುವವರಿಗೆ ನ್ಯಾಯವನ್ನು ದೊರಕಿಸು ವುದು ವಕೀಲರ ಜವಾಬ್ದಾರಿಯಾಗಿದೆ. ವಕೀಲರು ವೃತ್ತಿಪರರಾಗಿರಬೇಕೇ ಹೊರತು ಉದ್ಯಮಿಯಲ್ಲ. ವಾಸ್ತವದ ಪ್ರಜ್ಞೆಯನ್ನು ಕಳೆದುಕೊಳ್ಳುವ ಗಂಭೀರ ಅಪಾಯಕ್ಕೆ ಬಲಿಯಾಗಬಾರದು ಎಂದು ಅವರು ಸಲಹೆ ನೀಡಿದರು.
ವಕೀಲರಲ್ಲಿ ಕಲಿಕೆ ಪ್ರಕ್ರಿಯೆ ನಿರಂತರವಾಗಿರಬೇಕು ಮತ್ತು ಸದಾ ವಿದ್ಯಾರ್ಥಿಯಾಗಿರಬೇಕು. ವೃತ್ತಿಯಲ್ಲಿ ಮಾನವೀಯ ಮೌಲ್ಯಗಳನ್ನು ಎತ್ತಿ ಹಿಡಿಯಬೇಕು. ವಕೀಲ ವೃತ್ತಿಯು ಸಮಾಜವನ್ನು ಕಟ್ಟುವ ಕಲೆ ಮತ್ತು ಸಮಾಜ ವನ್ನು ನೆಲದ ಕಾನೂನಿನೊಳಗೆ ಉತ್ತಮವಾಗಿ ನಿರ್ಮಿಸಬೇಕು ಎಂದು ಅವರು ತಿಳಿಸಿದರು.
ಮುಖ್ಯ ಅತಿಥಿಗಳಾಗಿ ಕರ್ನಾಟಕ ಸರಕಾರದ ಅಡ್ವಕೇಟ್ ಜನರಲ್ ಕೆ.ಶಶಿ ಕಿರಣ್ ಶೆಟ್ಟಿ, ಉಡುಪಿ ಜಿಲ್ಲಾಧಿಕಾರಿ ಡಾ.ಕೆ. ವಿದ್ಯಾಕುಮಾರಿ ಮಾತನಾಡಿದರು. ಅಧ್ಯಕ್ಷತೆಯನ್ನು ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ಶಾಂತವೀರ ಶಿವಪ್ಪ ವಹಿಸಿದ್ದರು.
ನೂತನ ಜಿಲ್ಲಾ ಸರಕಾರಿ ವಕೀಲೆ ಮೇರಿ ಎ.ಆರ್.ಶ್ರೇಷ್ಠ, ನೂತನ ಅಪರ ಸರಕಾರಿ ವಕೀಲ ಭುವನೇಂದ್ರ ಸುವರ್ಣ ಅವರನ್ನು ಗೌರವಿಸಲಾಯಿತು. ಕ್ರೀಡಾ ಸ್ಪರ್ಧೆಯ ವಿಜೇತರಿಗೆ ಬಹುಮಾನ ವಿತರಿಸಲಾಯಿತು. ನ್ಯಾಯವಾದಿ ಸೀಮಾ ಭಾಸ್ಕರ್, ಸಂಘದ ಮಾಜಿ ಅಧ್ಯಕ್ಷ ಮಟ್ಟಾರು ರತ್ನಾಕರ ಹೆಗ್ಡೆ ಅತಿಥಿಗಳ ಪರಿಚಯ ಮಾಡಿದರು.
ವಕೀಲರ ಸಂಘದ ಅಧ್ಯಕ್ಷ ರೆನೋಲ್ಡ್ ಪ್ರವೀಣ್ ಕುಮಾರ್ ಸ್ವಾಗತಿಸಿದರು. ಪ್ರಧಾನ ಕಾರ್ಯದರ್ಶಿ ರಾಜೇಶ್ ಎ.ಆರ್. ವಂದಿಸಿದರು. ನ್ಯಾಯವಾದಿ ಸಹನಾ ಕುಂದರ್ ಕಾರ್ಯಕ್ರಮ ನಿರೂಪಿಸಿದರು.