×
Ad

ಹಕ್ಕುಪತ್ರ ವಿತರಣೆಗೆ ಸಚಿವರನ್ನು ಕಾಯಬೇಡಿ: ಶಾಸಕ ಕಿರಣ್ ಕುಮಾರ್ ಕೊಡ್ಗಿ

Update: 2024-01-12 18:39 IST

ಕುಂದಾಪುರ: ಕಂದಾಯ ಇಲಾಖೆ ಮೂಲಕ ಮಂಜೂರಾಗುವ 94ಸಿ, 94ಸಿಸಿ ಹಕ್ಕುಪತ್ರಗಳ ವಿತರಣೆಗೆ ಸಚಿವರನ್ನು ಕಾಯಬೇಡಿ. ಸಾರ್ವಜನಿಕರು ಹಣಪಾವತಿಸಿ ಐದಾರು ತಿಂಗಳು ಕಾಯುತ್ತಿದ್ದು, ಶಾಸಕರು ಸೇರಿದಂತೆ ಯಾರನ್ನೂ ಕಾಯಬೇಡಿ. ಹಕ್ಕುಪತ್ರ ತಯಾರಾದ ಕೂಡಲೇ ಜನರಿಗೆ ಹಸ್ತಾಂತರಿಸಿ ಬಿಡಿ ಎಂದು ಕುಂದಾಪುರ ಶಾಸಕ ಕಿರಣ್ ಕುಮಾರ್ ಕೊಡ್ಗಿ ತಹಶೀಲ್ದಾರ್‌ಗೆ ಸೂಚಿಸಿದ್ದಾರೆ.

ಕುಂದಾಪುರದ ತಾಲೂಕು ಪಂಚಾಯತ್ ಸಭಾಂಗಣದಲ್ಲಿ ಬುಧವಾರ ನಡೆದ ತ್ರೈಮಾಸಿಕ ಕೆಡಿಪಿ ಸಭೆಯಲ್ಲಿ, 150 ಹಕ್ಕು ಪತ್ರಗಳು ಸಿದ್ಧವಾಗಿದ್ದರೂ ನೀಡದೇ ಇರಲು ಕಾರಣವೇನು ಎಂದು ಪ್ರಶ್ನಿಸಿದ್ದು ಇದಕ್ಕೆ ಉತ್ತರಿಸಿದ ತಹಶೀಲ್ದಾರ್ ಅವರು ಡಿಸಿಯವರು ಸಚಿವರಿಗೆ ಕಾಯಲು ಸೂಚಿಸಿದ್ದಾರೆ ಎಂದಾಗ, ಯಾರನ್ನೂ ಕಾಯುವ ಅವಶ್ಯಕತೆ ಇಲ್ಲ ಎಂದರು.

ಅನಿಯಮಿತ ವಿದ್ಯುತ್ ಕಡಿತವಾಗುತ್ತಿದ್ದು, ಅಧಿಕೃತ ಲೋಡ್ ಶೆಡ್ಡಿಂಗ್ ಮಾಡಲಾಗುತ್ತಿದೆಯೇ ಎಂದು ಮೆಸ್ಕಾಂನ್ನು ಪ್ರಶ್ನಿಸಿದ ಶಾಸಕರು, ಮೂರು ತಿಂಗಳಿಂದ ವಿದ್ಯುತ್ ಕಡಿತ ಅನಿಯಂತ್ರಿತವಾಗಿ ನಡೆಯುತ್ತಿದೆ. ವಿದ್ಯುತ್ ಬಳಸಬಾರದು ಎನ್ನುವುದು ನಿಮ್ಮ ಉದ್ದೇಶವೇ ಎಂದು ಖಾರವಾಗಿ ಪ್ರಶ್ನಿಸಿದರು.

ಮೆಸ್ಕಾಂನ ಕಾರ್ಯನಿರ್ವಾಹಕ ಎಂಜಿನಿಯರ್ ವಿಜಯ ಕುಮಾರ್ ಶೆಟ್ಟಿ, ಲೈನ್ ಸಮಸ್ಯೆ ಇರುವ ಕಾರಣ ಅಡಚಣೆ ಯಾಗುತ್ತಿದೆ. ಹಿರಿಯಡ್ಕ ಲೈನ್ ತುಂಬಾ ಹಳೆಯದಾಗಿದ್ದು ಹೊಸ ಲೈನ್ ಆದರೆ ಸಮಸ್ಯೆ ಆಗುವುದಿಲ್ಲ. ಹೆಗ್ಗುಂ-ಕುಂದಾಪುರ ಲೈನ್ ಆದರೆ ಪರ್ಯಾಯ ಲೈನ್ ದೊರೆತಂತಾ ಗುತ್ತದೆ. ಜಾಗದ ತಕರಾರು ಸಮಸ್ಯೆಯಿಂದ ಕಾಮಗಾರಿ ಬಾಕಿ ಆಗಿದೆ ಎಂದು ಉತ್ತರಿಸಿದರು.

ಶಾಲಾ ಕಾಲೇಜುಗಳ ಹಾಸ್ಟೆಲ್‌ಗಳಿಗೆ ಅರ್ಧ ವರ್ಷದವರೆಗೂ ದಾಖಲಾತಿ ಆಗುವ ಕುರಿತು ಶಾಸಕ ಕೊಡ್ಗಿ ಅಸಮಾಧಾನ ಸೂಚಿಸಿದರು. ಮೊದಲೇ ಈ ಬಗ್ಗೆ ಸಿದ್ಧತೆ ಮಾಡಿ, ಜೂನ್ ತಿಂಗಳಿನಿಂದಲೇ ಹಾಸ್ಟೆಲ್ ದೊರೆಯುವಂತೆ ಮಾಡಿ ಎಂದು ಸಮಾಜಕಲ್ಯಾಣ ಇಲಾಖೆ ಹಾಗೂ ಬಿಸಿಎಂ ಇಲಾಖೆಗೆ ಸಲಹೆ ನೀಡಿದರು. ಬಿಸಿಎಂನಲ್ಲಿ 1,458 ವಿದ್ಯಾರ್ಥಿಗಳಿಗೆ ಅವಕಾಶ ನೀಡಲಾಗಿದೆ ಎಂಬ ಮಾಹಿತಿಯನ್ನು ಸಭೆಗೆ ನೀಡಲಾಯಿತು.

ದಿನಕ್ಕೆ 7.5ಲಕ್ಷ ರೂ.ಆದಾಯ: ದಿನಕ್ಕೆ 20 ಸಾವಿರ ಮಹಿಳೆಯರು ಕೆಎಸ್ಸಾರ್ಟಿಸಿಯ ಕುಂದಾಪುರ ವಿಭಾಗದ ಬಸ್‌ಗಳಲ್ಲಿ ಸಂಚರಿಸುತಿದ್ದಾರೆ. ಇದರಲ್ಲಿ 98 ಮಾರ್ಗಸೂಚಿಯಲ್ಲಿ ಬಸ್‌ಗಳು ಓಡಾಡುತ್ತವೆ. ದಿನಕ್ಕೆ 20 ಸಾವಿರ ಮಹಿಳಾ ಶಕ್ತಿ ಟಿಕೆಟ್‌ಗಳ ಮೂಲಕ 7.5 ಲಕ್ಷ ರೂ. ಆದಾಯ ಬರುತ್ತಿದೆ. ವಿಭಾಗದಲ್ಲಿ ಬಸ್‌ಗಳ ಕೊರತೆಯಿದ್ದು, 10 ಬಸ್‌ಗಳ ಅಗತ್ಯವಿದೆ. 2 ಹೊಸ ಪರ್ಮಿಟ್‌ಗೆ ಬರೆಯಲಾಗಿದೆ ಎಂದು ಕೆಎಸಾರ್ಟಿಸಿ ಅಧಿಕಾರಿ ಮಾಹಿತಿ ನೀಡಿದರು.

ಬೈಂದೂರು ದರ್ಶನಕ್ಕೆ ಒಂದು ಬಸ್ ಕೇಳಿದ್ದು ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ ಅವರು ಒಂದು ಬಸ್ ಮಂಜೂರು ಮಾಡಿದ್ದಾಗಿ ಬೈಂದೂರು ಶಾಸಕ ಗುರುರಾಜ್ ಗಂಟಿಹೊಳೆ ಹೇಳಿದರು. ನಿರ್ದಿಷ್ಟ ಮಾರ್ಗವಾಗಿ ಹೋಗಬೇಕಾದ ಬಸ್ಸನ್ನು ಬದಲಾಯಿಸಬೇಡಿ ಎಂದು ಶಾಸಕ ಕೊಡ್ಗಿ ಹೇಳಿದರು.

ಕ್ಲಿನಿಕ್ ದಾಳಿಯಿಂದ ಪರಿಣಾಮ: ಬಿಎಎಂಎಸ್ ವೈದ್ಯರ ಕ್ಲಿನಿಕ್‌ಗಳ ಮೇಲೆ ಆರೋಗ್ಯ ಇಲಾಖೆಯಿಂದ ದಾಳಿ ನಡೆಸಲಾ ಗುತ್ತಿದೆ. ಕಾನೂನು ಬಾಹಿರವಾಗಿ ಯಾವುದನ್ನೂ ಮಾಡಿ ಎಂದು ನಾವು ಹೇಳುವುದಿಲ್ಲ. ಆದರೆ ಇದರಿಂದಾಗಿ ಅನೇಕ ಆಯುರ್ವೇದ ವೈದ್ಯರ ಕ್ಲಿನಿಕ್‌ಗಳು ಮುಚ್ಚಿದ್ದು ಇಡೀ ಊರಿಗೆ ವೈದ್ಯಾಲಯ ಇಲ್ಲದಂತಾಗಿದೆ. ಅಮಾಸೆಬೈಲಿನ ಮೂರೂ ಕ್ಲಿನಿಕ್‌ಗಳು ಮುಚ್ಚಿದ್ದು ದೂರದ ಸಿದ್ದಾಪುರಕ್ಕೆ ಹೋಗಬೇಕಾಗಿದೆ ಎಂದು ಕೊಡ್ಗಿ ತಿಳಿಸಿದರು.

ಕಠಿಣ ಕಾನೂನು ಜಾರಿಗೆ ತರುವಾಗ ಅದಕ್ಕೆ ಪೂರಕ ವ್ಯವಸ್ಥೆಯನ್ನೂ ಸರಕಾರ ಮಾಡಬೇಕು. ಅಂತಹ ಪ್ರದೇಶಕ್ಕೆ ಸರ ಕಾರಿ ವೈದ್ಯರನ್ನು ನೇಮಿಸಿ ಎಂದು ಶಾಸಕ ಕೊಡ್ಗಿ ಹೇಳಿದರು. ಸರಕಾರದ ನಿಯಮದಂತೆ ವೈದ್ಯರು ಯಾವ ಪ್ರಕಾರದಲ್ಲಿ ಕಲಿತು ನೋಂದಣಿ ಮಾಡಿರುತ್ತಾರೋ ಅದೇ ಪ್ರಕಾರದ ಔಷಧ ನೀಡಬೇಕು. ಇಲ್ಲದಿದ್ದರೆ ಅವರ ಮೇಲೆ ಕ್ರಮ ಕೈಗೊಳ್ಳಲಾಗುತ್ತದೆ ಎಂದು ತಾಲೂಕು ಆರೋಗ್ಯಾಕಾರಿ ಡಾ.ಪ್ರೇಮಾನಂದ ಹೇಳಿದರು.

ಕಾನೂನಿನ ಬಗ್ಗೆ ನೀವು ಹೇಳುತ್ತೀರಿ, ಜನರಿಗೆ ಸೇವೆ, ಸೌಲಭ್ಯದ ಕುರಿತು ನಾವು ಕೇಳುತ್ತಿದ್ದೇವೆ. ಯಾವುದಾದರೂ ಒಂದು ಮಾರ್ಗದಲ್ಲಿ ಪರಿಹಾರ ಒದಗಿಸಿ ಎಂದು ಶಾಸಕ ಗಂಟಿಹೊಳೆ ಹೇಳಿದರು.

ಕುಂದಾಪುರ ತಹಶೀಲ್ದಾರ್ ಶೋಭಾಲಕ್ಷ್ಮೀ, ಬೈಂದೂರು ತಹಶೀಲ್ದಾರ್ ಪ್ರದೀಪ್, ಕುಂದಾಪುರ ಇಒ ಪ್ರಶಾಂತ್ ವಿ.ರಾವ್ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News