ಪರಿಸರ ರಕ್ಷಣೆಯಲ್ಲಿ ಪಿಐಎಲ್‌ಗೆ ಪ್ರಮುಖ ಪಾತ್ರ: ಗೌರವ ಬನ್ಸಾಲ್
ಉಡುಪಿ, ಡಿ.23: ಪರಿಸರದ ಸಂರಕ್ಷಣೆಯಲ್ಲಿ ದೇಶದ ಸುಪ್ರೀಂ ಕೋರ್ಟ್‌ನ ಮುಂದೆ ದಾಖಲಾಗುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಗಳು (ಪಿಐಎಲ್) ಪ್ರಮುಖ ಪಾತ್ರ ವಹಿಸುತ್ತವೆ ಎಂದು ಸರ್ವೋಚ್ಚ ನ್ಯಾಯಾಲಯದ ನ್ಯಾಯವಾದಿ ಗಳಾದ ಗೌರವ್ ಕುಮಾರ್ ಬನ್ಸಾಲ್ ಅಭಿಪ್ರಾಯಪಟ್ಟಿದ್ದಾರೆ.
ಕುಂಜಿಬೆಟ್ಟಿನಲ್ಲಿರುವ ವೈಕುಂಠ ಬಾಳಿಗಾ ಕಾನೂನು ಮಹಾವಿದ್ಯಾಲಯ, ಉಡುಪಿಯ ಮಾನವ ಹಕ್ಕು ಸಂರಕ್ಷಣಾ ಪ್ರತಿಷ್ಟಾನದ ಸಹಯೋಗದೊಂದಿಗೆ ಇಂದು ಕಾಲೇಜಿನಲ್ಲಿ ಆಯೋಜಿಸಿದ್ದ ‘ಪರಿಸರ ರಕ್ಷಣೆಯಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿಗಳ ಪಾತ್ರ’ ವಿಷಯದ ಮೇಲಿನ ವಿಚಾರ ಸಂಕಿರಣದಲ್ಲಿ ಭಾಗವಹಿಸಿ ಅವರು ಮಾತನಾಡುತಿದ್ದರು.
ದೇಶದ ಉಚ್ಛ ನ್ಯಾಯಾಲಯದ ಮುಂದೆ ಬಂದ ಇಂಥ ಅನೇಕ ಪ್ರಕರಣಗಳನ್ನು ಉಲ್ಲೇಖಿಸಿ ಮಾತನಾಡಿದ ಗೌರವ್ ಬನ್ಸಾಲ್, ಯುವ ವಕೀಲರು ಪರಿಸರದ ರಕ್ಷಣೆಗೆ ಸಾರ್ವಜನಿಕ ಹಿತಾಸಕ್ತಿ ಅರ್ಜಿಗಳನ್ನು ದಾಖಲಿಸಲು ಮುಂದೆ ಬಂದು ಪರಿಸರ ನಾಶಕ್ಕೆ ನಿಯಂತ್ರಣ ಹೇರಲು ಪ್ರಯತ್ನಿಸಬೇಕೆಂದು ಕರೆ ಕೊಟ್ಟರು.
ಮಾನವ ಹಕ್ಕು ರಕ್ಷಣಾ ಪ್ರತಿಷ್ಟಾನ ಉಡುಪಿಯ ಅಧ್ಯಕ್ಷರಾದ ಡಾ. ರವೀಂದ್ರನಾಥ್ ಶ್ಯಾನುಭೋಗ ಮಾತನಾಡುತ್ತಾ, ಯುವ ವಕೀಲರು ವಕೀಲ ವೃತ್ತಿಯನ್ನು ಹಣ ಸಂಪಾದನೆಗೆ ಮಾತ್ರ ಬಳಸದೇ ಸಮಾಜದ ಹಿತಾಸಕ್ತಿಯನ್ನು ಕಾಪಾಡಲು ಸಹ ಬಳಸಲು ಮುಂದೆ ಬರಬೇಕು ಎಂದು ಸಲಹೆ ನೀಡಿದರು.
ಕಾಲೇಜಿನ ಪ್ರಾಂಶುಪಾಲರಾದ ಪ್ರೊ.ರಘುನಾಥ್ ಕೆ.ಎಸ್. ಅಧ್ಯಕ್ಷತೆ ವಹಿಸಿದ್ದರು. ಕಾಲೇಜಿನ ನಿರ್ದೇಶಕರಾದ ಪ್ರೊ.(ಡಾ.) ನಿರ್ಮಲಾ ಕುಮಾರಿ ಕೆ. ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.
ಕಾರ್ಯಕ್ರಮದ ಸಂಯೋಜಕರಾದ ಅಮೋಘ ಫಾಡ್ಕರ್ ಮತ್ತು ಆನ್ಸಿ ಫ್ಲೋರಾ ಭಾಗವಹಿಸಿದ್ದರು. ವಿದ್ಯಾರ್ಥಿ ಅನುರಾಗ್ ಕಿಣಿ ಅತಿಥಿಗಳನ್ನು ಪರಿಚಯಿಸಿಕಾರ್ಯಕ್ರಮ ನಿರೂಪಿಸಿದರು. ಪ್ರತೀಕ್ ಕುಲಾಲ್ ವಂದಿಸಿದರು.