×
Ad

ಡಿಜಿಟಲ್ ಮೀಡಿಯಾದ ವೈಭವೀಕರಣ ಪ್ರವೃತ್ತಿಗೆ ಮೂಗುದಾರ ಅಗತ್ಯ: ರಹೀಂ ಉಜಿರೆ

Update: 2023-12-06 18:58 IST

ಉಡುಪಿ, ಡಿ.6: ಆಧುನಿಕ ಡಿಜಿಟಲ್ ಮೀಡಿಯಾವನ್ನು ನಿರ್ಲಕ್ಷಿಸಲು ಸಾಧ್ಯವಿಲ್ಲ. ಕಾರಣ ಅದು ಭವಿಷ್ಯದ ಮಾಧ್ಯಮವಾಗಿ ರೂಪುಗೊಳ್ಳುತ್ತಿದೆ. ಆದರೆ ಡಿಜಿಟಲ್ ಮೀಡಿಯಾಗಳ ಅತಿಯಾದ ವೈಭವೀಕರಣ ಪ್ರವೃತ್ತಿ ಮತ್ತು ಅತಿರೇಕದ ಸುದ್ದಿ ಮತ್ತು ವರದಿಗಳಿಗೆ ಮೂಗುದಾರ ಅಗತ್ಯ ಎಂದು ಪತ್ರಕರ್ತ ರಹೀಂ ಉಜಿರೆ ಹೇಳಿದ್ದಾರೆ.

ಉಡುಪಿ ಎಂಜಿಎಂ ಕಾಲೇಜಿನ ಪತ್ರಿಕೋದ್ಯಮ ವಿಭಾಗದ ವಿದ್ಯಾರ್ಥಿಗಳೇ ನಡೆಸುವ ಮಾತಿನ ಮಂಟಪ ಕಾರ್ಯಕ್ರಮದಲ್ಲಿ ಅವರು ’ಮೊಬೈಲ್ ಜರ್ನಲಿಸಂ’ ಕುರಿತು ಉಪನ್ಯಾಸ ನೀಡಿದರು.

ಡಿಜಿಟಲ್ ಮೀಡಿಯಾ ಇತ್ತೀಚೆಗೆ ಸಾಕಷ್ಟು ಜನಪ್ರಿಯಗೊಳ್ಳುತ್ತಿದೆ. ಪತ್ರಿಕೆಗಳ ಓದುಗರು ಮತ್ತು ಟಿವಿ ಚಾನೆಲ್ ಗಳ ವೀಕ್ಷಕರು ಡಿಜಿಟಲ್ ಮೀಡಿಯಾದತ್ತ ಒಲವು ತೋರುತ್ತಿದ್ದಾರೆ. ಇನ್ನೊಂದೆಡೆ ಡಿಜಿಟಲ್ ಮೀಡಿಯಾಗಳು ಜನರ ಖಾಸಗಿ ಸಂಗತಿಗಳನ್ನು ವೈಭವೀಕರಣ ಮಾಡುತ್ತ, ಕೆಲವೊಮ್ಮೆ ಅಪಪ್ರಚಾರ ಮಾಡುತ್ತ ತಮ್ಮ ವಿಶ್ವಾಸಾರ್ಹತೆಯನ್ನೇ ಕಳೆದು ಕೊಳ್ಳುತ್ತಿದ್ದು, ಇಂತಹ ಸುದ್ದಿಗಳಿಗೆ ಕಡಿವಾಣ ಅಗತ್ಯ ಎಂದು ಅವರು ಅಭಿಪ್ರಾಯಪಟ್ಟರು.

ಅಧ್ಯಕ್ಷತೆಯನ್ನು ಪತ್ರಿಕೋದ್ಯಮ ವಿಭಾಗದ ಮುಖ್ಯಸ್ಥ ಸುಚಿತ್ ಕೋಟ್ಯಾನ್ ವಹಿಸಿದ್ದರು. ಉಪನ್ಯಾಸಕ ಮನೋಷ್ ಉಪಸ್ಥಿತರಿದ್ದರು. ಪತ್ರಿಕೋದ್ಯಮ ವಿದ್ಯಾರ್ಥಿನಿ ಲಕ್ಷ್ಮೀ ಕಾರ್ಯಕ್ರಮ ನಿರೂಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News